ಬೆಂಗಳೂರು,ಜ.13- ಹಸುಗಳ ಕೆಚ್ಚಲು ಕೊಯ್ದು ಕ್ರೌರ್ಯ ಮೆರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಟನ್‌ಪೇಟೆ ಠಾಣೆ ಪೊಲೀಸರು ಬಿಹಾರ ಮೂಲದ ಆರೋಪಿಯೊಬ್ಬನನ್ನು ತಡರಾತ್ರಿ ಬಂಧಿಸಿದ್ದಾರೆ.
ಬಿಹಾರದ ಚಂಪರಣ್ ಮೂಲದ ಸೈಯದ್ ನಸ್ರು (30) ಬಂಧಿತ ಆರೋಪಿ. ಈತ ವಿನಾಯಕ ನಗರದಲ್ಲಿ ಪ್ಲಾಸ್ಟಿಕ್ ಹಾಗೂ ಬಟ್ಟೆ ಹೊಲೆಯುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು.
ಚಾಮರಾಜಪೇಟೆಯ ವಿನಾಯಕನಗರದ ಓಲ್ಡ್ ಪೆನ್ಷನ್ ಮೊಹಲ್ಲಾದ ಕರ್ಣ ಎಂಬುವರು ಆರು ವರ್ಷಗಳಿಂದ ಹಸು ಸಾಕುತ್ತಿದ್ದಾರೆ. ಮೊನ್ನೆ ರಾತ್ರಿ ಕಿಡಿಗೇಡಿಗಳು ಇವರಿಗೆ ಸೇರಿದ ಮೂರು ಹಸುಗಳ ಕೆಚ್ಚಲನ್ನು ಬ್ಲೇಡ್‌ನಿಂದ ಕತ್ತರಿಸಿ ಕ್ರೌರ್ಯ ಮೆರೆದಿದ್ದಲ್ಲದೆ ಹಸುಗಳ ಕಾಲಿಗೆ ಬ್ಲೇಡ್‌ನಿಂದ ಇರಿದು ವಿಕೃತಿ ಮೆರೆದಿದ್ದನು. ರಾತ್ರಿಯಿಡೀ ಈ ಮೂಖಜೀವಿಗಳು ನೋವಿನಲ್ಲಿ ನರಳಾಡಿವೆ.
ನಿನ್ನೆ ಬೆಳಿಗ್ಗೆ ಹಸುಗಳ ಮಾಲೀಕ ಕರ್ಣ ಅವರು ಗಮನಿಸಿ ತಕ್ಷಣ ಕಾಟನ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆ ರಸ್ತೆಯ ಸುತ್ತಮುತ್ತಲಿನಲ್ಲಿರುವ ಸಿಸಿ ಕ್ಯಾಮರಗಳ ದೃಶ್ಯಾವಳಿಗಳನ್ನು ಆಧರಿಸಿ ಘಟನಾ ಸ್ಥಳದಿಂದ 50 ಮೀಟರ್ ಅಂತರದಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಸೈಯ್ಯದ್ ನಸ್ರುನನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕ್ಕಪೇಟೆ ಉಪವಿಭಾಗದ ಎಸಿಪಿ ರಮೇಶ್ ಅವರ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಪೊಲೀಸರ ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ತಡರಾತ್ರಿ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕುಡಿದ ಮತ್ತಿನಲ್ಲಿ ಕೃತ್ಯ ಎಸಗಿರುವುದಾಗಿ ಹೇಳಿದ್ದಾನೆ.
ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ :
ಗಂಭೀರ ಗಾಯಗೊಂಡಿರುವ ಮೂರು ಹಸುಗಳಿಗೆ ಚಾಮರಾಜಪೇಟೆಯ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಸದ್ಯಕ್ಕೆ ಚೇತರಿಸಿಕೊಳ್ಳುತ್ತಿವೆ.
ಪಶು ಆಸ್ಪತ್ರೆ ಕಬ್ಜಗೆ ಯತ್ನ :
ಚಾಮರಾಜಪೇಟೆಯಲ್ಲಿರುವ ಪಶು ಆಸ್ಪತ್ರೆಯನ್ನು ಕಾಣದ ಕೈಗಳು ಕಬ್ಜ ಮಾಡಲು ಮುಂದಾಗಿದ್ದರು. ಆ ಸಂದರ್ಭದಲ್ಲಿ ನಾನೂ ಸೇರಿದಂತೆ ಸುತ್ತಮುತ್ತಲಿನ ಹಸುಗಳ ಮಾಲೀಕರು ಹಸುಗಳೊಂದಿಗೆ ಆಸ್ಪತ್ರೆ ಮುಂದೆ ಪ್ರತಿಭಟನೆ ಮಾಡಿ ಪಶು ಆಸ್ಪತ್ರೆಯನ್ನು ಉಳಿಸಿಕೊಂಡಿದ್ದೆವು. ಹಾಗಾಗಿ ಇದನ್ನು ಸಹಿಸದ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ ಎಂದು ಕರ್ಣ ಆರೋಪಿಸಿದ್ದಾರೆ.
ಖಂಡನೆ :
ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಹಿಂದೂಪರ ಸಂಘಟನೆ ಮುಖಂಡರು ವಿಪಕ್ಷ ನಾಯಕ ಆರ್.ಅಶೋಕ್, ಸಂಸದ ಪಿ.ಸಿ.ಮೋಹನ್, ಎಂಎಲ್‌ಸಿ ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಘಟನೆಯನ್ನು ಖಂಡಿಸಿ ಹಸುಗಳ ಮಾಲೀಕ ಕರ್ಣನಿಗೆ ಸಾಂತ್ವಾನ ಹೇಳಿದ್ದಾರೆ.
ಪರಿಹಾರ :
ವಿಪಕ್ಷ ನಾಯಕ ಅಶೋಕ್‌ರವರು ವೈಯಕ್ತಿಕವಾಗಿ ಕರ್ಣನಿಗೆ 1 ಲಕ್ಷ ರೂ. ಪರಿಹಾರ ಕೊಡುವುದಾಗಿ ಘೋಷಣೆ ಮಾಡಿದ್ದಾರೆ.
ಇದು ಒಬ್ಬನ ಕೃತ್ಯವಲ್ಲ :
ಹೆಚ್ಚು ಹಾಲು ಕೊಡುವ ಹಸುಗಳನ್ನೇ ಹುಡುಕಿ ಕೆಚ್ಚಲು ಕೊಯ್ದಿರುವುದು ಗಮನಿಸಿದರೆ ಇದು ಒಬ್ಬನ ಕೃತ್ಯವಲ್ಲ. ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂದು ಗೋವಿನ ಮಾಲೀಕ ಕರ್ಣ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಬಂಧಿಸಿರುವ ಆರೋಪಿ ಮಾನಸಿಕ ಅಸ್ವಸ್ಥನಲ್ಲ, ಆತ ಹುಡುಕಿ ಹುಡುಕಿ ಹೆಚ್ಚು ಹಾಲು ಕೊಡುವ ಹಸುಗಳ ಕೆಚ್ಚಲು ಕೊಯ್ದಿದ್ದಾನೆ. ಆತನಿಗೆ ಕರುಣೆಯೇ ಇಲ್ಲ ಎಂದರು. ಪೊಲೀಸರು ಆರೋಪಿಗೆ ಶಿಕ್ಷೆ ಕೊಡಬೇಕು, ನನಗೆ ನ್ಯಾಯ ಒದಗಿಸಿಕೊಡಬೇಕೆಂದು ಅವರು ಅವಲತ್ತುಕೊಂಡಿದ್ದಾರೆ.