ಮುಂಬೈ,ಜ.16- ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ನಡೆದಿರುವ ಹಲ್ಲೆ ಇದೀಗ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದ್ದು, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣವು, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಸೆಲೆಬ್ರಿಟಿಗಳಿಗೆ ರಕ್ಷಣೆ ಇಲ್ಲ ಎಂದ ಮೇಲೆ, ಇನ್ನು ಜನಸಾಮಾನ್ಯರ ಪಾಡೇನು ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣ ಪ್ರಶ್ನಿಸಿದೆ.
ಈ ಕುರಿತು ಎಕ್‌್ಸನಲ್ಲಿ ಟ್ವೀಟ್ ಮಾಡಿರುವ ಶಿವಸೇನೆ(ಯುಬಿಟಿ) ನಾಯಕಿ ಮತ್ತು ರಾಜ್ಯಸಭಾ ಸದಸ್ಯರಾದ ಪ್ರಿಯಾಂಕಾ ಚತುರ್ವೇದಿ, ರಾಜಧಾನಿ ಮುಂಬೈನಲ್ಲಿ ಸೆಲೆಬ್ರಿಟಿಗಳೇ ಸುರಕ್ಷತೆಯ ಕೊರತೆ ಎದುರಿಸುತ್ತಿದ್ದಾರೆ ಎಂದರೆ ಜನಸಾಮಾನ್ಯರು ಪರಿಸ್ಥಿತಿ ಹೇಗಿರಬೇಡ? ಎಂದು ಪ್ರಶ್ನಿಸಿದ್ದಾರೆ.
ಮುಂಬೈನಲ್ಲಿ ಮತ್ತೊಬ್ಬ ಸೆಲೆಬ್ರಿಟಿ ಮೇಲೆ ಹಲ್ಲೆ ನಡೆದಿದೆ. ಸೈಫ್ ಅಲಿ ಖಾನ್ ಮೇಲಿನ ದಾಳಿಯು ಮುಂಬೈ ಪೊಲೀಸರು ಮತ್ತು ಗೃಹ ಸಚಿವರ ಕಾರ್ಯವೈಖರಿ ಮೇಲೆ ಪ್ರಶ್ನೆ ಹುಟ್ಟುಹಾಕುತ್ತದೆ. ಸೈಫ್ ಅಲಿ ಖಾನ್ ಅವರ ಮೇಲಿನ ದಾಳಿಯು, ಮುಂಬೈ ನಗರವನ್ನು ದುರ್ಬಲಗೊಳಿಸುವ ಉದ್ದೇಶಪೂರ್ವಕ ಪ್ರಯತ್ನದ ಮುಂದುವರೆದ ಭಾಗ ಎಂಬ ಅನುಮಾನ ಕಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಬಾಬಾ ಸಿದ್ದಿಕಿ ಹತ್ಯೆ, ನಟ ಸಲಾನ್ ಖಾನ್‌ಗೆ ಬರುತ್ತಿರುವ ಕೊಲೆ ಬೆದರಿಕೆಗಳು ಮತ್ತು ಈಗ ಸೈಫ್ ಅಲಿ ಖಾನ್ ಮೇಲಿನ ದಾಳಿಯಿಂದಾಗಿ, ದೇಶ ವಾಸಿಗಳಲ್ಲಿ ಮುಂಬೈ ನಗರ ಸುರಕ್ಷಿತವಲ್ಲ ಎಂಬ ಭಾವನೆ ಮೂಡುವಂತಾಗಿದೆ. ಈ ಎಲ್ಲಾ ಘಟನೆಗಳು ಸೆಲೆಬ್ರಿಟಿಗಳು ಮತ್ತು ನಗರದ ಪ್ರತಿಷ್ಠಿತ ವ್ಯಕ್ತಿಗಳಿರುವ ಬಾಂದ್ರಾದಲ್ಲೇ ನಡೆಯುತ್ತಿದ್ದು, ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು ಎಂದು ಚತುರ್ವೇದಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಳೆದ ರಾತ್ರಿ ಕಳ್ಳತನದ ಯತ್ನದ ಸಂದರ್ಭದಲ್ಲಿ, ಆಗಂತುಕನೊಬ್ಬ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದಾನೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ. ಸೈಫ್ ಅಲಿ ಖಾನ್ ಅವರ ಮನೆಗೆ ತಡರಾತ್ರಿ ಸುಮಾರು 2-30 ಗಂಟೆಗೆ ನುಗ್ಗಿದ ಅಪರಿಚತ ವ್ಯಕ್ತಿ, ಬಾಲಿವುಡ್ ನಟನ ಮೇಲೆ ಹರಿತವಾದ ಆಯುಧದಿಂದ ದಾಳಿ ಮಾಡಿದ್ದಾನೆ ಎನ್ನಲಾಗಿದೆ.
ಘಟನೆಯಲ್ಲಿ ಸೈಫ್ ಅಲಿ ಖಾನ್ ಅವರ ಬೆನ್ನಿನ ಮೂಳೆಯ ಭಾಗದಲ್ಲಿ ಗಾಯವಾಗಿದ್ದು, ಮೂರ್ನಾಲ್ಕು ಕಡೆ ಇರಿತದ ಗುರುತು ಕಂಡುಬಂದಿದೆ. ಸದ್ಯ ಲೀಲಾವತಿ ಆಸ್ಪತ್ರೆಯಲ್ಲಿ ಸೈಫ್ ಅಲಿ ಖಾನ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, 54 ವರ್ಷದ ಬಾಲಿವುಡ್ ನಟ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಖಚಿತಪಡಿಸಿವೆ.