ಗುಣಾ,(ಮಧ್ಯಪ್ರದೇಶದ) ಜ.12-ದೇಶದ ಎಲ್ಲಾ 543 ಲೋಕಸಭಾ ಕ್ಷೇತ್ರಗಳಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ತೆರೆಯಲಾಗುವುದು ಎಂದು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಅವರು ತಾವು ಪ್ರತಿನಿಧಿಸುವ ಸಂಸದೀಯ ಕ್ಷೇತ್ರವಾದ ಗುನಾದಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಈ ವರ್ಷ ಮಧ್ಯಪ್ರದೇಶದಲ್ಲಿ ಆರು ಹೊಸ ಪಾಸ್‌ಪೋರ್ಟ್ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಹೇಳಿದರು.
ಸೇವೆಗಳನ್ನು ವಿಸ್ತರಿಸುವ ಉದ್ದೇಶದಿಂದ ಪ್ರತಿ ಸಂಸದೀಯ ಕ್ಷೇತ್ರದಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಸ್ಥಾಪಿಸಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ. ಅಂಚೆ ಇಲಾಖೆಯು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಯೋಗದೊಂದಿಗೆ ಈ ನಿರ್ಣಯವನ್ನು ಸಾಕಾರಗೊಳಿಸಲು ಬದ್ಧವಾಗಿದ್ದೇವೆ ಎಂದು ಅವರು ಹೇಳಿದರು.
ದೇಶಾದ್ಯಂತ 6,000 ಅಂಚೆ ಕಚೇರಿಗಳನ್ನು ತೆರೆಯಲಾಗಿದೆ.ನಾವು ದೇಶದಲ್ಲಿ ಕೈಯಿಂದ ಪತ್ರಗಳನ್ನು ಬರೆಯುವ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸಬೇಕು ಏಕೆಂದರೆ ಅದು ಹೃದಯದ ನಿಜವಾದ ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ಅಂಚೆ ಕಚೇರಿ ಸೇವೆಗಳಲ್ಲಿ ಹಲವಾರು ತಾಂತ್ರಿಕ ಬದಲಾವಣೆಗಳು ನಡೆದಿವೆ ಎಂದು ಸಿಂಧಿಯಾ ತಿಳಿಸಿದರು.
ಗುನಾದ ಜನರು ತಮ ಪಾಸ್‌ಪೋರ್ಟ್ ಮಾಡಲು ಭೋಪಾಲ್ ಮತ್ತು ಗ್ವಾಲಿಯರ್‌ಗೆ ಹೋಗಬೇಕಾಗಿತ್ತು, ಆದರೆ ಪಾಸ್‌ಪೋರ್ಟ್ ಸೇವಾ ಕೇಂದ್ರವು ಅವರ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ಅವರು ಹೇಳಿದರು.