ಬೆಂಗಳೂರು,ಜ.12- ವೇದಾ ಭ್ಯಾಸ ಮಾಡಲು ನೆರೆಯ ಆಂಧ್ರ ಪ್ರದೇಶದಿಂದ ನಗರಕ್ಕೆ ಬಂದಿದ್ದ 12 ವರ್ಷದ ಬಾಲಕ ಹುಟ್ಟು ಹಬ್ಬದ ದಿನವೇ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಲೆಯ ಮೇಲೆ ಕ್ಯಾಂಟರ್ ಹರಿದು ದಾರು ಣವಾಗಿ ಮೃತಪಟ್ಟಿರುವ ಘಟನೆ ಹೆಣ್ಣೂರು ಸಂಚಾರಿ ಪೊಲೀಸ್ ಠಾಣೆ ವ್ಯಾಪಿ ಯಲ್ಲಿ ರಾತ್ರಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟಿರುವ ದುರ್ದೈವಿ ಬಾಲಕನನ್ನು ಚಿತ್ತೂರಿನಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಭಾನು ತೇಜ (12) ಎಂದು ಗುರುತಿಸಲಾಗಿದೆ. ಈತ ಹೊರಮಾವಿನಲ್ಲಿರುವ ತನ್ನ ಅಕ್ಕನ ಮನೆಗೆ ವೇದಾಭ್ಯಾಸ ಮಾಡಲು ಬಂದಿದ್ದ ಭಾನು ತೇಜ ಪ್ರತಿನಿತ್ಯ ಆರ್ಟಿನಗರಕ್ಕೆ ತೆರಳಿ ವೇದಾಭ್ಯಾಸ ಮುಗಿಸಿ ವಾಪಸ್ ಆಗುತ್ತಿದ್ದ.
ನಿನ್ನೆ ರಾತ್ರಿ 11.30 ರ ಸಮಯದಲ್ಲಿ ಭಾನುತೇಜ ತನ್ನ ಸಂಬಂಧಿ ಚಕ್ರವರ್ತಿ ಎಂಬುವರ ಬೈಕಿನಲ್ಲಿ ತೆರಳುತ್ತಿದ್ದಾಗ ಹೆಣ್ಣೂರು ಬಂಡೆ ಮುಖ್ಯ ರಸ್ತೆಯಲ್ಲಿರುವ ಕ್ಲಾಸಿಕ್ ರಾಯಲ್ ಗಾರ್ಡನ್ ಮುಂಭಾಗ ಹಿಂದಿನಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕೆಳಗೆ ಬಿದ್ದ ಭಾನುತೇಜನ ತಲೆಯ ಮೇಲೆ ಕ್ಯಾಂಟರ್ ಚಕ್ರ ಹರಿದು ಸ್ಥಳದಲ್ಲೇ ಆತ ಮೃತಪಟ್ಟಿದ್ದಾನೆ.
ಘಟನೆಯಲ್ಲಿ ಬೈಕ್ ಸವಾರ ಚಕ್ರವರ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಹೆಣ್ಣೂರು ಸಂಚಾರಿ ಠಾಣೆ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.