ಬೆಂಗಳೂರು,ನ.15- ಕನ್ನಡದ ಹಿರಿಯ ನಟ ಸರಿಗಮ ವಿಜಿ(77) ಅವರು ಇಂದು ಮುಂಜಾನೆ ವಿಧಿವಶರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ವಿಜಯ್ ಅವರಿಗೆ ಕಳೆದ 1 ವಾರದಿಂದ ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಸರಿಗಮ ವಿಜಿ ಇಬ್ಬರು ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಮಹಾಲಕ್ಷಿಪುರಂನಲ್ಲಿರುವ ಅವರ ನಿವಾಸದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಬೆಳಿಗ್ಗೆ ಚಾಮರಾಜಪೇಟೆಯ ಟಿ ಆರ್ ಮಿಲ್ ಬಳಿ ಬರುವ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಪುತ್ರ ರೋಹಿತ್ ತಿಳಿಸಿದ್ದಾರೆ.
ವಿಜಿ ಅವರದ್ದು ಬಲು ಸುದೀರ್ಘವಾದ ಸಿನಿಮಾ ಮತ್ತು ರಂಗಭೂಮಿ ಪಯಣ. ನಾಟಕಗಳಲ್ಲಿ ನಟಿಸುತ್ತಿದ್ದ ವಿಜಿ ಅವರ ಸಂಸಾರದಲ್ಲಿ ಸರಿಗಮ ನಾಟಕ ಬಹಳ ಹೆಸರು ಕೊಟ್ಟಿತ್ತು. ಇದೇ ಕಾರಣಕ್ಕೆ ಅವರಿಗೆ ಸರಿಗಮ ವಿಜಿ ಹೆಸರು ಬಂದಿತ್ತು. ನಾಟಕದಿಂದ ಸಿನಿಮಾಕ್ಕೆ ಪದಾರ್ಪಣೆ ಮಾಡಿದ ವಿಜಿ ಅವರು ಹಲವಾರು ಸಿನಿಮಾಗಳಲ್ಲಿ ಪೋಷಕ ಪಾತ್ರ, ಹಾಸ್ಯ ಪಾತ್ರ ಕೆಲವೆಡೆ ವಿಲನ್ ಪಾತ್ರಗಳಲ್ಲಿಯೂ ನಟಿಸಿದ್ದಾರೆ.
ಆರಂಭದಲ್ಲಿ ಕೆಲ ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ವಿಜಿ ಅವರು ಬೆಳುವಲದ ಮಡಿಲಲ್ಲಿ ಸಿನಿಮಾ ಮೂಲಕ ನಟರಾಗಿ ಚಿತ್ರರಂಗಕ್ಕೆ ಪ್ರವೇಶಿಸಿದರು. ಅದಾದ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಲೇ ಸಾಗಿದ ವಿಜಿ ಅವರು 2018ರ ಹೊತ್ತಿಗೆ ಕನ್ನಡದಲ್ಲಿ ಸುಮಾರು 269 ಚಿತ್ರಗಳಲ್ಲಿ ನಟಿಸಿದ್ದರು. 80ಕ್ಕೂ ಹೆಚ್ಚು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದಾರೆ.
ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದ ಸರಿಗಮ ವಿಜಿ ಅವರು ಕೆಲ ಧಾರಾವಾಹಿಗಳ ನಿರ್ದೇಶನವನ್ನೂ ಮಾಡಿದ್ದರು.
ಸರಿಗಮ ವಿಜಿ ಅವರ ನಿಜನಾಮ ಆರ್ ವಿಜಯ್ಕುಮಾರ್. ಆದರೆ, ರಂಗಭೂಮಿ ಹಾಗೂ ಸಿನಿಲೋಕದಲ್ಲಿ ಇವರು ಸರಿಗಮ ವಿಜಿ ಎಂದೇ ಜನಪ್ರಿಯ. ಆರ್ ವಿಜಯ್ ಕುಮಾರ್ ಅವರೇ ನಟಿಸಿ, ನಿರ್ದೇಶಿಸಿದ್ದ ನಾಟಕ ಸಂಸಾರದಲ್ಲಿ ಸರಿಗಮ ಬಹು ಜನಪ್ರಿಯತೆ ಪಡೆಯಿತು. ಬೆಂಗಳೂರು, ಹೈದರಾಬಾದ್, ಚೆನ್ನೈ, ದೆಹಲಿ, ಮುಂಬೈ ಮುಂತಾದ ಕಡೆ 1390ಕ್ಕೂ ಹೆಚ್ಚು ಬಾರಿ ಪ್ರದರ್ಶನ ಕಂಡಿತ್ತು.
ರಂಗಭೂಮಿ ಮತ್ತು ಸಿನಿಮಾ:
ದಶಕಗಳಿಂದ ರಂಗಭೂಮಿ, ಸಿನಿಮಾ ಹಾಗೂ ಕಿರುತೆರೆಯಲ್ಲಿ ಸರಿಗಮ ವಿಜಿ ಸಕ್ರಿಯರಾಗಿದ್ದವರು. ರಂಗಭೂಮಿ ಕಲಾವಿದರಾಗಿ ಇವರು ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ನಾಟಕಗಳ ನಿರ್ದೇಶನವನ್ನೂ ಮಾಡಿದ್ದಾರೆ. 1975ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸರಿಗಮ ವಿಜಿ ಅಭಿನಯಿಸಿದ ಚೊಚ್ಚಲ ಸಿನಿಮಾ ಬೆಳುವಲದ ಮಡಿಲಲ್ಲಿ.
ಕಪ್ಪು ಕೋಲ, ಪ್ರತಾಪ್, ಮನ ಮೆಚ್ಚಿದ ಸೊಸೆ, ಕೆಂಪಯ್ಯ ಐಪಿಎಸ್, ಜಗತ್ ಕಿಲಾಡಿ, ಯಮಲೋಕದಲ್ಲಿ ವೀರಪ್ಪನ್, ದುರ್ಗಿ, ಡಕೋಟ ಎಕ್ಸ್ ಪ್ರೆಸ್ ಸೇರಿದಂತೆ ಸುಮಾರು 269ಕ್ಕೂ ಅಧಿಕ ಚಿತ್ರಗಳಲ್ಲಿ ಸರಿಗಮ ವಿಜಿ ಮಿಂಚಿದ್ದಾರೆ. 80ಕ್ಕೂ ಅಧಿಕ ಚಿತ್ರಗಳಿಗೆ ಸರಿಗಮ ವಿಜಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ.
ಹೆಚ್ಎಎಲ್ ಬಳಿಯ ವಿಮಾನಪುರದ ರಾಮಯ್ಯ ಎಂಬುವರಿಗೆ ಒಟ್ಟು ಐವರು ಮಕ್ಕಳಲ್ಲಿ ವಿಜಯ್ಕುಮಾರ್ ಕೊನೆಯವರು. ತಂದೆಯ ಪ್ರೋತ್ಸಾಹ ಸಿಕ್ಕಿ ಶಾಲಾ ದಿನಗಳಲ್ಲಿ ತಾವೇ ನಾಟಕ ಬರೆದು ನಟಿಸುತ್ತಿದ್ದರು. ಮುಂದೆ ರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ನಾಟಕಗಳಲ್ಲಿ ಮಿಂಚಿದರು. ಹೈಸ್ಕೂಲ್ನಲ್ಲಿ ನಟ ಅರ್ಜುನ್ ಸರ್ಜಾ ಅವರ ತಂದೆ ಶಕ್ತಿಪ್ರಸಾದ್ ಪೀಟಿ ಮಾಸ್ಟರ್ ಆಗಿದ್ದರು. ಅವರ ಸಹಕಾರದಿಂದ ಮತ್ತಷ್ಟು ನಾಟಕಗಳಲ್ಲಿ ನಟಿಸಿದ್ದಾರೆ. ಸರಿಗಮ ವಿಜಿ ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.