ಬೆಂಗಳೂರು,ಜ.12- ಗೋವುಗಳಿಗೆ ಪೂಜೆ ಮಾಡಿ ಸಂಭ್ರಮಿಸುವ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲೇ ಕಿಡಿಗೇಡಿಗಳು ಮೂರು ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆ ನಗರದ ಚಾಮರಾಜಪೇಟೆಯ ಓಲ್‌್ಡ ಪೆನ್ಷನ್ ಮೊಹಲ್ಲಾದಲ್ಲಿ ನಡೆದಿದೆ.
ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪ್ರಕ್ಷುಬ್ದ ವಾತವರಣ ನಿರ್ಮಾಣವಾಗಿದ್ದು, ಮುಂಜಾಗೃತಾ ಕ್ರಮವಾಗಿ ಸ್ಥಳೀಯ ಪೊಲೀಸರ ಜತೆಗೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಕಾಟನ್ ಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ವಿನಾಯಕ ಚಿತ್ರಮಂದಿರದ ಹಿಂಭಾಗದಲ್ಲಿರುವ ಓಲ್ಡ್ ಪೆನ್ಷನ್ ಮೊಹಲ್ಲಾ ರಸ್ತೆಯಲ್ಲಿ ಇಂತಹ ಧಾರಣ ಕೃತ್ಯ ನಡೆದಿದೆ.
ಕಳೆದ ರಾತ್ರಿ ಸ್ಥಳೀಯ ನಿವಾಸಿ ಕರ್ಣ ಎಂಬುವರು ಸಾಕಿದ್ದ ಮೂರು ಸೀಮೆ ಹಸುಗಳ ಕೆಚ್ಚಲುಗಳನ್ನು ಕಿಡಿಗೇಡಿಗಳು ಬ್ಲೇಡ್‌ನಿಂದ ಕೊಯ್ದು ಪರಾರಿಯಾಗಿದ್ದಾರೆ. ಹಸುಗಳ ಕೆಚ್ಚಲಿನಿಂದ ರಕ್ತ ಸುರಿಯುತ್ತಿರುವುದನ್ನುಕಂಡ ದಾರಿಹೋಕರು ಹಸುಗಳ ಮಾಲೀಕ ಕರ್ಣ ಅವರಿಗೆ ವಿಷಯ ತಿಳಿಸಿದ್ದು, ತಕ್ಷಣ ಪಶುವೈದ್ಯರನ್ನು ಕರೆಸಿ ಹಸುಗಳಿಗೆ ಚಿಕಿತ್ಸೆ ಕೊಡಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಇಂದು ಮುಂಜಾನೆ ಚಾಮರಾಜಪೇಟೆಯ ವಿನಾಯಕ ಚಿತ್ರಮಂದಿರದ ಬಳಿ ಪ್ರಕ್ಷುಬ್ಧ ವಾತಾವರಣ ಉಂಟಾಗಿತ್ತು. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಚಿಕ್ಕಪೇಟೆ ಉಪವಿಭಾಗದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.ಸ್ಥಳಕ್ಕೆ ಸಂಸದ ಪಿ.ಸಿ.ಮೋಹನ್, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮತ್ತಿತರ ಬಿಜೆಪಿ ನಾಯಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ನಡೆದಿರುವ ಸ್ಥಳ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಕೆಎಸ್‌ಆರ್‌ಪಿ, ಸಿಎಆರ್ ತುಕಡಿಗಳ ಜೊತೆಗೆ ಒಬ್ಬರು ಎಸಿಪಿ, ಆರು ಮಂದಿ ಇನ್ಸ್ ಪೆಕ್ಟರ್‌ಗಳು ಹಾಗೂ ಸಾಕಷ್ಟು ಸಂಖ್ಯೆಯ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.ಘಟನೆ ಕುರಿತಂತೆ ಹಸುಗಳ ಮಾಲೀಕ ಕರ್ಣ ಅವರು ಕಾಟನ್‌ಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಕೆಚ್ಚಲು ಕೊಯ್ದು ಪರಾರಿಯಾಗಿರುವ ಕಿಡಿಗೇಡಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಹಸುವಿನ ಮಾಲಿಕನಿಗೆ ಒಂದು ಲಕ್ಷ ರೂ.ಗಳ ಪರಿಹಾರ ಘೋಷಣೆ :
ಚಾಮರಾಜಪೇಟೆಯ ವಿನಾಯಕನಗರದಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಸುವಿನ ಮಾಲಿಕನಿಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಒಂದು ಲಕ್ಷ ರೂ.ಗಳ ಪರಿಹಾರ ಘೋಷಣೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಬಿಜೆಪಿ ನಾಯಕರೊಂದಿಗೆ ಭೇಟಿ ನೀಡಿದ್ದ ಅವರು, ಹಸುವಿನ ಮಾಲಿಕ ಕರ್ಣ ಕುಟುಂಬಕ್ಕೆ ವೈಯಕ್ತಿಕವಾಗಿ ಒಂದು ಲಕ್ಷ ರೂ. ಪರಿಹಾರವನ್ನು ಘೋಷಣೆ ಮಾಡಿದರು. ದುಷ್ಕರ್ಮಿಗಳಿಂದ ಹಸುಗಳು ತೀವ್ರವಾಗಿ ಬಳಲುತ್ತಿದ್ದು, ತಕ್ಷಣವೇ ಪಶುಸಂಗೋಪನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆಯನ್ನು ಅವರು ಮಾಡಿದರು.