ಬೆಂಗಳೂರು,ಜ.15– ಶಾಸಕಾಂಗ ಸಭೆಯ ನಂತರವೂ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತೀಯ ಹೇಳಿಕೆಗಳು ತಣ್ಣಗಾಗಿಲ್ಲ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಬಹಿರಂಗ ಹೇಳಿಕೆ ಮೂಲಕ ನೇರವಾಗಿ ಅಖಾಡ ಪ್ರವೇಶಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಶಾಸಕಾಂಗ ಸಭೆಯಲ್ಲಿ ಬೆಳಗಾವಿ ಕಾಂಗ್ರೆಸ್ ಕಚೇರಿ ನಿರ್ಮಾಣದ ಕೀರ್ತಿಯನ್ನು ಸಚಿವೆ ಲಕ್ಷ್ಮೀ ಹಬ್ಬಾಳ್ಕರ್ ಅವರಿಗೆ ನೀಡಲು ಮುಂದಾಗಿದ್ದಾಗ ಸತೀಶ್ ಜಾರಕಿಹೊಳಿ ನೇರವಾಗಿ ವಿರೋಧ ವ್ಯಕ್ತಪಡಿಸಿದ್ದರು. ಮುಂದುವರೆದ ಭಾಗವಾಗಿ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಜಾರಕಿಹೊಳಿ, ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕವಾಗಬೇಕು ಎಂದಿದ್ದಾರೆ.
ಹೊಸ ಅಧ್ಯಕ್ಷರನ್ನು ನೇಮಿಸಬೇಕು. ಒಂದು ವೇಳೆ ಇದೇ ಅಧ್ಯಕ್ಷರನ್ನು ಮುಂದುವರೆಸುವುದಾದರೆ ಅವರಲ್ಲಿ ಬದಲಾವಣೆ ಮಾಡಿಕೊಳ್ಳಲು ಸೂಚನೆ ನೀಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ಮನವಿ ಮಾಡಿದ್ದೇವೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗುತ್ತದೆ ಎಂಬ ಗೊಂದಲವಿದೆ. ನಮಗೆ ಪೂರ್ಣ ಪ್ರಮಾಣದ ಅಧ್ಯಕ್ಷರು ಬೇಕು ಎಂದಿದ್ದಾರೆ.
ಕಾಟಾಚಾರದ ಅಧ್ಯಕ್ಷರು ಬೇಡ. ಮುಂದೆ ಯಾರೇ ಪಕ್ಷದ ನೇತೃತ್ವ ವಹಿಸಿಕೊಂಡರೂ ಮತ ತರುವವರು ಇರಬೇಕು. ಮುಂದಿನ ಚುನಾವಣೆಯಲ್ಲಿ ನಮಗೆ ಅದು ಲಾಭವಾಗಬೇಕು. ಈ ವಿಷಯವಾಗಿ ಆ ಜಾತಿ, ಈ ಜಾತಿ ಎಂಬುದಿಲ್ಲ ಎಂದರು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಕೆಳಮಟ್ಟದಲ್ಲಿ ಚರ್ಚೆಯಾಗಿವೆ. ಎಲ್ಲರೂ ಬದಲಾವಣೆಯನ್ನು ಬಯಸಿದ್ದಾರೆ. ಆದರೆ ಮೇಲಟ್ಟದಲ್ಲಿ ಅದು ನಡೆಯುತ್ತಿಲ್ಲ. ತಾವು ಎಐಸಿಸಿ ಪ್ರತಿನಿಧಿಯೊಂದಿಗೆ ಚರ್ಚೆ ನಡೆಸಿದ ವೇಳೆ ಜ.25 ರ ನಂತರ ಇದರ ಬಗ್ಗೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಅಧ್ಯಕ್ಷ ಸ್ಥಾನದ ಬಗ್ಗೆ ನನ್ನ ಅಭಿಪ್ರಾಯವನ್ನು ಹೈಕಮಾಂಡ್ಗೆ ನೇರವಾಗಿ ತಲುಪಿಸಿದ್ದೇನೆ. ಪಕ್ಷದ ಆಗುಹೋಗುಗಳು ಸಂಘಟನೆಯ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಲಾಭ-ನಷ್ಟಗಳ ಬಗ್ಗೆ ನಮಿಬ್ಬರ ನಡುವೆ ವಿಶ್ಲೇಷಣೆಗಳಾಗಿವೆ. ಶಾಸಕಾಂಗ ಸಭೆಯಲ್ಲಿ ನನಗೆ ಮಾತನಾಡಲು ಸಮಯ ನೀಡಬೇಕು ಎಂದು ಕೇಳಿಕೊಂಡಿದ್ದೆ. ಆದರೆ ಅಲ್ಲಿ ಅವಕಾಶ ಸಿಗಲಿಲ್ಲ. ನಂತರ ಭೇಟಿಗೆ ಸಮಯ ನೀಡಿದ್ದರು ಎಂದರು.
ನಮ ವಿಚಾರಗಳನ್ನು ಪಕ್ಷದ ಮುಖಂಡರಿಗೆ ತಲುಪಿಸಿದ್ದೇವೆ. ಎಲ್ಲವೂ ಒಮೆಲೇ ಬಗೆಹರಿಯುವುದಿಲ್ಲ. ಸಮಯ ಬೇಕಾಗುತ್ತದೆ. ಪಕ್ಷ ಮುಖ್ಯ ಎಂದು ಎಲ್ಲರೂ ಹೇಳುತ್ತಿದ್ದಾರೆ. ನಮದೂ ಅದೇ ಅಭಿಪ್ರಾಯ. ಯಾರೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿಲ್ಲ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಿ ಮುಂದುವರೆಯಬೇಕೆ, ಬೇಡವೇ ಎಂಬ ಬಗ್ಗೆ ಹೈಕಮಾಂಡ್ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು. ಪಕ್ಷ ಸಂಘಟನೆಯಲ್ಲಿ 2023 ರ ಮೊದಲು ಇದ್ದಂತಹ ವೇಗ ಈಗ ಕಡಿಮೆಯಾಗಿದೆ. ಅದರಲ್ಲೂ ವಿಧಾನಸಭಾ ಚುನಾವಣೆ ಮುಗಿದು ಸರ್ಕಾರ ರಚನೆಯಾದ ಬಳಿಕವಂತೂ ಸಂಘಟನೆ ನಿರೀಕ್ಷಿತ ಮಟ್ಟದಲ್ಲಿ ಸಂಘಟನೆಯಾಗುತ್ತಿಲ್ಲ. ಅಧ್ಯಕ್ಷರು ಬದಲಾಗಬೇಕು ಎಂಬುದು ನಮ ಹಠ ಅಲ್ಲ. ಅವರೇ ಮುಂದುವರೆದರೂ ಆಕ್ಷೇಪವಿಲ್ಲ. ಆದರೆ ಪಕ್ಷ ಸಂಘಟನೆಗೆ ಹೆಚ್ಚಿನ ಸಮಯ ನೀಡುವವರು ನೇತೃತ್ವ ವಹಿಸಬೇಕು ಎಂದರು.
ನನ್ನನ್ನೂ ಸೇರಿದಂತೆ ಎಲ್ಲಾ ಸಚಿವರುಗಳು ಇಲಾಖೆಯ ಕೆಲಸಗಳಲ್ಲೇ ತೊಡಗಿಸಿಕೊಂಡಿದ್ದೇವೆ. ಪಕ್ಷ ಸಂಘಟನೆಯಲ್ಲಿ ಯಾರೂ ತೊಡಗಿಸಿಕೊಳ್ಳುತ್ತಿಲ್ಲ. ಈ ಹಿಂದೆ ಲೋಕಸಭೆ ಚುನಾವಣೆ ಬಳಿಕ ಕೆಪಿಸಿಸಿ ಅಧ್ಯಕ್ಷರನ್ನು ಬದಲಾಯಿಸುವುದಾಗಿ ಹೈಕಮಾಂಡ್ ತಿಳಿಸಿತ್ತು. ಕೆ.ಸಿ.ವೇಣುಗೋಪಾಲ್ ಅವರ ಸಮುಖದಲ್ಲಿ ಈ ಕುರಿತು ಲಿಖಿತ ಒಪ್ಪಂದವಾಗಿದೆ. ಅದರಂತೆ ಅಧಿಕಾರ ಬಿಟ್ಟುಕೊಡಬೇಕು ಎಂದಿತ್ತು ಎನ್ನುವ ಮೂಲಕ ಬಹಿರಂಗ ಆಕ್ಷೇಪಗಳನ್ನು ಹೊರಹಾಕಿದ್ದಾರೆ.
ಸಾಮರ್ಥ್ಯವಿದ್ದರೆ 2-3 ಹುದ್ದೆಗಳನ್ನು ನೀಡಲು ವಿರೋಧವಿಲ್ಲ. ಕೆಲವರು ಸತೀಶ್ ಜಾರಕಿಹೊಳಿ ಪಕ್ಷದ ಅಧ್ಯಕ್ಷರಾಗಲಿ, ಕಾಂಗ್ರೆಸ್ ಪಕ್ಷಕ್ಕೆ ಅಹಿಂದ ವರ್ಗದ ಮತಗಳು ಹೆಚ್ಚು ಬರಲಿ ಎಂದು ಹಲವರು ಹೇಳುತ್ತಿದ್ದಾರೆ. ಇದೇ ತಿಂಗಳ ಕೊನೆಯಲ್ಲಿ ತಾವು ದೆಹಲಿಗೆ ತೆರಳುತ್ತಿದ್ದು, ತಾವು ಹೈಕಮಾಂಡ್ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.