ನವದೆಹಲಿ, ಜ.16- ಚಿತ್ರೀಕರಣದ ವೇಳೆ ಉಂಟಾದ ಹೃದಯಾಘಾತದಿಂದಾಗಿ ಬೋಜ್‌ಪುರಿ ನಟ, ನಿರ್ಮಾಪಕ ಸುದೀಪ್ ಪಾಂಡೆ (54) ನಿನ್ನೆ ನಿಧನರಾಗಿದ್ದಾರೆ. ಹತ್ತು ದಿನಗಳ ಹಿಂದಷ್ಟೇ ತಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಸುದೀಪ್ ಪಾಂಡೆ, ಪರೊ ಪಟ್ನವಾಲಿ ಚಿತ್ರದ ಚಿತ್ರೀಕರಣಕ್ಕಾಗಿ 10 ದಿನಗಳ ಕಾಲ ಮುಂಬೈನಲ್ಲೇ ನೆಲೆಸಿದ್ದರು.
ನಿನ್ನೆ ಶೂಟಿಂಗ್ ವೇಳೆ ಹೃದಯಾಘಾತ ಉಂಟಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
2007ರಲ್ಲಿ ಭೊಜ್‌ಪುರಿ ಬಯ್ಯಾ ಚಿತ್ರದ ಮೂಲಕ ಬಣ್ಣದ ಲೋಕ ಪ್ರವೇಶಿಸಿದ ಸುದೀಪ್, ಪ್ಯಾರ್ ಮೇ, ಖೂನಿ ದಂಗಲ್, ಧರ್ತಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಲ್ಲದೆ, ಬಾಲಿವುಡ್ ನ ವಿ ಫಾರ್ ವಿಕ್ಟರ್ ಎಂಬ ಚಿತ್ರವನ್ನು ನಿರ್ಮಿಸಿದ್ದರು.
ಚಿತ್ರದ ಶೀರ್ಷಿಕೆಯಂತೆ ಈ ಸಿನಿಮಾವು ಅವರಿಗೆ ಯಶಸ್ಸು ತಂದುಕೊಡದೆ ಸಾಲದ ಸುಳಿಗೆ ಸಿಲುಕಿದ್ದರು. ಚಿತ್ರರಂಗವಲ್ಲದೆ ರಾಜಕೀಯದಲ್ಲೂ ತಮನ್ನು ಗುರುತಿಸಿಕೊಂಡಿದ್ದ ಸುದೀಪ್ , ಬಿಹಾರ ಪ್ರವಾಸೋದ್ಯಮದ ರಾಯಭಾರಿಯಾಗಿದ್ದರು.
ಬಿಹಾರ್ ಕಿ ಖೋಜ್, ಸಾತ್ ವಚನ್ ಸಾತ್ ಫೇರ್ ಕಾರ್ಯಕ್ರಮಗಳ ನಿರೂಪಕರಾಗಿದ್ದ ಸುದೀಪ್ ಪಾಂಡೆ ಅವರು ಫಿಟ್ನೆಸ್ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರೂ ಕೂಡ ಹೃದಯಾಘಾತದಿಂದ ನಿಧನರಾಗಿರುವುದು ಚಿತ್ರರಂಗ ಹಾಗೂ ಅವರ ಅಭಿಮಾನಿಗಳಲ್ಲಿ ಅಚ್ಚರಿ ಉಂಟುಮಾಡಿದೆ.