ಜೆಡಿಎಸ್ ಬೆಳ್ಳಿ ಹಬ್ಬದ ಹಿನ್ನೆಲೆಯಲ್ಲಿ ಹಾಸನದಲ್ಲಿ ಆಯೋಜಿಸಲಾಗಿದ್ದ ಬೃಹತ್ ಜನತಾ ಸಮಾವೇಶ ಕೇವಲ ಪಕ್ಷದ ಕಾರ್ಯಕ್ರಮವಲ್ಲ, ಅದು ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ ತನ್ನ ಅಸ್ತಿತ್ವ, ಶಕ್ತಿ ಮತ್ತು ಭವಿಷ್ಯದ ರಾಜಕೀಯ ದಿಕ್ಕನ್ನು ಘೋಷಿಸಿದ ವೇದಿಕೆಯಾಗಿ ಪರಿಣಮಿಸಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಂದ ಆರಂಭಿಸಿ ಯುವ ನಾಯಕ ನಿಖಿಲ್ ಕುಮಾರಸ್ವಾಮಿವರೆಗೆ ಎಲ್ಲ ನಾಯಕರ ಭಾಷಣಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ರಾಜಕೀಯ ಸಂದೇಶ ನೀಡುವಂತಿದ್ದವು.
ದೇವೇಗೌಡರ ಭಾಷಣದಲ್ಲಿ ಆತಗೌರವ, ಹೋರಾಟ ಮತ್ತು ರಾಜಕೀಯ ಅನುಭವಗಳ ಮಿಶ್ರಣ ಸ್ಪಷ್ಟವಾಗಿ ಕಂಡುಬಂತು. 1962ರಿಂದ ಆರಂಭವಾದ ತಮ ರಾಜಕೀಯ ಪಯಣವನ್ನು ನೆನಪಿಸಿಕೊಂಡ ಅವರು, ನನ್ನನ್ನು ಸೋಲಿಸಲು ಯತ್ನಿಸಿದವರನ್ನೇ ಮೆಟ್ಟಿ ನಿಂತು ಲೋಕಸಭೆಗೆ ಹೋದೆ ಎಂಬ ಹೇಳಿಕೆಯ ಮೂಲಕ ಕಾರ್ಯಕರ್ತರಲ್ಲಿ ಹೋರಾಟದ ಮನೋಭಾವವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನ ಮಾಡಿದರು.
ಇದು ಕಾಂಗ್ರೆಸ್‌ಗೆ ನೇರ ಎಚ್ಚರಿಕೆಯ ಜೊತೆಗೆ, ಜೆಡಿಎಸ್ ಕಾರ್ಯಕರ್ತರಿಗೆ ಪಕ್ಷ ಇನ್ನೂ ಮುಗಿದಿಲ್ಲ ಎಂಬ ಸ್ಪಷ್ಟ ಸಂದೇಶವೂ ಆಗಿತ್ತು. ಗಾಲಿಕುರ್ಚಿಯಲ್ಲಿ ರ್ಯಾಂಪ್ ಮೂಲಕ ವೇದಿಕೆಗೆ ಆಗಮಿಸಿದ ದೃಶ್ಯವೂ ರಾಜಕೀಯವಾಗಿ ಸಂಕೇತಾತಕವಾಗಿದ್ದು, ವಯಸ್ಸು ಮತ್ತು ಆರೋಗ್ಯದ ನಡುವೆಯೂ ಹೋರಾಟದ ಹಠವನ್ನೇ ಪ್ರತಿಬಿಂಬಿಸಿತು.
ಕಾಂಗ್ರೆಸ್ ವಿರುದ್ಧ ತೀವ್ರ ಟೀಕೆ: ಸಮಾವೇಶದ ಪ್ರಮುಖ ಅಂಶವೆಂದರೆ ಕಾಂಗ್ರೆಸ್ ಸರ್ಕಾರದ ವಿರುದ್ಧದ ಏಕಸ್ವರ ಟೀಕೆ. ಜೆಡಿಎಸ್ ನಾಯಕರು ಕಾಂಗ್ರೆಸ್ ಆಡಳಿತವನ್ನು ಶೂನ್ಯ ಸಾಧನೆ, ಅಭಿವೃದ್ಧಿ ಸ್ಥಗಿತ ಎಂದು ಬಣ್ಣಿಸಿದರು. ವಿಶೇಷವಾಗಿ ಹಾಸನ ಜಿಲ್ಲೆಗೆ ಕಾಂಗ್ರೆಸ್ ನೀಡಿದ ಕೊಡುಗೆ ಏನು ಎಂಬ ಪ್ರಶ್ನೆಯನ್ನು ಮತ್ತೆ ಎತ್ತಿ ಹಿಡಿಯಲಾಗಿದೆ. ಇದು ಮುಂದಿನ ದಿನಗಳಲ್ಲಿ ಸ್ಥಳೀಯ ರಾಜಕಾರಣದಲ್ಲಿ ಕಾಂಗ್ರೆಸ್ ವಿರುದ್ಧ ಅಸಮಾಧಾನ ಮೂಡಿಸಲು ಜೆಡಿಎಸ್ ರೂಪಿಸುತ್ತಿರುವ ತಂತ್ರದ ಭಾಗವೆಂದು ಹೇಳಬಹುದು.
ಕುಮಾರಸ್ವಾಮಿಮುಖ್ಯಮಂತ್ರಿ ಅಭ್ಯರ್ಥಿ?
ಸಮಾವೇಶದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಪಾತ್ರ ಕೇವಲ ತಮ ಸಚಿವ ಸ್ಥಾನದ ಇಲಾಖೆಗೆ ಸೀಮಿತವಾಗಿರಲಿಲ್ಲ. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಕುಮಾರಸ್ವಾಮಿ ಅವರನ್ನು ಮತ್ತೊಮೆ ಮುಖ್ಯಮಂತ್ರಿ ಆಗಿ ನೋಡಬೇಕಿದೆ ಎಂದು ಹೇಳಿದ್ದು, 2028ರ ವಿಧಾನಸಭಾ ಚುನಾವಣೆಗೆ ಜೆಡಿಎಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಪರೋಕ್ಷವಾಗಿ ಘೋಷಿಸಿದಂತಾಗಿದೆ.
ಇದು ಪಕ್ಷದ ಒಳಗಿನ ಗೊಂದಲಗಳನ್ನು ತೊಡೆದು ಹಾಕುವ ಪ್ರಯತ್ನವಾಗಿದ್ದು, ಕಾರ್ಯಕರ್ತರಲ್ಲಿ ಸ್ಪಷ್ಟ ನಾಯಕತ್ವದ ಭಾವನೆ ಮೂಡಿಸಲು ಸಹಾಯಕವಾಗಲಿದೆ.
ನಿಖಿಲ್ ಕುಮಾರಸ್ವಾಮಿ ಉತ್ತರಾಧಿಕಾರಿ : ಯುವ ನಾಯಕ ನಿಖಿಲ್ ಕುಮಾರಸ್ವಾಮಿಯ ಭಾಷಣವು ಭವಿಷ್ಯದ ಜೆಡಿಎಸ್ ರೂಪು-ರೇಷೆಗಳತ್ತ ಗಮನ ಸೆಳೆಯಿತು. ಪ್ರಾದೇಶಿಕ ಪಕ್ಷ ಇಂದಿನ ಪರಿಸ್ಥಿತಿಯಲ್ಲಿ ಗಟ್ಟಿಯಾಗಿ ನಿಲ್ಲುವುದು ಕಷ್ಟಕರ ಎಂಬ ಅವರ ಹೇಳಿಕೆ, ವಾಸ್ತವಿಕ ರಾಜಕೀಯ ಅಂಶವನ್ನು ಒಪ್ಪಿಕೊಂಡಂತಿದೆ. ಆದರೆ ಅದೇ ವೇಳೆ, ನಿಷ್ಠಾವಂತ ಕಾರ್ಯಕರ್ತರ ಶಕ್ತಿಯೇ ಜೆಡಿಎಸ್‌ನ ಬಲ ಎಂದು ಒತ್ತಿ ಹೇಳುವ ಮೂಲಕ ಪಕ್ಷ ಸಂಘಟನೆಗೆ ಆದ್ಯತೆ ನೀಡಿದರು.
ಇದು ನಿಖಿಲ್ ತಮನ್ನು ಕೇವಲ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೀಮಿತಗೊಳಿಸದೇ, ಭವಿಷ್ಯದ ಪ್ರಮುಖ ನಾಯಕನಾಗಿ ಸ್ಥಾಪಿಸಿಕೊಳ್ಳುವ ರಾಜಕೀಯ ಪ್ರಯತ್ನವೆಂದು ವಿಶ್ಲೇಷಿಸಲಾಗುತ್ತಿದೆ.
ಜನಸಾಗರ: ಸಮಾವೇಶಕ್ಕೆ ನಿರೀಕ್ಷೆಗೂ ಮೀರಿ ಜನರು ಆಗಮಿಸಿರುವುದು ಜೆಡಿಎಸ್‌ಗೆ ಆತವಿಶ್ವಾಸ ಮೂಡಿಸಿದಂತಾಗಿದೆ. ಆದರೆ, ಇದನ್ನು ಎರಡು ರೀತಿಯಲ್ಲಿ ನೋಡಬಹುದು.
ಒಂದೆಡೆ, ಹಾಸನ ಜೆಡಿಎಸ್‌ನ ಭದ್ರಕೋಟೆಯಾಗಿ ರುವುದರಿಂದ ಈ ಜನಸಾಗರ ಸಹಜ ಎನ್ನುವ ವಾದವಿದೆ. ಇನ್ನೊಂದೆಡೆ, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೇರಿಸುವುದು ಪಕ್ಷದ ಸಂಘಟನಾ ಶಕ್ತಿಯನ್ನು ಸಾಬೀತುಪಡಿಸುತ್ತದೆ ಎಂಬ ಅಭಿಪ್ರಾಯವೂ ಇದೆ.
ಮುಂದಿನ ರಾಜಕೀಯ ದಾರಿ: ಈ ಜನತಾ ಸಮಾವೇಶದಿಂದ ಸ್ಪಷ್ಟವಾಗಿರುವುದು ಜೆಡಿಎಸ್ ರಾಜಕೀಯವಾಗಿ ಅಂಚಿಗೆ ಸರಿದಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆ, 2028ರ ವಿಧಾನಸಭೆ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಎನ್‌ಡಿಎ ಜೊತೆಗಿನ ಪಾತ್ರ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪಕ್ಷವನ್ನು ಗಟ್ಟಿಯಾಗಿ ಮರು ಸಂಘಟಿಸಲು ಪ್ರಯತ್ನ ಆರಂಭಿಸಿದೆ ಎನ್ನಬಹುದು.
ಒಟ್ಟಾರೆಯಾಗಿ, ಹಾಸನದ ಜನತಾ ಸಮಾವೇಶ ಜೆಡಿಎಸ್‌ಗೆ ಶಕ್ತಿಪ್ರದರ್ಶನ ಮಾತ್ರವಲ್ಲ, ಪಕ್ಷದ ಅಸ್ತಿತ್ವ ಮತ್ತು ಭವಿಷ್ಯದ ರಾಜಕೀಯ ದೃಷ್ಟಿಕೋನವನ್ನು ತೋರಿದ ವೇದಿಕೆಯಾಗಿದೆ. ಇದು ಆಡಳಿತಾರೂಢ ಕಾಂಗ್ರೆಸ್‌ಗೆ ಎಚ್ಚರಿಕೆ, ಕಾರ್ಯಕರ್ತರಿಗೆ ಆತವಿಶ್ವಾಸ ಮತ್ತು ರಾಜ್ಯ ರಾಜಕಾರಣಕ್ಕೆ ಹೊಸ ದಿಕ್ಕಿನ ಚರ್ಚೆಯ ಆರಂಭವಾಗಿದೆ ಎಂದೇ ಹೇಳಬಹುದು.
