ನವದೆಹಲಿ,ಜ.16- ರಾಷ್ಟ್ರೀಯ ಹೆದ್ದಾರಿಗಳಲ್ಲಿ ಖಾಸಗಿ ವಾಹನಗಳಿಗೆ ಟೋಲ್ ಸಂಗ್ರಹದ ಬದಲು ಮಾಸಿಕ ಮತ್ತು ವಾರ್ಷಿಕ ಪಾಸ್‌ಗಳನ್ನು ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಖಾಸಗಿ ವಾಹನಗಳು ಒಟ್ಟು ಟೋಲ್ ಸಂಗ್ರಹದಲ್ಲಿ ಕೇವಲ ಶೇ. 26 ರಷ್ಟಿವೆ. ಗ್ರಾಮಸ್ಥರ ಸಂಚಾರಕ್ಕೆ ತೊಂದರೆಯಾಗದಂತೆ ಹಳ್ಳಿಗಳ ಹೊರಗೆ ಟೋಲ್ ಸಂಗ್ರಹಣಾ ಕೇಂದ್ರವನ್ನು ಸ್ಥಾಪಿಸಲಾಗುವುದು.
ಟೋಲ್ ಆದಾಯದ ಶೇ.74 ರಷ್ಟು ವಾಣಿಜ್ಯ ವಾಹನಗಳಿಂದ ಬರುತ್ತದೆ. ಖಾಸಗಿ ವಾಹನಗಳಿಗೆ ಮಾಸಿಕ ಅಥವಾ ವಾರ್ಷಿಕ ಪಾಸ್‌ಗಳನ್ನು ಪರಿಚಯಿಸುವ ಬಗ್ಗೆ ನಾವು ಪರಿಗಣಿಸುತ್ತಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ.
ಒಟ್ಟು ಟೋಲ್ ಸಂಗ್ರಹದಲ್ಲಿ ಖಾಸಗಿ ವಾಹನಗಳು ಕೇವಲ ಶೇ.26 ರಷ್ಟಿದ್ದು, ಸರ್ಕಾರಕ್ಕೆ ಯಾವುದೇ ನಷ್ಟವಾಗುವುದಿಲ್ಲ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಆರಂಭದಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆರಹಿತ ಜಾಗತಿಕ ಸಂಚರಣೆ ಉಪಗ್ರಹ ವ್ಯವಸ್ಥೆ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಫಾಸ್ಟ್ ಟ್ಯಾಗ್ ಜೊತೆಗೆ ಹೆಚ್ಚುವರಿ ಸೌಲಭ್ಯವಾಗಿ ಜಾರಿಗೆ ತರಲು ನಿರ್ಧರಿಸಿದೆ ಎಂದಿದ್ದಾರೆ.
ಜಾಗತಿಕ ಸಂಚರಣೆ ಉಪಗ್ರಹ ವ್ಯವಸ್ಥೆ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯು ಪ್ರಸ್ತುತ ಟೋಲ್ ಸಂಗ್ರಹ ವ್ಯವಸ್ಥೆಗಿಂತ ಉತ್ತಮವಾಗಿರುತ್ತದೆ. ಕಳೆದ ವರ್ಷ ಜುಲೈನಲ್ಲಿ, ಕರ್ನಾಟಕದ 275 ರ ಬೆಂಗಳೂರು-ಮೈಸೂರು ವಿಭಾಗ ಮತ್ತು ಹರಿಯಾಣದ 709 ರ ಪಾಣಿಪತ್-ಹಿಸಾರ್ ವಿಭಾಗದಲ್ಲಿ ಆಧಾರಿತ ಬಳಕೆದಾರ ಶುಲ್ಕ ಸಂಗ್ರಹ ವ್ಯವಸ್ಥೆಗೆ ಸಂಬಂಧಿಸಿದಂತೆ ಪ್ರಾಯೋಗಿಕ ಅಧ್ಯಯನವನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.