ಬೆಂಗಳೂರು,ಜ.11- ತನಗೆ ಅರಣ್ಯ ಸಚಿವರು ಪರಿಚಯವಿದ್ದು ಉದ್ಯೋಗ ಕೊಡಿಸುವುದಾಗಿ ನಂಬಿಸಿ 6ಲಕ್ಷ ಹಣ ಪಡೆದು ವಂಚಿಸಿರುವ ವ್ಯಕ್ತಿ ವಿರುದ್ಧ ವಿಧಾನ ಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
2023ರಲ್ಲಿ ವೀರೇಶ್ ಎಂಬಾತ ಅಡವಿ ಎಂಬುವವರಿಗೆ ಪರಿಚಯವಾಗಿದ್ದು, ಅರಣ್ಯ ಇಲಾಖೆಯಲ್ಲಿ ಅರಣ್ಯ ವೀಕ್ಷಕರ ಮತ್ತು ಅರಣ್ಯ ರಕ್ಷಕರ ಹುದ್ದೆಗಳಿಗೆ ವಿವಿಧ ಜಿಲ್ಲೆಯಗಳಲ್ಲಿ ಅರ್ಜಿ ಕರೆದಿದ್ದು, ತನಗೆ ಅರಣ್ಯ ಸಚಿವರು ತುಂಬಾ ಆತ್ಮೀಯರಾಗಿದ್ದು, ಸರ್ಕಾರ ಹುದ್ದೆ ಕೊಡಿಸುವುದಾಗಿ ಅವರನ್ನು ನಂಬಿಸಿದ್ದಾನೆ.
ಈತನ ಮಾತನ್ನು ನಂಬಿದ ಪಿ.ಹೆಚ್.ಅಡವಿ(ರಾಣಿಬೆನ್ನೂರು) ಅವರು ತಮ ಮಕ್ಕಳು ಮತ್ತು ಸಹೋದರನ ಮಕ್ಕಳು ಮತ್ತು ಹೆಂಡತಿಯ ಅಕ್ಕನ ಮಗ ಸೇರಿ ಮೂವರಿಗೆ ಧಾರವಾಡ, ಶಿವ ಮೊಗ್ಗ ಮತ್ತು ಚಾಮರಾಜ ನಗರ ಜಿಲ್ಲೆಗಳಿಗೆ ಅರ್ಜಿ ಹಾಕಿಸಿದ್ದಾರೆ. ನಂತರ ವೀರೇಶ್‌ಗೆ ಮುಂಗಡವಾಗಿ 2ಲಕ್ಷದಂತೆ ಮೂವರಿಂದ ಒಟ್ಟು 6ಲಕ್ಷ ಹಣ ಕೊಡಬೇಕು ಎಂದು ಹೇಳಿ ವಿಕಾಸ ಸೌಧದ ಬಳಿ ಪೋನ್‌ಪೇಯಿಂದ 50ಸಾವಿರ ಹಣವನ್ನು ಪಡೆದಿದ್ದಾನೆ. ತದನಂತರದಲ್ಲಿ ನಗದು ರೂಪದಲ್ಲಿ ಉಳಿದ 2.50ಲಕ್ಷ ಹಣವನ್ನು ಮಾಹಿತಿ ಸೌಧದ ಬಳಿ ಪಡೆದಿದ್ದಾನೆ.
ಅಲ್ಲದೇ ಮತ್ತೆ 2ಲಕ್ಷ ಹಣ ಮತ್ತು ಪೋನ್ ಪೇ ಮೂಲಕ 20 ಸಾವಿರ ಹಾಗೂ 80 ಸಾವಿರ ಹಣವನ್ನು ಹಂತ ಹಂತವಾಗಿ ಪಡೆದುಕೊಂಡಿದ್ದಾನೆ. ಒಟ್ಟು 6ಲಕ್ಷ ಹಣವನ್ನು ಪಡೆದುಕೊಂಡಿದ್ದ ವಿರೇಶ್ ಒಂದು ವರ್ಷವಾದರೂ ಸರ್ಕಾರಿ ಉದ್ಯೋಗ ಕೊಡಿಸದೇ, ಹಣವನ್ನು ಹಿಂದಿರುಗಿಸದೇ ವಂಚಿಸಿದ್ದಾನೆ. ತಾವು ಮೋಸ ಹೋಗಿರುವುದಾಗಿ ಅರಿತು ಅಡವಿಯವರು ವಿಧಾನ ಸೌಧ ಪೊಲೀಸ್ ಠಾಣೆಗೆ ಆರೋಪಿ ವೀರೇಶ್ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.