ಬೆಂಗಳೂರು,ಜ.16- ಯಾವುದಾದರೂ ಹುದ್ದೆ ಬೇಕಾದರೆ ಅದನ್ನು ಹೈಕಮಾಂಡ್ ಗಮನಕ್ಕೆ ತರಬೇಕು. ಮಾಧ್ಯಮಗಳ ಮೂಲಕ ಹೇಳಿಕೆ ನೀಡುವುದರಿಂದ ಅವಕಾಶಗಳು ದೊರೆಯುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ವಿಮಾನನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಇತ್ತೀಚಿನ ಬೆಳವಣಿಗೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈವರೆಗೂ ಬಹುತೇಕ ಶಾಂತಸ್ವರೂಪವಾಗಿಯೇ ಯಾವ ನಾಯಕರನ್ನೂ ಬಿಟ್ಟುಕೊಡದೆ ಸಮರ್ಥಿಸಿಕೊಂಡು ಮಾತನಾಡುತ್ತಿದ್ದ ಡಿ.ಕೆ.ಶಿವಕುಮಾರ್ ಇದೇ ಮೊದಲ ಬಾರಿಗೆ ಸತೀಶ್ ಜಾರಕಿಹೊಳಿ ಅವರ ಧೋರಣೆಗೆ ಸಿಡಿಮಿಡಿ ವ್ಯಕ್ತಪಡಿಸಿದ್ದಾರೆ.
ಯಾವುದೇ ಹುದ್ದೆ ಬೇಕಾದರೂ ಅದನ್ನು ಮಾಧ್ಯಮಗಳು ನೀಡುವುದಿಲ್ಲ. ಪಕ್ಷದ ನಾಯಕರು ತಾವು ಮಾಡುವ ಕೆಲಸವನ್ನು ಗಮನಿಸಿ ಅವಕಾಶ ಕಲ್ಪಿಸುತ್ತಾರೆ. ಅದನ್ನು ಬಿಟ್ಟು ಮಾಧ್ಯಮಗಳಲ್ಲಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದ್ದಾರೆ.ಯಾರಿಗಾದರೂ ಯಾವುದೇ ಹುದ್ದೆ ಬೇಕಾದರೆ ಅದು ಅಂಗಡಿಯಲ್ಲಿ ಸಿಗುವುದಿಲ್ಲ. ಪಕ್ಷದ ನಾಯಕರು ಗುರುತಿಸಿ ಸ್ಥಾನಮಾನಗಳನ್ನು ನೀಡುತ್ತಾರೆ. ಮಾಧ್ಯಮಗಳ ಮೂಲಕ ಯಾರಾದರೂ ಹುದ್ದೆಗಳನ್ನು ಕೇಳುತ್ತಾರೆಯೇ?, ಇದನ್ನೆಲ್ಲಾ ಹೊಸದಾಗಿ ನೋಡುತ್ತಿದ್ದೇನೆ ಎಂದರು.
ಸಹನೆ ಕಳೆದುಕೊಂಡ ಡಿ.ಕೆ.ಶಿವಕುಮಾರ್ :
ಸಚಿವ ಸತೀಶ್ ಜಾರಕಿಹೊಳಿ ಹಾಗೂ ಕೆ.ಎನ್.ರಾಜಣ್ಣ ಅವರ ವಿವಾದಿತ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದ ಡಿ.ಕೆ.ಶಿವಕುಮಾರ್ ಸಂಬಂಧಪಟ್ಟ ಸಚಿವರ ಬಳಿಯೇ ಮಾಧ್ಯಮದವರು ಪ್ರಶ್ನೆ ಕೇಳಲಿ ಎಂದು ಸಿಟ್ಟಿನಿಂದ ನಿರ್ಗಮಿಸಿದರು.
ಇತ್ತೀಚಿನ ದಿನಗಳಲ್ಲಿ ಜಾರಕಿಹೊಳಿ, ಕೆ.ಎನ್.ರಾಜಣ್ಣ ಬಹಿರಂಗವಾಗಿಯೇ ಡಿ.ಕೆ.ಶಿವಕುಮಾರ್ ವಿರುದ್ಧ ಹೇಳಿಕೆ ನೀಡುವ ಮೂಲಕ ಗೊಂದಲ ಮೂಡಿಸಿದ್ದರು. ಒಬ್ಬರಿಗೆ ಒಂದೇ ಹುದ್ದೆ ಎಂದು ಹೇಳುತ್ತಲೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗಬೇಕು ಎಂದು ಪ್ರತಿಪಾದಿಸಿದ್ದರು. ಇದರ ಹಿಂದೆ ಜಾತಿ ಜನಗಣತಿ ವರದಿ ಸಂಪುಟದಲ್ಲಿ ಮಂಡಿಸಿ ಅನುಷ್ಠಾನಗೊಳಿಸುವ ಪ್ರಯತ್ನಗಳು ನಡೆದಿದ್ದವು. ಅದಕ್ಕಾಗಿ ಡಿ.ಕೆ.ಶಿವಕುಮಾರ್ ಅವರನ್ನು ಗುರಿಯಾಗಿಸಿ ಕೆಲ ನಾಯಕರು ತೆರೆಮರೆಯ ಸಂಚು ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಪರಸ್ಪರ ಮುಖ ತಿರುಗಿಸಿಕೊಂಡ ಸಿಎಂ-ಡಿಸಿಎಂ :
ನಿನ್ನೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಾತಿ ಜನಗಣತಿ ವರದಿಯನ್ನು ಸದ್ಯಕ್ಕೆ ಸಂಪುಟದ ಮುಂದೆ ತರುವುದು ಬೇಡ. ಪ್ರಸ್ತುತ ಸಂದರ್ಭದಲ್ಲಿ ಮತ್ತಷ್ಟು ಗೊಂದಲಗಳು ಹೆಚ್ಚಾಗಿವೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಸಂಪುಟದಲ್ಲಿ ಮಂಡನೆಯಾಗಬೇಕಾಗಿದ್ದ ಜಾತಿ ಜನಗಣತಿ ವರದಿ ಮುಂದೂಡಿಕೆಯಾಗಿದೆ. ಹೈಕಮಾಂಡ್ ಮೇಲೆ ಈ ವಿಷಯವಾಗಿ ಒತ್ತಡ ಹೇರಿದ್ದು ಡಿಕೆ.ಶಿವಕುಮಾರ್ ಎಂಬ ಅನುಮಾನ ಬಹಳಷ್ಟು ಕಾಂಗ್ರೆಸ್ ನಾಯಕರಿಗಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯನವರ ಕಟ್ಟಾ ಅನುಯಾಯಿಗಳಲ್ಲಿ ಮಿತಿಮೀರಿದ ಅಸಹನೆಯಿದೆ.
ಡಿ.ಕೆ.ಶಿವಕುಮಾರ್ ಅವರನ್ನು ಯಾವುದಾದರೂ ಒಂದು ಹುದ್ದೆಯಿಂದ ತೆಗೆಯಲು ಪ್ರಯತ್ನಗಳಾಗುತ್ತಿವೆ. ಅದಕ್ಕಾಗಿಯೇ ಸಿದ್ದರಾಮಯ್ಯನವರ ಬೆಂಬಲಿಗರಾದ ಕೆ.ಎನ್.ರಾಜಣ್ಣ, ಸತೀಶ್ ಜಾರಕಿಹೊಳಿ, ಆರ್.ಬಿ.ತಿಮಾಪುರ್ ಸೇರಿದಂತೆ ಹಲವರು ಬಹಿರಂಗ ಹೇಳಿಕೆಗಳನ್ನು ನೀಡಿ ಗೊಂದಲ ಮೂಡಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ನಿನ್ನೆ ದೆಹಲಿಯಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿ ವಕುಮಾರ್ ಇಬ್ಬರೂ ಇದ್ದರೂ ಪ್ರತ್ಯೇಕವಾಗಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದಾರೆ. ಪರಿಸ್ಥಿತಿ ತಿಳಿಯಾಗಿದ್ದ ಸಂದರ್ಭದಲ್ಲಿ ಇಬ್ಬರು ನಾಯಕರು ಒಟ್ಟಾಗಿಯೇ ಹೈಕಮಾಂಡ್ ನಾಯಕರ ಜೊತೆ ಚರ್ಚೆ ಮಾಡುವುದು ಕಂಡುಬರುತ್ತಿತ್ತು. ಆದರೆ ಪ್ರಸ್ತುತ ಸಂದರ್ಭದಲ್ಲಿ ಇಬ್ಬರ ನಡುವೆ ಮೇಲ್ನೊಟಕ್ಕೆ ಸೌಹಾರ್ದತೆಯಿದ್ದರೂ ಒಳಗೊಳಗೇ ಅಸಮಾಧಾನ ಹೊಗೆಯಾಡುತ್ತಲೇ ಇದೆ. ಇದಕ್ಕೆ ಪೂರಕ ಎಂಬಂತೆ ಸಚಿವರು ಕಾಲಕಾಲಕ್ಕೆ ಹೇಳಿಕೆಗಳನ್ನು ನೀಡಿ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ.
ಇಷ್ಟು ದಿನ ಯಾರು, ಏನೇ ಹೇಳಿದರೂ ನಾನು ಬಹಿರಂಗವಾಗಿ ಪ್ರತಿಕ್ರಿಯಿಸುವುದಿಲ್ಲ ಎನ್ನುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಮೊದಲ ಬಾರಿಗೆ ಸಹನೆ ಕಳೆದುಕೊಂಡು ಸತೀಶ್ ಜಾರಕಿಹೊಳಿಯವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮುನ್ನಲೆಗೆ ಬಂದ ಬೆಳಗಾವಿ ರಾಜಕಾರಣ :
ಇತ್ತೀಚೆಗೆ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಬೆಳಗಾವಿಯ ಜಿಲ್ಲಾ ಕಾಂಗ್ರೆಸ್ ಕಚೇರಿ ನಿರ್ಮಾಣ ವಿಚಾರವಾಗಿ ಡಿ.ಕೆ.ಶಿವಕುಮಾರ್ ಹಾಗೂ ಸತೀಶ್ ಜಾರಕಿಹೊಳಿ ನಡುವೆ ಕಾವೇರಿದ ಮಾತುಕತೆಯಾಗಿತ್ತು. ಅದರ ಬೆನ್ನಲ್ಲೇ ನಿನ್ನೆ ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗಬೇಕು ಎಂದು ಹೇಳಿಕೆ ನೀಡಿ ಮತ್ತಷ್ಟು ಪರಿಸ್ಥಿತಿಯನ್ನು ಹದಗೆಡಿಸಿದ್ದರು.ಪಕ್ಷದಿಂದ ಎಚ್ಚರಿಕೆ ಸಂದೇಶ ರವಾನೆಯಾಗುತ್ತಿದ್ದಂತೆ ಸಂಜೆ ವೇಳೆಗೆ ವಿಡಿಯೋ ಮೂಲಕ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡುವ ಯತ್ನ ಮಾಡಿದರು.
ಬೆಳಗಾವಿಯಲ್ಲಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ತುರ್ತು ಪತ್ರಿಕಾಗೋಷ್ಠಿ ನಡೆಸಿ ಸತೀಶ್ ಜಾರಕಿಹೊಳಿಯವರ ಹೇಳಿಕೆಯನ್ನು ಬೆಂಬಲಿಸಿದ್ದು ಹೊಸ ಬೆಳವಣಿಗೆಯಾಗಿತ್ತು. ಇದು ಕಾಂಗ್ರೆಸ್‌ನಲ್ಲಿ ಒಳಗೊಳಗೇ ನಡೆಯುತ್ತಿರುವ ಜಿದ್ದಾಜಿದ್ದಿನ ರಾಜಕಾರಣವನ್ನು ಬಹಿರಂಗಗೊಳ್ಳುವಂತೆ ಮಾಡಿತ್ತು.ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಬಹಿರಂಗವಾಗಿಯೇ ತಮ ಅಸಹನೆಯನ್ನು ಹೊರಹಾಕಿದ್ದಾರೆ.