ನವದೆಹಲಿ,ಜ.12- ಮಹಿಳೆ ತನ್ನ ಪತಿಯೊಂದಿಗೆ ವಾಸಿಸಲು ನಿರಾಕರಿಸಲು ಸರಿಯಾದ ಕಾರಣಗಳಿದ್ದರೆ, ಪತಿಯಿಂದ ಜೀವನಾಂಶ ಪಡೆಯಲು ಅರ್ಹಳು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ಕುಮಾರ್ ಅವರ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಸಂಗಾತಿಯೊಂದಿಗೆ ಸಹಬಾಳ್ವೆ ಮಾಡಬೇಕೆಂಬ ತೀರ್ಪನ್ನು ಪಾಲಿಸದ ನಂತರವೂ ಸಹ ಮಹಿಳೆಗೆ ತನ್ನ ಪತಿಯಿಂದ ಜೀವನಾಂಶದ ಹಕ್ಕನ್ನು ನೀಡಬಹುದು ಎಂದು ತೀರ್ಪು ನೀಡಿದೆ.
ಜಾರ್ಖಂಡ್ ವಿಚ್ಛೇದಿತ ದಂಪತಿಗಳು 2014ರ ಮೇ 1ರಂದು ವಿವಾಹವಾಗಿದ್ದರು. ಆದರೆ ಆಗಸ್ಟ್ 2015ರಲ್ಲಿ ಬೇರ್ಪಟ್ಟ ಪ್ರಕರಣದಲ್ಲಿ ಪೀಠವು ಅಧಿಕೃತ ತೀರ್ಪು ನೀಡಿತು. ವೈವಾಹಿಕ ಹಕ್ಕುಗಳ ಮರುಸ್ಥಾಪನೆಗಾಗಿ ಪತಿ ರಾಂಚಿಯ ಕೌಟುಂಬಿಕ ನ್ಯಾಯಾಲಯದ ಮೊರೆ ಹೋದರು ಮತ್ತು 2015ರ ಆಗಸ್ಟ್ನಲ್ಲಿ ಆಕೆ ಗಂಡನ ಮನೆಯನ್ನು ತೊರೆದಿದ್ದಳು.
ಅವಳನ್ನು ಮರಳಿ ಕರೆತರಲು ಪುನರಾವರ್ತಿತ ಪ್ರಯತ್ನಗಳ ಹೊರತಾಗಿಯೂ ನಂತರ ಹಿಂತಿರುಗಲಿಲ್ಲ ಎಂದು ಪತಿ ಹೇಳಿದ್ದ. ಕಾರು ಖರೀದಿಸಲು 5 ಲಕ್ಷ ರೂ. ಹಣ ಕೊಡಬೇಕು ಎಂದು ಪತಿ ಪೀಡಿಸಿ ಚಿತ್ರಹಿಂಸೆ ನೀಡುತ್ತಿದ್ದ ಎಂದು ಪತ್ನಿ ಹೇಳಿದ್ದಾಳೆ. ಆತನಿಗೆ ವಿವಾಹೇತರ ಸಂಬಂಧವಿದ್ದು, 2015ರ ಜನವರಿ 1ರಂದು ತನಗೆ ಗರ್ಭಪಾತವಾಗಿತ್ತು. ಆದರೆ ಪತಿ ತನ್ನನ್ನು ನೋಡಲು ಬರಲಿಲ್ಲ ಎಂದು ಹೇಳಿದ್ದಾಳೆ.
ಈ ಮೊದಲು ನನಗೆ ವಾಷ್ರೂಂ ಬಳಸಲು ಕೂಡ ಅನುಮತಿ ಇರಲಿಲ್ಲ, ಹಾಗೆಯೇ ಮನೆಯ ಗ್ಯಾಸ್ ಬಳಸಲು ಅನುಮತಿ ನೀಡಿದರೆ ಮನೆಗೆ ಬರುತ್ತೇನೆ ಎಂದು ಹೇಳಿದ್ದಳು. ಕೌಟುಂಬಿಕ ನ್ಯಾಯಾಲಯವು 2022ರಲ್ಲಿ ಪತಿಯೊಂದಿಗೆ ವಾಸಿಸುವಂತೆ ಆದೇಶ ನೀಡಿತ್ತು. ಆಕೆ ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಿದ್ದಳು. ಕುಟುಂಬ ನ್ಯಾಯಾಲಯವು ತಿಂಗಳಿಗೆ 10,000 ರೂ ಜೀವನಾಂಶವನ್ನು ಪತ್ನಿಗೆ ಆಕೆಯ ಪತಿಯಿಂದ ಪಾವತಿಸಲು ಆದೇಶಿಸಿದೆ.
ಆದರೆ ಜೀವನಾಂಶ ಕೊಡಬೇಕು. ಆಕೆ ಮನೆಗೆ ಬರಬೇಕೆಂದು ಕೋರ್ಟ್ ತೀರ್ಪು ನೀಡಿದ್ದರೂ ಆಕೆ ಮನೆಗೆ ಬಂದಿಲ್ಲ ಎಂದು ಪತಿ ಹೈಕೋರ್ಟ್ ಮೆಟ್ಟಿಲೇರಿದ್ದ. ಪತ್ನಿ ಜೀವನಾಂಶ ಪಡೆಯಲು ಅರ್ಹಳಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಆದೇಶದಿಂದ ನೊಂದ ಪತ್ನಿ ಸುಪ್ರೀಂಕೋರ್ಟ್ನಲ್ಲಿ ಈ ಆದೇಶವನ್ನು ಪ್ರಶ್ನಿಸಿದ್ದು, ಪತ್ನಿ ದೂರವಿದ್ದರೂ ಜೀವನಾಂಶ ಪಾವತಿಸಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿದೆ.