ಬೆಂಗಳೂರು, ಜ.17– ನಿನ್ನೆ ಹಾಡಹಗಲೇ ಬೀದರ್‌ನಲ್ಲಿ ಗುಂಡುಹಾರಿಸಿ ಕೊಲೆ ಮಾಡಿ 93 ಲಕ್ಷ ಹಣ ದರೋಡೆ ಮಾಡಿದ ಬೆನ್ನಲ್ಲೇ ಇಂದು ಮಧ್ಯಾಹ್ನ ಮಂಗಳೂರಿನ ಉಲ್ಲಾಳ ಸಮೀಪದ ಕೋ-ಆಪರೇಟಿವ್ ಸೊಸೈಟಿ ಬ್ಯಾಂಕ್‌ಗೆ ನುಗ್ಗಿದ ದರೋಡೆಕೋರರು ಬಂದೂಕು ತೋರಿಸಿ ಹಣ-ಆಭರಣ ದೋಚಿ ಪರಾರಿಯಾಗಿದ್ದಾರೆ.
ಉಲ್ಲಾಳದ ಕೆಸಿ ರಸ್ತೆಯಲ್ಲಿರುವ ಬ್ಯಾಂಕ್‌ಗೆ ಫಿಯೆಟ್ ಕಾರಿನಲ್ಲಿ ಬಂದ ಐದರಿಂದ ಆರು ಮಂದಿ ದರೋಡೆಕೋರರು ಒಳನುಗ್ಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಬಂದೂಕು ತೋರಿಸಿ ಬೆದರಿಸಿ ಅಲ್ಲಿದ್ದ ನಗದು, ಆಭರಣಗಳನ್ನು ಎರಡು ಬ್ಯಾಗ್‌ಗಳಲ್ಲಿ ತುಂಬಿಕೊಂಡು ತಾವು ಬಂದಿದ್ದ ಕಾರಿನಲ್ಲಿ ಹೋಗಿದ್ದಾರೆ.
ಸುದ್ದಿ ತಿಳಿದ ಉಲ್ಲಾಳ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ದರೋಡೆಕೋರರು ಎಷ್ಟು ಹಣ ಮತ್ತು ಚಿನ್ನಾಭರಣ ದೋಚಿಕೊಂಡು ಹೋಗಿದ್ದಾರೆ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.
ಮಂಗಳೂರು ನಗರದಾದ್ಯಂತ ನಾಕಾಬಂದಿ ಮಾಡಿ ದರೋಡೆಕೋರರ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ದರೋಡೆಕೋರರು ಸುಮಾರು 20 ರಿಂದ 30 ವರ್ಷದ ವಯಸ್ಸಿನವರಾಗಿದ್ದು, ಹಿಂದಿಯಲ್ಲಿ ಪರಸ್ಪರ ಮಾತನಾಡುತ್ತಿದ್ದರೆಂದು ತಿಳಿದುಬಂದಿದೆ.