ಬೆಂಗಳೂರು, ಜ.16- ಪ್ರದೇಶ್ ಕಾಂಗ್ರೆಸ್ಗೆ ಪೂರ್ಣ ಪ್ರಮಾಣದ ಅಧ್ಯಕ್ಷರು ಇರಬೇಕಾಗುತ್ತದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಮುಂದುವರೆಯುತ್ತಾರೆಂದು ಪಕ್ಷದ ಹೈಕಮಾಂಡ್ ಹೇಳಿದರೆ ಒಪ್ಪುತ್ತೇವೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ನಮ ಪಕ್ಷದ ಹಿರಿಯ ನಾಯಕರು. ಅವರು ಹೇಳಿರುವುದರಲ್ಲಿ ತಪ್ಪು ಹುಡುಕಬಾರದು. ಸತೀಶ್ ಜಾರಕಿಹೋಳಿ ಅಭಿಪ್ರಾಯಕ್ಕೆ ನನ್ನ ಸಂಪೂರ್ಣ ಸಹಮತ ಇದೆ ಎಂದರು.
ಲೋಕಸಭಾ ಚುನಾವಣೆ ನಂತರ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಬೇಕೆಂದು ಹೇಳಿದ್ದ ಹಿನ್ನೆಲೆಯಲ್ಲಿ ಗೊಂದಲವಾಗಿದೆ. ಯಾರಿಗಾದರೂ ಅಧ್ಯಕ್ಷ ಸ್ಥಾನ ಕೊಡಲಿ ನಮ ಅಭ್ಯಂತರವಿಲ್ಲ. ಪೂರ್ಣ ಪ್ರಮಾಣದ ಅಧ್ಯಕ್ಷರಾದರೆ ಸರಿ ಆಗುತ್ತದೆ. ಲೋಕಸಭಾ ಚುನಾವಣೆ ನಡೆದು 6 ತಿಂಗಳು ಆಗಿದೆ. ಹೈಕಮಾಂಡ್ ನಾಯಕರೇ ಗೊಂದಲ ಮಾಡಿದ್ದು, ಅವರೇ ನಿವಾರಣೆ ಮಾಡಬೇಕು ಎಂದು ಅವರು ಹೇಳಿದರು.
ಮುಂದಿನ ವಿಧಾನಸಭೆ ಚುನಾವಣೆಗೆ ಅವರ ನಾಯಕತ್ವದಲ್ಲೇ ಹೋಗುತ್ತೇವೆ ಎಂದು ಹೇಳಲಿ. ಆದರೆ, ಮೊದಲು ಹೈಕಮಾಂಡ್ ಗೊಂದಲ ಬಗೆಹರಿಸಬೇಕು. ಸಚಿವ ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಾದರೆ ಸಂತೋಷ. ಜನ ಪರ ಕೆಲಸ ಮಾಡಿದ್ದಾರೆ. ಎಲ್ಲರಿಗೂ ಸಿಗುತ್ತಾರೆ ಮತ್ತು ಎಲ್ಲರಿಗೂ ಗೌರವ ಕೊಡುತ್ತಾರೆ. ಅಂಥವರು ಅಧ್ಯಕ್ಷರಾದರೆ ನಾನು ಸ್ವಾಗತ ಮಾಡುತ್ತೇನೆ.
ಕೆಲವು ಸಚಿವರ ಬದಲಾವಣೆ ಮಾಡುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಸಿದ ಅವರು, ಅದೆಲ್ಲ ನನಗೆ ಗೊತ್ತಿಲ್ಲ. ಮುಖ್ಯಮಂತ್ರಿ ಬದಲಾವಣೆ, ಸಿಎಂ ಆಯ್ಕೆಯನ್ನು ಹೈಕಮಾಂಡ್ ಮಾಡುತ್ತದೆ. ಹಾಗೆಯೇ ಸಚಿವರ ಬದಲಾವಣೆ ಬಗ್ಗೆಯೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಸಂಪುಟದಲ್ಲಿ ಯಾರು ಇರಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡಲಿ. ಆ ಪಟ್ಟಿಯಲ್ಲಿ ನನ್ನ ಹೆಸರು ಇದ್ದರು ಪರವಾಗಿಲ್ಲ, ಸಂತೋಷ ಎಂದರು.