Thursday, January 16, 2025
Homeಮನರಂಜನೆಬಾಲಿವುಡ್ ನಟ ಸೈಫ್‌ ಅಲಿ ಖಾನ್‌ಗೆ ಚಾಕು ಇರಿತ

ಬಾಲಿವುಡ್ ನಟ ಸೈಫ್‌ ಅಲಿ ಖಾನ್‌ಗೆ ಚಾಕು ಇರಿತ

Bollywood Actor Saif Ali Khan stabbed during home invasion

ಮುಂಬೈ,ಜ.16– ಬಾಲಿವುಡ್‌ನ ಅತ್ಯಂತ ಶ್ರೀಮಂತ ಕುಟುಂಬಗಳಲ್ಲಿ ಒಂದಾಗಿರುವ ಹೆಸರಾಂತ ಚಿತ್ರನಟ ಸೈಫ್‌ ಆಲಿಖಾನ್‌ಗೆ ಮೂವರು ದುಷ್ಕರ್ಮಿಗಳು ಚಾಕು ಇರಿದಿದ್ದು, ಅವರ ಆರೋಗ್ಯ ಸ್ಥಿತಿ ಕುರಿತು ಊಹಾಪೋಹಗಳು ಎದ್ದಿವೆ.

ಸದ್ಯ ಅವರನ್ನು ಮುಂಬೈನ ಪ್ರತಿಷ್ಠಿತ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಭಿಮಾನಿಗಳು ಊಹಾಪೋಹ ಸುದ್ದಿಗಳನ್ನು ನಂಬಬಾರದು. ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಸೈಫ್‌ ಆಲಿಖಾನ್‌ ಪತ್ನಿ ಕರೀನಾ ಕಪೂರ್‌ ತಿಳಿಸಿದ್ದಾರೆ. ಕಳೆದ ಮಧ್ಯರಾತ್ರಿ 2.30ರಲ್ಲಿ ಮುಂಬೈನ ಬಾಂದ್ರಾದಲ್ಲಿರುವ ಸೈಫ್‌ ಆಲಿಖಾನ್‌ ಫ್ಲಾಟ್‌ಗೆ ಏಕಾಏಕಿ ನುಗ್ಗಿದ ಮೂವರು ಆಗುಂತಕರು ಮನೆಯಲ್ಲಿದ್ದ ನಗದು, ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚಲು ಯತ್ನಿಸಿದ್ದಾರೆ.

ಸೈಫ್‌ ಅಲಿಖಾನ್‌ ಪತ್ನಿ ಕರಿನಾ ಕಪೂರ್‌ ಹಾಗೂ ಮಕ್ಕಳು ಮಲಗಿದ್ದ ಬೆಡ್‌ರೂಮ್‌ಗೆ ನುಗ್ಗಿದ ದುಷ್ಕರ್ಮಿಗಳು, ದೋಚಲು ಯತ್ನಿಸುತ್ತಿದ್ದ ವೇಳೆ ತಡೆಯಲು ಸೈಫ್‌ ಆಲಿಖಾನ್‌ ಮುಂದಾದರು. ಈ ವೇಳೆ ಆಗುಂತಕರು ಆರು ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಅವರ ಕುತ್ತಿಗೆ, ಬೆನ್ನು, ಹೊಟ್ಟೆ ಸೇರಿದಂತೆ ಮತ್ತಿತರ ಕಡೆ ಇರಿದಿದ್ದಾರೆ. ದೇಹದ ಎರಡು ಕಡೆ ಇರಿತನಿಂದಾಗಿ ಗಂಭೀರ ಗಾಯಗಳಾಗಿವೆ.

ತಕ್ಷಣವೇ ಕರಿನಾ ಕಪೂರ್‌ ಚೀರಿಕೊಂಡಿದ್ದರಿಂದ ಭದ್ರತಾ ಸಿಬ್ಬಂದಿಗಳು ಆಗಮಿಸಿ ಕೂಡಲೇ ಅಂದರೆ 3.30ಕ್ಕೆ ಲೀಲಾವತಿಗೆ ದಾಖಲಿಸಿದ್ದಾರೆ. ಸೈಫ್‌ ಆಲಿಖಾನ್‌ಗೆ ನುರಿತ ತಜ್ಞ ವೈದ್ಯ ತಂಡ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಸದ್ಯ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮುಂದಿನ 24 ಗಂಟೆಗಳವರೆಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುವುದು. ಅಲ್ಲಿಯ ತನಕ ಆರೋಗ್ಯ ಸ್ಥಿತಿ ಕುರಿತು ನಾವು ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಆದರೆ ಕುಟುಂಬದವರು ಮಾತ್ರ ಸೈಫ್‌ ಆಲಿಖಾನ್‌ ಆರೋಗ್ಯ ಸ್ಥಿತಿ ಸುಧಾರಿಸುತ್ತಿದ್ದು, ಅಭಿಮಾನಿಗಳು, ಒಡನಾಡಿಗಳು, ಕುಟುಂಬದ ಸದಸ್ಯರು ಆತಂಕಪಡಬೇಡಿ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ವದಂತಿಗಳನ್ನು ನಂಬಬಾರದೆಂದು ಕರೀನಾ ಮನವಿ ಮಾಡಿಕೊಂಡಿದ್ದಾರೆ.

ಚುರುಕುಗೊಂಡ ತನಿಖೆ:
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ಬಾಂದ್ರಾದಲ್ಲಿರುವ ಸೈಫ್‌ ಆಲಿಖಾನ್‌ ನಿವಾಸಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿಯಲ್ಲಿ ಕೂಡ ಆಗುಂತಕರ ಮುಖಛರ್ಯೆ ಕೂಡ ಸರಿಯಾಗಿ ಸೆರೆಯಾಗಿಲ್ಲ. ಹೀಗಾಗಿ ತನಿಖೆ ನಡೆಸುವುದು ಸವಾಲಾಗಿದೆ ಎಂದು ಮುಂಬೈನಗರ ಪೊಲೀಸ್‌‍ ಆಯುಕ್ತರು ತಿಳಿಸಿದ್ದಾರೆ.

ಗುರುವಾರ ಬೆಳಗಿನಜಾವ 2.30ರ ಸಮಯದಲ್ಲಿ ಸೈಫ್‌ ಆಲಿಖಾನ್‌ ನಿವಾಸಕ್ಕೆ ನುಗ್ಗಿದ ಆಗುಂತಕ ಮೊದಲು ಮನೆ ಕೆಲಸದಾಕೆ ಜೊತೆ ಜಗಳವಾಡಿದ್ದಾನೆ. ಮನೆ ದೋಚಲು ಬಂದಿದ್ದಾನೆ ಎಂಬುದು ಗೊತ್ತಾಗುತ್ತಿದ್ದಂತೆ ಮಧ್ಯಪ್ರವೇಶ ಮಾಡಿದ ಸೈಫ್‌ ಆಲಿಖಾನ್‌ ಇಬ್ಬರನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ.

ಸಿಟ್ಟಿನ ಭರದಲ್ಲಿ ಆಗುಂತಕ ಹರಿತವಾದ ಆಯುಧದಿಂದ ಸೈಫ್‌ ಮೇಲೆ ಹಲ್ಲೆ ನಡೆಸಿದ್ದರಿಂದ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಪಶ್ಚಿಮ ಮುಂಬೈನ ಬಾಂದ್ರಾದಲ್ಲಿರುವ ಸೈಫ್‌ ಆಲಿಖಾನ್‌ ಇರುವ ಫ್ಲಾಟ್‌ ನಗರದ ಅತ್ಯಂತ ಪ್ರತಿಷ್ಠಿತ ಫ್ಲಾಟ್‌ ಎಂದೇ ಗುರುತಿಸಿಕೊಂಡಿದೆ. ಇಲ್ಲಿ ದಿನದ 24 ಗಂಟೆಯೂ ಭದ್ರತಾ ಸಿಬ್ಬಂದಿಗಳು ಕಾವಲಿಗೆ ಇರುತ್ತಾರೆ. ಈ ಭದ್ರತೆಯನ್ನು ಬೇಧಿಸಿ ಹೇಗೆ ಆಗುಂತಕರು ಒಳಗೆ ಬಂದಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಮನೆ ಕೆಲಸದವರ ಮೇಲೆ ಶಂಕೆ:
ಇಂಚಿಂಚು ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ಸಿಸಿಟಿವಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ಹಾಗೂ ಎಫ್‌ಎಸ್‌‍ಎಲ್‌ ತಜ್ಞರು ಬಂದಿದ್ದರು.ಸಿಸಿಟಿವಿಯಲ್ಲಿ ಆಗುಂತಕರು ಬಂದಿರುವ ದೃಶ್ಯಗಳು ಇಲ್ಲದಿರುವ ಕಾರಣ ಮನೆ ಕೆಲಸದವರ ಮೇಲೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮುಂಬೈನ ಕ್ರೈಮ್‌ ಬ್ರಾಂಚ್‌ ವಿಭಾಗದ ಪೊಲೀಸರು ಸೈಫ್‌ ಆಲಿಖಾನ್‌ ನಿವಾಸದಲ್ಲಿರುವ ಕೆಲಸಗಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ನಾವು ಎಫ್‌ಐಆರ್‌ ದಾಖಲಿಸಿಕೊಂಡಿದ್ದು, ದಾಳಿಕೋರರನ್ನು ಸೆರೆ ಹಿಡಿಯಲು ಅನೇಕ ತಂಡಗಳನ್ನು ರಚಿಸಿದ್ದೇವೆ. ಒಂದು ಮೂಲಗಳ ಪ್ರಕಾರ ಸೈಫ್‌ ಆಲಿಖಾನ್‌ ಬೆನ್ನು ಮೂಳೆ ಮುರಿದಿದ್ದು, ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ಹೆಸರು ಬಹಿರಂಗಪಡಿಸಿದ ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇಹದ ಮೇಲೆ ಒಟ್ಟು ಆರು ಗಾಯಗಳಾಗಿವೆ. ಎರಡು ಬಾರಿ ಗಂಭೀರವಾಗಿ ಇರಿತಕ್ಕೊಳಗಾಗಿದ್ದು, ಅದರಲ್ಲಿ ಎರಡು ಗಾಯವು ಬೆನ್ನು ಮೂಳೆ ಹತ್ತಿರದಲ್ಲಿವೆ. ತಜ್ಞ ವೈದ್ಯರಾದ ನರಶಸ್ತ್ರ ಚಿಕಿತ್ಸಕ ನಿತಿನ್‌ ದಾಂಡೆ, ಸೌಂದರ್ಯವರ್ಧಕ ಶಸ್ತ್ರಚಿಕಿತ್ಸಕ ಲೀನ ಜೈನ್‌, ಅರವಳಿಕೆ ತಜ್ಞ ನಿಶಗಾಂಧಿ ಅವರು ಶಸ್ತ್ರ ಚಿಕಿತ್ಸೆ ನಡೆಸುತ್ತಿದ್ದಾರೆ.
ಶಸ್ತ್ರ ಚಿಕಿತ್ಸೆಯ ನಂತರವೇ ಹಾನಿಯ ಪ್ರಮಾಣ ಗೊತ್ತಾಗಲಿದೆ ಎಂದು ಮೂಲಗಳು ಖಚಿತಪಡಿಸಿವೆ.

ಭಾರತದ ಹೆಸರಾಂತ ಕ್ರಿಕೆಟ್‌ ಆಟಗಾರ ಮನ್ಸೂರ್‌ ಆಲಿಖಾನ್‌ ಅವರ ಪುತ್ರರಾದ ಸೈಫ್‌ ಆಲಿಖಾನ್‌ ಮೂಲತಃ ರಾಜಸ್ಥಾನದ ರಾಜವಂಶಸ್ಥ ಕುಟುಂಬದವರು. ವಿದೇಶದಲ್ಲಿ ವ್ಯಾಸಂಗ ಮಾಡಿದ್ದರೂ ಬಾಲಿವುಡ್‌ ನಟನಾಗುವ ಕನಸು ಕಂಡಿದ್ದರು.

ತಾನೇ ಇಷ್ಟಪಟ್ಟು ನಟಿ ಅಮೃತ್‌ಸಿಂಗ್‌ ಅವರನ್ನು ವಿವಾಹವಾಗಿದ್ದರು. ಅವರಿಗೆ ಪುತ್ರಿ ಸಾರಾ ಆಲಿಖಾನ್‌, ಪುತ್ರ ಇಮ್ರಾಹಿಂ ಸೈಫ್‌ ಆಲಿಖಾನ್‌ ಇದ್ದರು. ಕುಟುಂಬದಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಅಮೃತ್‌ ಸಿಂಗ್‌ ಅವರಿಗೆ ವಿಚ್ಛೇಧನ ನೀಡಿ ತನ್ನ ಗೆಳತಿ ಕರಿನಾ ಕಪೂರ್‌ ಅವರನ್ನು ಮದುವೆಯಾದರು. ಪ್ರಸ್ತುತ ಈ ದಂಪತಿಗೆ ತೈಮೂರ್‌ ಮತ್ತು ಜಿಹ್‌ ಸೈಫ್‌ ಆಲಿಖಾನ್‌ ಎಂಬ ಮಕ್ಕಳಿದ್ದಾರೆ.

RELATED ARTICLES

Latest News