ಮುಂಬೈ, ಜ.25- ಇತ್ತೀಚಿನ ವರ್ಷಗಳಲ್ಲೇ ದೇಶದ ಅತೀ ದೊಡ್ಡ ದರೋಡೆ ಎಂದು ಹೇಳಲಾಗಿರುವ ಕರ್ನಾಟಕ- ಗೋವಾ- ಮಹಾರಾಷ್ಟ್ರ ಗಡಿಭಾಗದ 400 ಕೋಟಿ ರೂ. ಮೌಲ್ಯದ ರದ್ದಾದ 2000 ರೂ. ನೋಟುಗಳಿದ್ದ ಕಂಟೈನರ್ ದರೋಡೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ಮತ್ತೊಬ್ಬ ಆರೋಪಿ ಸೆರೆ ಸಿಕ್ಕಿದ್ದು, ಬಂಧಿತರ ಸಂಖ್ಯೆ ಐದಕ್ಕೆ ಏರಿದೆ.ಮಹಾರಾಷ್ಟ್ರದ ನಾಸಿಕ್ ಮತ್ತು ಕರ್ನಾಟಕದ ನಡುವೆ ನಡೆದಿದ್ದ ಈ ಅಂತಾರಾಜ್ಯ ದರೋಡೆಗೆ ಸಂಬಂಧಿಸಿದಂತೆ ಮುಂಬೈನ ಡೊಂಬಿವಿಲಿಯಲ್ಲಿ ವಿರಾಟ್ ಗಾಂಧಿ ಎಂಬಾತನನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿ ಗಾಂಧಿ ರಾಜಸ್ಥಾನ ಮೂಲದ ಹವಾಲಾ ಆಪರೇಟರ್ ಆಗಿದ್ದು, ಒಂದು ಧಾರ್ಮಿಕ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದಾನೆ. ಪ್ರಕರಣ ದಾಖಲಾದಾಗಿನಿಂದ ಈತ ತಲೆಮರೆಸಿಕೊಂಡಿದ್ದ. ಈ ಬಂಧನದೊಂದಿಗೆ ಪ್ರಕರಣದಲ್ಲಿ ಇದುವರೆಗೆ ಐದು ಮಂದಿಯನ್ನು ಬಂಧಿಸಲಾಗಿದೆ. ಇಬ್ಬರು ಆರೋಪಿಗಳಾದ ಅಝರ್ ಮತ್ತು ಥಾಣೆಯ ದೊಡ್ಡ ಉದ್ಯಮಿ (ಬಿಲ್ಡರ್) ಕಿಶೋರ್ ಸಾವ್ಲಾ ತಲೆಮರೆಸಿಕೊಂಡಿದ್ದಾರೆ.
ದೂರಿನಲ್ಲಿ ಜಯೇಶ್ ಕದಮ್, ವಿಶಾಲ್ ನಾಯ್ಡು, ಸುನಿಲ್ ಧುಮಾಲ್, ವಿರಾಟ್ ಗಾಂಧಿ ಮತ್ತು ಜನಾರ್ದನ್ ಧೈಗುಡೆ ಎಂಬ ಆರೋಪಿಗಳನ್ನು ಹೆಸರಿಸಲಾಗಿದೆ.ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇನ್ನೂ ಇಬ್ಬರು ಆರೋಪಿಗಳ ಬಂಧನವಾದರೆ, ದರೋಡೆಯ ಹಿಂದಿನ ಸಂಪೂರ್ಣ ಜಾಲ ಬಯಲಿಗೆ ಬರಲಿದೆ ಎಂಬ ನಿರೀಕ್ಷೆಯನ್ನು ಎಸ್‌ಐಟಿ ಇಟ್ಟುಕೊಂಡಿದೆ.
ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ಘೋಟಿ ಪೊಲೀಸ್ ಠಾಣೆಯಲ್ಲಿ ಸಂದೀಪ್ ಪಾಟೀಲ್ ಅವರು ದೂರು ನೀಡಿದ ನಂತರ ಈ ಕಾರ್ಯಾಚರಣೆ ನಡೆದಿದೆ ಎಂದು ಮಹಾರಾಷ್ಟ್ರ ಎಸ್‌ಐಟಿ ತಿಳಿಸಿದೆ.
ನಾಸಿಕ್ ಮತ್ತು ಕರ್ನಾಟಕ ಪೊಲೀಸರು ಜಂಟಿಯಾಗಿ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಎಷ್ಟು ರಾಜ್ಯಗಳು ಈ ಪ್ರಕರಣದಲ್ಲಿ ಭಾಗಿಯಾಗಿವೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ನಾಸಿಕ್ ಗ್ರಾಮಾಂತರ ಉಪ ಅಧೀಕ್ಷಕ ಆದಿತ್ಯ ಮಿರಖೆಲ್ಕರ್ ಹೇಳಿದ್ದಾರೆ.ಈ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಮುಖ ಉದ್ಯಮಿ ಗಾಂಧಿಯನ್ನು ವ್ಯವಸ್ಥಾಪಕನಾಗಿ ನೇಮಿಸಿಕೊಂಡಿದ್ದ. ಈ ಅಪರಾಧದಲ್ಲಿ ಆತನ ಪಾತ್ರದ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಬಂಧಿತ ಆರೋಪಿಗಳನ್ನು ಜ.28ರ ವರೆಗೆ ಪೊಲೀಸ್ ವಶಕ್ಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಣ ಅಪಹರಣ ಪ್ರಕರಣ ಅಂತಾರಾಜ್ಯ ಮಟ್ಟದ್ದಾಗಿದ್ದು, ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ಪೊಲೀಸರು ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸುತ್ತಿದ್ದಾರೆ.
ಭಾರೀ ಮೊತ್ತದ ಹಣವು ಮಹಾರಾಷ್ಟ್ರದ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಸೇಠ್ ಅವರಿಗೆ ಸೇರಿದ್ದು ಎಂಬುದು ಮಹಾರಾಷ್ಟ್ರ ಪೊಲೀಸ್ ಮೂಲಗಳಿಂದ ಗೊತ್ತಾಗಿದೆ.ಗೋವಾದಿಂದ ಮಹಾರಾಷ್ಟ್ರಕ್ಕೆ ಈ ಹಣ ಸಾಗಿಸಲಾಗುತ್ತಿದ್ದ ಎರಡು ಕಂಟೈನರ್‌ಗಳು, ಖಾನಾಪುರ ತಾಲೂಕಿನ ಅಪಾಯಕಾರಿ ಹಾಗೂ ಅರಣ್ಯ ಪ್ರದೇಶವಾದ ಚೋಲಾರ್‌ಘಾಟ್ ಮಾರ್ಗದಲ್ಲಿ ಏಕಾಏಕಿ ನಾಪತ್ತೆಯಾಗಿವೆ. ಈ ಕಂಟೈನರ್‌ಗಳಲ್ಲಿ 400 ಕೋಟಿ ರೂ.ಗಿಂತಲೂ ಅಧಿಕ ನಗದು ಹಣ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ.
ಹಣ ಯಾರಿಗೆ ಸೇರಿದ್ದು: ಕಂಟೈನರ್ ಹೈಜಾಕ್ ಪ್ರಕರಣ ನಡೆದ ಕೆಲ ದಿನಗಳ ಬಳಿಕ, ನಾಸಿಕ್ ಮೂಲದ ಸಂದೀಪ್ ಪಾಟೀಲ ಎಂಬಾತನನ್ನು ಮಹಾರಾಷ್ಟ್ರದ ರಿಯಲ್ ಎಸ್ಟೇಟ್ ಕಿಶೋರ್ ಸೇಠ್ ಸಹಚರರು ಗನ್ ಪಾಯಿಂಟ್‌ನಲ್ಲಿ ಅಪಹರಿಸಿದ್ದರು. ನಂತರ ಸಂದೀಪ್‌ನನ್ನು ಸುಮಾರು ಒಂದೂವರೆ ತಿಂಗಳ ಕಾಲ ಅಕ್ರಮ ಬಂಧನದಲ್ಲಿಟ್ಟು, ಕಂಟೈನರ್ ಹೈಜಾಕ್‌ಗೆ ನೀನೇ ಕಾರಣ ಎಂದು ಚಿತ್ರಹಿಂಸೆ ಕೊಟ್ಟಿದ್ದರು.
ಅಷ್ಟೇ ಅಲ್ಲ 400 ಕೋಟಿ ಹಣ ಕೊಡದಿದ್ದರೆ ಜೀವ ಉಳಿಯೋದಿಲ್ಲ ಎಂದು ಬೆದರಿಕೆ ಹಾಕಿ, ಮಾನಸಿಕ ಹಾಗೂ ದೈಹಿಕ ಚಿತ್ರಹಿಂಸೆ ನೀಡಿದ್ದರು. ನಂತರ ಅಪಹರಣಕಾರರಿಂದ ತಪ್ಪಿಸಿಕೊಂಡ ಸಂದೀಪ್ ಪಾಟೀಲ, ಮಹಾರಾಷ್ಟ್ರದ ನಾಸಿಕ್ ಪೊಲೀಸ್ ಠಾಣೆಗೆ ತೆರಳಿ ಜ.1ರಂದು ದೂರು ನೀಡಿದ್ದಾರೆ.
ಈ ದೂರಿನಲ್ಲಿ 400 ಕೋಟಿ ರೂ. ನಗದು ಸಾಗಿಸುತ್ತಿದ್ದ ವಾಹನ ಅಪಹರಣದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಜೊತೆಗೆ, ಇದೇ ದೂರಿನ ಆಧಾರದಲ್ಲಿ ಈವರೆಗೂ ಗುಪ್ತವಾಗಿದ್ದ ಕಂಟೈನರ್ ಹೈಜಾಕ್ ಪ್ರಕರಣ ಸಂಪೂರ್ಣ ಬಹಿರಂಗವಾಗಿದೆ.
ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಂದರ್ಭದಲ್ಲಿ ಹಂಚಿಕೆಗಾಗಿ ಈ ಹಣವನ್ನು ಬಳಸಲಾಗಿತ್ತು ಎಂಬ ಆರೋಪವೂ ಕೇಳಿ ಬಂದಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಪೊಲೀಸ್ ವರಿಷ್ಠಾಧಿಕಾರಿ ಆದಿತ್ಯ ಮಿರ್ಖೇಲ್ಕರ್ ನೇತತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಎಸ್‌ಐಟಿ ತನ್ನ ತಂಡದ ಸದಸ್ಯರೊಂದಿಗೆ ಸಹಕರಿಸುವಂತೆ ಕರ್ನಾಟಕ ಮತ್ತು ಗೋವಾದ ಅಧಿಕಾರಿಗಳಿಗೆ ಪತ್ರ ಬರೆದಿದೆ. ಬೆಳಗಾವಿ ಎಸ್‌ಪಿ ಕೆ. ರಾಮರಾಜನ್ ಅವರು ನಾಸಿಕ್‌ಗೆ ಆಗಮಿಸಿ ತನಿಖೆಗೆ ಬೆಳಗಾವಿ ಪೊಲೀಸರ ತಂಡವನ್ನು ನಿಯೋಜಿಸಿದ್ದಾರೆ.
