ಬೆಳಗಾವಿ, ಜ.15- ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಅಪರಿಚಿತ ಟ್ರಕ್ ಚಾಲಕನ ಮೇಲೆ ದೂರು ದಾಖಲಿಸಿದ್ದಾರೆ.
ಮೇಲ್ನೋಟಕ್ಕೆ ನಾಯಿ ಅಡ್ಡ ಬಂದು ಚಾಲಕನ ನಿಯಂತ್ರಣ ತಪ್ಪಿ ಕಾರು ಸರ್ವೀಸ್ ರಸ್ತೆಗೆ ಹೋಗಿ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಪ್ರಸ್ತುತ ನೀಡಿರುವ ದೂರಿನಲ್ಲಿ ಎದುರಿನಿಂದ ಬಂದ ಟ್ರಕ್ ಚಾಲಕ ನನ್ನ ವಾಹನಕ್ಕೆ ಬಡಿದಿದ್ದರಿಂದ ನಿಯಂತ್ರಣ ತಪ್ಪಿತು ಎಂದು ಚಾಲಕ ಹೇಳಿದ್ದಾನೆ.
ಚಿತ್ತೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಈ ಸಂಬಂಧ ಕಾರು ಚಾಲಕ ನೀಡಿರುವ ದೂರಿನಲ್ಲಿ ಧಾರವಾಡ-ಬೆಳಗಾವಿ ಮಧ್ಯದ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಬರುವಾಗ ನಮ ಮುಂದೆ ಲೇನ್ವೊಂದರಲ್ಲಿ ಹೋಗುತ್ತಿದ್ದ ಕ್ಯಾಂಟರ್ ಟ್ರಕ್ ಚಾಲಕ ಯಾವುದೇ ಮುನ್ಸೂಚನೆ ಕೊಡದೆ ಎಡಬದಿಗೆ ಬಂದ.
ಇದರಿಂದ ನಮ ಕಾರಿನ ಬಲಬದಿಗೆ ಅದು ತಾಗಿದ್ದರಿಂದ ಸರ್ವೀಸ್ ರಸ್ತೆಯಲ್ಲಿ ಚಲಿಸಿ ಮರಕ್ಕೆ ಡಿಕ್ಕಿ ಹೊಡೆದೆ ಎಂದು ಚಾಲಕ ದೂರಿನಲ್ಲಿ ಉಲ್ಲೇಖಿಸಿದ್ದಾನೆ.ಈ ವೇಳೆ ಟ್ರಕ್ ಚಾಲಕ ವಾಹನ ನಿಲ್ಲಿಸದೆ ಪರಾರಿಯಾದ ಎಂದು ದೂರಿನಲ್ಲಿ ತಿಳಿಸಲಾಗಿದೆ.