Wednesday, January 15, 2025
Homeರಾಜ್ಯಸಂಕ್ರಾಂತಿ ಸಂಧರ್ಭದಲ್ಲಿ ಆದಿಯೋಗಿ ಸನ್ನಿಧಿಯಲ್ಲಿ ಮಹಾಶೂಲ ಪ್ರತಿಷ್ಠಾಪನೆ

ಸಂಕ್ರಾಂತಿ ಸಂಧರ್ಭದಲ್ಲಿ ಆದಿಯೋಗಿ ಸನ್ನಿಧಿಯಲ್ಲಿ ಮಹಾಶೂಲ ಪ್ರತಿಷ್ಠಾಪನೆ

ಚಿಕ್ಕಬಳ್ಳಾಪುರ, ಜ.15– ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಸದ್ಗುರು ಜಗ್ಗಿ ವಾಸುದೇವ್‌ರವರು ತಾಲ್ಲೂಕಿನ ಆವಲಗುರ್ಕಿಯ ಈಶಾ ಫೌಂಡೇಶನ್‌ನ 112 ಅಡಿ ಎತ್ತರದ ಆದಿಯೋಗಿ ವಿಗ್ರಹದ ಸದ್ಗುರು ಸನ್ನಿಧಿಯಲ್ಲಿ ಮಹಾಶೂಲ ಪ್ರತಿಷ್ಠಾಪಿಸಲಾಯಿತು.

ಸಾವಿರಾರು ಭಕ್ತರ ಸಮುಖದಲ್ಲಿ, ನೂತನವಾಗಿ ಪ್ರತಿಷ್ಟಾಪಿಸಲಾಗಿರುವ 54 ಅಡಿಗಳ ವಿಶ್ವದ ಏಕಮಾತ್ರ ಮಹಾಶೂಲವು ಸದ್ಗುರು ಸನ್ನಿಧಿಯಲ್ಲಿರುವ 112 ಅಡಿಗಳ ಆದಿಯೋಗಿಯ ಭವ್ಯತೆ ಮತ್ತು ಅನುಗ್ರಹವನ್ನು ಇಮಡಿಗೊಳಿಸಲಿದೆ. ಹೊಸದಾಗಿ ಪ್ರತಿಷ್ಠಾಪನೆಯಾದ ಸ್ಥಳಕ್ಕೆ ಸಾರ್ವಜನಿಕ ದರ್ಶನಕ್ಕೆ ತೆರೆಯುವ ಮುನ್ನ ಪ್ರತಿಷ್ಠಾಪನೆಯಲ್ಲಿ ಭಾಗಿಯಾದವರು ಮಹಾಶೂಲಕ್ಕೆ ಪೂಜೆಯನ್ನು ಅರ್ಪಿಸಿದರು.

ದಿನವಿಡೀ ನಡೆದ ಉತ್ಸವದಲ್ಲಿ ಸ್ಥಳೀಯ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿ, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ವರ್ಣರಂಜಿತ ಸಂಕ್ರಾಂತಿ ಜಾತ್ರೆಯನ್ನು ಒಳಗೊಂಡ ಸಾಂಪ್ರದಾಯಿಕ ಉತ್ಸವಗಳು ನಡೆದವು. ಈ ಸಂದರ್ಭದಲ್ಲಿ ಸದ್ಗುರು ಜಗ್ಗಿ ವಾಸುದೇವ್‌ ಮಾತನಾಡಿ, ಪ್ರತಿಯೊಂದು ಶಿವ ದೇವಾಲಯದ ಹೊರಗೆ ಸಾಂಕೇತಿಕವಾಗಿ ನಂದಿಯನ್ನು ಕಾಣಬಹುದು.

ನಂದಿಯು ಅವಿರತ ಕಾಯುವಿಕೆಯ ಸಂಕೇತವಾಗಿದೆ. ಏಕೆಂದರೆ ಕಾಯುವುದು ಭಾರತೀಯ ಸಂಸ್ಕೃತಿಯಲ್ಲಿ ಶ್ರೇಷ್ಠವಾದುದೆಂದು ಪರಿಗಣಿಸಲಾಗಿದೆ. ಸುಮನೆ ಕುಳಿತು ಕಾಯುವುದು ಹೇಗೆ ಎಂದು ತಿಳಿದಿರುವವರು ಸಹಜವಾಗಿ ಧ್ಯಾನಸ್ಥನಾಗಿರುತ್ತಾರೆ. ಜನರು ಯಾವಾಗಲೂ ಧ್ಯಾನವನ್ನು ಒಂದು ರೀತಿಯ ಚಟುವಟಿಕೆ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಇಲ್ಲ, ಇದು ಒಂದು ಗುಣಧರ್ಮ. ಪ್ರಾರ್ಥನೆ ಎಂದರೆ ನೀವು ದೇವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದೀರಿ ಎಂದರ್ಥ.

ನಿಮ ಪ್ರತಿಜ್ಞೆಗಳು, ನಿರೀಕ್ಷೆಗಳು ಅಥವಾ ಇನ್ನೇನಾದರೂ ಅವನಲ್ಲಿ ನಿವೇದಿಸಲು ಯತ್ನಿಸುತ್ತಿದ್ದೀರಿ. ಧ್ಯಾನ ಎಂದರೆ ನೀವು ಅಸ್ತಿತ್ವವನ್ನು, ಸೃಷ್ಟಿಯ ಅಂತಿಮ ಸ್ವರೂಪವನ್ನು ಆಲಿಸಲು ಸಿದ್ಧರಿದ್ದೀರಿ ಎಂದರ್ಥ. ನಿಮಲ್ಲಿ ಹೇಳಲು ಏನೂ ಇಲ್ಲ, ನೀವು ಸುಮನೆ ಕೇಳುತ್ತಿರಿ. ಅದು ನಂದಿಯ ಗುಣ ಎಂದು ನಂದಿಯ ಮಹತ್ವವನ್ನು ವಿವರಿಸಿದರು.

ಮಹಾಶೂಲ (ಶಿವನ ತ್ರಿಶೂಲ)ದ ಕುರಿತು ಇಡೀ ಸೃಷ್ಟಿಯು ಮೂರು ಅಂಶಗಳ ದ್ಯೋತಕವಾಗಿದೆ- ಸೃಷ್ಟಿ, ಸ್ಥಿತಿ ಮತ್ತು ಲಯ. ಭಾರತೀಯ ಸಂಸ್ಕೃತಿಯಲ್ಲಿ, ನಾವು ಈ ಮೂರು ಶಕ್ತಿಗಳನ್ನು ಬ್ರಹ, ವಿಷ್ಣು ಮತ್ತು ಮಹೇಶ್ವರ ಎನ್ನುತ್ತೇವೆ. ಬ್ರಹವು ಹುಟ್ಟಿನ ಬಗ್ಗೆಯಾದರೆ, ವಿಷ್ಣುವು ಅಸ್ತಿತ್ವದ ನಿರ್ವಹಣೆ ಮತ್ತು ಶಿವ ವಿನಾಶದ ಬಗ್ಗೆ. ಆದಾಗ್ಯೂ, ಮೂಲ ರೂಪದಲ್ಲಿ ಈ ಮೂರು ಕೇವಲ ಒಂದೇ, ಏಕೆಂದರೆ ಸೃಷ್ಟಿ ಮತ್ತು ನಿರ್ವಹಣೆ ಕೇವಲ ವಿನಾಶತೆಯ ಮಡಿಲಲ್ಲೇ ಅಸ್ತಿತ್ವದಲ್ಲಿದೆ. ಅದೇ ಮಹಾಶೂಲದ ಮಹತ್ವ – ಮೇಲ್ನೋಟಕ್ಕೆ ಈ ಮೂರು ಬೇರೆ ಬೇರೆಯಾಗಿ ತೋರಿದರೂ, ನಿಜ ರೂಪದಲ್ಲಿ ಎಲ್ಲವೂ ಒಂದೇ ಎಂಬುದನ್ನು ನಿರಂತರವಾಗಿ ಸೂಚಿಸುತ್ತದೆ ಎಂದರು.

ಇದೇ ವೇಳೆ ಇಲ್ಲಿ ನಡೆಸಿಕೊಟ್ಟ ಸಂಗೀತ, ನೃತ್ಯಪ್ರದರ್ಶನಗಳು, ಈಶ ಸಂಸ್ಕೃತಿ ವಿದ್ಯಾರ್ಥಿಗಳಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸೂರೆಗೊಂಡವು. ಮತ್ತು ಭಕ್ತರಿಗೆ ಎಳ್ಳು, ಬೆಲ್ಲ, ಕಬ್ಬು ಮತ್ತು ಇತರೆ ಅರ್ಪಣೆಗಳನ್ನು ಮಾಡುವ ಅವಕಾಶ ನೀಡಿದ್ದರು.

ಸದ್ಗುರು ಸನ್ನಿಧಿಯನ್ನು ಕಳೆದ ಅ. 2022 ರಲ್ಲಿ ನಾಗ ಪ್ರತಿಷ್ಠಾಪನೆಯೊಂದಿಗೆ ಸಾರ್ವಜನಿಕರಿಗೆ ತೆರೆಯಲಾಯಿತು. 2023ನೇ ಸಾಲಿನ ಮಕರ ಸಂಕ್ರಾಂತಿ ಹಬ್ಬದ ದಿನದಂದು ಬೆಟ್ಟಗುಡ್ಡಗಳ ತಪ್ಪಲಿನ ಹಸಿರಿನ ಪ್ರದೇಶದಲ್ಲಿ ಆಧ್ಯಾತಿಕ ಮತ್ತು ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಆಕರ್ಷಕ 112 ಅಡಿ ಎತ್ತರದ ಆದಿಯೋಗಿ ಅನಾವರಣದ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಧಾರ್ಮಿಕ ಮತ್ತು ಯೋಗ ಕೇಂದ್ರವು ಉದ್ಘಾಟನೆಯಾಗಿದ್ದು, 2024ರ ಸಂಕ್ರಾಂತಿಯಂದು 21 ಅಡಿಯ ನಂದಿ ವಿಗ್ರಹ ಪ್ರತಿಷ್ಟಾಪಿಸಲಾಗಿತ್ತು. ಈ ಬಾರಿ 54 ಅಡಿಗಳ ಮಹಾಶೂಲವನ್ನು ಲೋಕಾರ್ಪಣೆ ಮಾಡಿದ್ದಾರೆ.

ಎಲ್ಲಾ ವಯೋಮಾನದವರಲ್ಲಿ ಬಹು ಜನಪ್ರಿಯವಾಗಿರುವ ವರ್ಣರಂಜಿತ ಧ್ವನಿ ಮತ್ತು ಬೆಳಕಿನ ಪ್ರದರ್ಶನವಾದ, ದೈನಂದಿನ ಆದಿಯೋಗಿ ದಿವ್ಯದರ್ಶನದ ಜೊತೆಗೆ ಸನ್ನಿಧಿಯಲ್ಲಿ ಸಂದರ್ಶಕರು ವಿಶೇಷ ಲೇಸರ್‌ ಪ್ರದರ್ಶನದ ಆನಂದವನ್ನು ಅನುಭವಿಸಿದರು. ದಿವ್ಯ ದರ್ಶನವನ್ನು ಸದ್ಗುರು ಸನ್ನಿಧಿಯಲ್ಲಿ ಪ್ರತಿದಿನ ಸಂಜೆ 7-20 ಕ್ಕೆ ಪ್ರದರ್ಶಿಸಲಾಗುತ್ತದೆ.

ಸದ್ಗುರು ಸನ್ನಿಧಿಯು ಪ್ರಪಂಚದಾದ್ಯಂತ ಆಧ್ಯಾತಿಕ ಮೂಲಸೌಕರ್ಯಗಳನ್ನು ನಿರ್ಮಿಸಿ ಸಂಪೂರ್ಣ ಮಾನವೀಯತೆಗೆ ಆಧ್ಯಾತಿಕತೆಯ ಒಂದು ಹನಿಯನ್ನು ನೀಡುವ ಸದ್ಗುರುಗಳ ಆಶಯದ ಒಂದು ಭಾಗವಾಗಿದೆ. ಸದ್ಗುರು ಸನ್ನಿಧಿಯಲ್ಲಿ ಪ್ರಸ್ತುತ ನಾಗ ಮಂಟಪ, ಆದಿಯೋಗಿ, 21 ಅಡಿಯ ನಂದಿ ವಿಗ್ರಹ,54 ಅಡಿಗಳ ಮಹಾಶೂಲ ಯೋಗೇಶ್ವರ ಲಿಂಗ ಇವುಗಳನ್ನು ನಿರ್ಮಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳನ್ನು ವೀಕ್ಷಿಸಲು ಬೆಂಗಳೂರು ಚಿಕ್ಕಬಳ್ಳಾಪುರ ಕೋಲಾರ ಸೇರಿದಂತೆ ದಕ್ಷಿಣ ಭಾರತದ ಸಹಸ್ರಾರು ಮಂದಿ ಭಕ್ತರು ಸಾಕ್ಷಿಯಾದರು.

RELATED ARTICLES

Latest News