ಮುಂಬೈ,ಜ.16-ಆಗುಂತಕರ ಚಾಕು ಇರಿತಕ್ಕೊಳಗಾಗಿ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟ ಸೈಫ್ ಅಲಿಖಾನ್ ಅಗರ್ಭ ಶ್ರೀಮಂತ ಕುಟುಂಬದ ಹಿನ್ನಲೆಯಿಂದ ಬಂದವರು. ಮೂಲತಃ ರಾಜಸ್ಥಾನ ಪಟೋಡಿ ರಾಜಮನೆತನಕ್ಕೆ ಸೇರಿದ ಸೈಫ್ ಆಲಿಖಾನ್ ತಂದೆ ಮನ್ಸೂರ್ ಅಲಿ ಖಾನ್ ಪಟೋಡಿ, ಅವರ ತಾತ, ಮುತ್ತಾತ ಹೀಗೆ ಅನೇಕರು ರಾಜಮನೆತನಕ್ಕೆ ಸೇರಿದವರು.
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದ ಈ ಕುಟುಂಬ ಈಗಲೂ ರಾಜಸ್ಥಾನ, ಹರಿಯಾಣ, ದೆಹಲಿ, ಉತ್ತರಪ್ರದೇಶದಲ್ಲಿ ಸಾವಿರಾರು ಕೋಟಿ ಮೌಲ್ಯದ ಆಸ್ತಿ ಹೊಂದಿದೆ. ಇವುಗಳಲ್ಲಿ ಹೋಟೆಲ್, ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಲಾಗಿದ್ದು, ಒಂದು ಅಂದಾಜಿನ ಪ್ರಕಾರ ಸೈಫ್ ಆಲಿಖಾನ್ ಅವರ ಕುಟುಂಬದ ಆಸ್ತಿ ಅಂದಾಜು 2 ಸಾವಿರ ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ.
2ನೇ ಪತ್ನಿ ಕರೀನಾ ಕಪೂರ್ ಆಸ್ತಿಯು ಅಂದಾಜು 500 ಕೋಟಿಯಷ್ಟಿದೆ ಎಂದು ಅಂದಾಜಿಸಲಾಗಿದೆ. ಸೈಫ್ ಆಲಿಖಾನ್ಗೆ ಆಗುಂತಕರು ಚಾಕು ಇರಿದಿದ್ದಾರೆ ಎಂಬ ಸುದ್ದಿ ಹೊರಬರುತ್ತಿದ್ದಂತೆ ಗೂಗಲ್ನಲ್ಲಿ ಸಾವಿರಾರು ಮಂದಿ ಅವರ ಆಸ್ತಿಯ ಮೌಲ್ಯ, ಕುಟುಂಬದ ಹಿನ್ನಲೆ ಸೇರಿದಂತೆ ಹಲವು ಕುತೂಹಲಕಾರಿ ವಿಷಯಗಳ ಬಗ್ಗೆ ಸರ್ಚ್ ಮಾಡಿದ್ದಾರೆ.
ಸೈಫ್ ಅವರ ಅದೃಷ್ಟ ಎಂದರೆ ಪಟೌಡಿ ಅರಮನೆ ಇದೆ. ಇದು ಹರ್ಯಾಣದಲ್ಲಿ 800 ಕೋಟಿ ರೂ. ಮೌಲ್ಯದ ವಿಸ್ತಾರವಾದ ಎಸ್ಟೇಟ್ ಆಗಿದೆ. ಇಬ್ರಾಹಿಂ ಕೋಠಿ ಎಂದು ಕರೆಯಲ್ಪಡುವ ಈ ರಾಜಮನೆತನದ ಆಸ್ತಿ 10 ಎಕರೆಗಳಷ್ಟು ವ್ಯಾಪಿಸಿದೆ. 150 ಕೊಠಡಿಗಳನ್ನು ಹೊಂದಿದೆ. 1900ರ ದಶಕದ ಆರಂಭದಲ್ಲಿ ಪಟೌಡಿಯ 8ನೇ ನವಾಬ್ ಇಫ್ತಿಕರ್ ಆಲಿ ಖಾನ್ ನಿರ್ಮಿಸಿದ, ಅದರ ವಸಾಹತು ಶೈಲಿಯ ವಾಸ್ತುಶಿಲ್ಪವು ದೆಹಲಿಯ ಇಂಪೀರಿಯಲ್ ಹೋಟೆಲ್ನಿಂದ ಪ್ರೇರಿತವಾಗಿದೆ.
ಸೈಫ್ ಅಲಿ ಖಾನ್ ಅವರ ಆಸ್ತಿಗಳಲ್ಲಿ ಹೆಚ್ಚಾಗಿ ಪೂರ್ವಜರ ಮಹಲುಗಳು, ಕಾರು ಸಂಗ್ರಹಣೆಗಳು, ಉತ್ಪಾದನಾ ಮನೆಗಳು ಮತ್ತು ಹಲವಾರು ಐಷಾರಾಮಿ ಮನೆಗಳಿವೆ. ಅಲ್ಲದೆ ಸೈಫ್ ಪ್ರತಿ ಸಿನಿಮಾದಲ್ಲಿ ನಟಿಸಲು 10-15 ಕೋಟಿ ರೂ.ಗಳನ್ನು ಪಡೆದುಕೊಳ್ಳುತ್ತಾರಂತೆ. ಆದಿಪುರುಷ ಚಿತ್ರದಲ್ಲಿ ರಾವಣನ ಪಾತ್ರ ಮಾಡಲು 12 ಕೋಟಿ ತೆಗೆದುಕೊಂಡಿದ್ದಾರೆ. ಬ್ರಾಂಡ್ ಎಂಡಾಸ್ರೆಂಟ್ಗಳಿಂದ 1-5 ಕೋಟಿ ಗಳಿಸಲು ಹೆಸರುವಾಸಿಯಾಗಿದ್ದಾರೆ. ಒಂದು ಜಾಹೀರಾತಿಗೆ ಅವರು 3 ಕೋಟಿ ರೂ.ವರೆಗೆ ಚಾರ್ಜ್ ಮಾಡುತ್ತಾರೆ.
ಪತ್ನಿ ಕರೀನಾ ಕಪೂರ್ ಖಾನ್ ಅವರು 485 ಕೋಟಿ ರೂ.ಗಳ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ, ಅವರನ್ನು ಬಾಲಿವುಡ್ನ ಅತ್ಯಂತ ಶ್ರೀಮಂತ ದಂಪತಿ ಎಂದೂ ಕರೆಯಲಾಗುತ್ತದೆ.
ಅಷ್ಟೇ ಅಲ್ಲದೇ ಸೈಫ್ ಅಲಿ ಖಾನ್ ಮುಂಬೈನ ಟರ್ನರ್ ರಸ್ತೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಐಷಾರಾಮಿ ಅಪಾರ್ಟ್ಮೆಂಟ್ ಹೊಂದಿದ್ದಾರೆ. ವಾಸ್ತುಶಿಲ್ಪಿ ವಿನ್ಯಾಸದ ಎರಡು ಬಂಗಲೆಗಳನ್ನು ಹೊಂದಿದ್ದಾರೆ. ಸೈಫ್ ಅಲಿ ಖಾನ್ ಇಲ್ಯುಮಿನಾಟಿ ಫಿಲ್‌್ಸ ಮತ್ತು ಬ್ಲ್ಯಾಕ್ ನೈಟ್ ಫಿಲ್‌್ಸ ಎಂಬ ಸ್ವಂತ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ಇದಲ್ಲದೇ ಸೈಫ್ ಸಾಂಪ್ರದಾಯಿಕ ಉಡುಗೆ ಬ್ಯುಸಿನೆಸ್ ಮಾಡುತ್ತಿದ್ದಾರೆ.
ಸೈಫ್ ಅಲಿ ಖಾನ್ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಬಿಎಂಡಬ್ಲ್ಯು 7 ಸಿರೀಸ್, ಲೆಕ್ಸಸ್ 470, ಮುಸ್ತಾಂಗ್, ರೇಂಜ್ ರೋವರ್, ಲ್ಯಾಂಡ್ ಕ್ರೂಸರ್ ಸೇರಿದಂತೆ ಅನೇಕ ಐಷಾರಾಮಿ ಕಾರುಗಳಿವೆ. ಇದರ ಬೆಲೆ 50 ಲಕ್ಷದಿಂದ 2 ಕೋಟಿ ರೂ. ಇದೆ.ಕ್ರೀಡಾ ಉತ್ಸಾಹಿ, ಸೈಫ್ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ ನಲ್ಲಿ ಟೈಗರ್ಸ್ ಆಫ್ ಕೋಲ್ಕತ್ತಾದ ಸಹ-ಮಾಲೀಕರಾಗಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಸೈಫ್ ಅಲಿ ಖಾನ್ ಸುಮಾರು 5 ಸಾವಿರ ಕೋಟಿ ಮೌಲ್ಯದ ಪೂರ್ವಜರ ಆಸ್ತಿಯನ್ನು ಹೊಂದಿದ್ದಾರೆ, ಇದರಲ್ಲಿ ಹರಿಯಾಣದ ಪಟೌಡಿ ಅರಮನೆಯ ಜೊತೆಗೆ, ಅವರು ಭೋಪಾಲ್ನಲ್ಲೂ ಸಾಕಷ್ಟು ಆಸ್ತಿ ಹೊಂದಿದ್ದಾರೆ. ಆದರೆ ಸೈಫ್ ತಮ ಮಕ್ಕಳಾದ ಮಗಳು ಸಾರಾ ಅಲಿ ಖಾನ್ ಮತ್ತು ಮಕ್ಕಳಾದ ಇಬ್ರಾಹಿಂ ಅಲಿ, ತೈಮೂರ್ ಅಲಿ ಮತ್ತು ಜೆಹ್ ಅಲಿ ಅವರಿಗೆ ತನ್ನ ಆಸ್ತಿಯಲ್ಲಿ ಒಂದು ಪೈಸೆಯನ್ನೂ ಪಾಲು ನೀಡಲು ಸಾಧ್ಯವಿಲ್ಲ ಎಂದು ವರದಿಯಾಗಿದೆ.
ಸೈಫ್ ಅಲಿ ಖಾನ್ ಅವರ ಮುತ್ತಜ್ಜ ಹಮೀದುಲ್ಲಾ ಖಾನ್ ಅವರು ಬ್ರಿಟಿಷ್ ಆಳ್ವಿಕೆಯಲ್ಲಿ ನವಾಬರಾಗಿದ್ದರು. ಅವರು ತಮ ಸಂಪೂರ್ಣ ಆಸ್ತಿಯ ಉಯಿಲು ಮಾಡಲು ಸಾಧ್ಯವಾಗಿಲ್ಲ.