ಬೆಂಗಳೂರು, ಜ.17- ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯ ವೇಳೆ ಜಾತಿ ಗಣತಿ ಮಾಡುವ ಭರವಸೆ ನೀಡಲಾಗಿತ್ತು. ಅದು ಇಂದಲ್ಲ ನಾಳೆ ರಾಜ್ಯದಲ್ಲಿ ಆ ವರದಿ ಅನುಷ್ಠಾನಕ್ಕೆ ಬರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿಯನ್ನು ತಡೆಯುತ್ತಿರುವುದು ಯಾರು ಎಂದು ಗೊತ್ತಿಲ್ಲ. ಪಕ್ಷದ ಪ್ರಣಾಳಿಕೆಯಲ್ಲಿ ಸಮೀಕ್ಷಾ ವರದಿಯನ್ನು ಬಹಿರಂಗ ಪಡಿಸುವುದಾಗಿ ತಿಳಿಸಲಾಗಿತ್ತು. ಅದನ್ನು ಒಪ್ಪುವುದಿಲ್ಲ ಎಂದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಪ್ರಗತಿಪರ ಕಾರ್ಯಕ್ರಮಗಳನ್ನು ಜಾರಿಗೆ ತರುವಾಗ ಸಾಕಷ್ಟು ಬದಲಾವಣೆಗಳು, ವಿರೋಧಗಳು ಸಹಜ. ಆದರೆ ಪಕ್ಷದ ಭರವಸೆಯನ್ನು ದಿಟ್ಟವಾಗಿ ಜಾರಿಗೆ ತರಬೇಕಿದೆ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸಂಘ ಪರಿವಾರದವರು ಅಂಬೇಡ್ಕರ್ ದ್ವೇಷಿಗಳು. ಸಂವಿಧಾನ ದ್ರೋಹಿಗಳು. ಅಮಿತ್ ಶಾ ಅಂಬೇಡ್ಕರ್ ಬಗ್ಗೆ ಈಗಾಗಲೇ ಅವಮಾನಕಾರಿ ಹೇಳಿಕೆ ನೀಡಿದ್ದಾರೆ. ಈಗ ಮೋಹನ್ ಭಾಗವತ್ ರಾಮಮಂದಿರ ಉದ್ಘಾಟನೆ ನಂತರ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಹೇಳಿದ್ದಾರೆ. ವಾಸ್ತವ ವಾಗಿ ಆರ್ ಎಸ್ ಎಸ್ ನೋಂದಣಿಯಾಗದ ಅನಧಿಕೃತ ಸಂಘಟನೆ. ಕೋಟ್ಯಂತರ ರೂಪಾಯಿಯನ್ನು ಬೇರೆ ಮೂಲಗಳಿಂದ ಖರ್ಚು ಮಾಡುತ್ತಿದ್ದಾರೆ. ಯಾವುದಕ್ಕೂ ಲೆಕ್ಕ ಇಲ್ಲ.
ಮೋಹನ್ ಭಾಗವತ್ ಯಾರು ಎಂದು ಝಡ್ ಪ್ಲಸ್ ಭದ್ರತೆ ನೀಡಲಾಗಿದೆ. ಜನರ ತೆರಿಗೆ ದುಡ್ಡನ್ನು ಈ ರೀತಿ ಪೋಲು ಮಾಡಿ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ವ್ಯಕ್ತಿಗೆ ಭದ್ರತೆ ನೀಡಲಾಗುತ್ತಿದೆ. ಕೂಡಲೇ ಭದ್ರತೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಸಂಘ ಪರಿವಾರ ಸಂವಿಧಾನ ಹಾಗೂ ತ್ರಿವರ್ಣ ಧ್ವಜವನ್ನು ಒಪ್ಪುವುದಿಲ್ಲ. ಹಿಂದೆಯೇ ವಿರೋಧ ಮಾಡಿದ್ದರು. ಸಂವಿಧಾನ ಬದಲಾವಣೆಯನ್ನೂ ಮೌನವಾಗಿ ಮಾಡಬೇಕು. ಬಹಿರಂಗವಾಗಿ ಚರ್ಚೆ ಮಾಡಬಾರದು ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಸಂವಿಧಾನ ಹಾಗೂ ತ್ರಿವರ್ಣ ಧ್ವಜ ಒಪ್ಪದೆ ಇರುವವರು ತಾಲಿಬಾನ್ಗಳು. ಇವರಿಂದ ದೇಶ ಏನನ್ನು ನಿರೀಕ್ಷೆ ಮಾಡಲಾಗುವುದಿಲ್ಲ ಎಂದರು.
ಸಾವಿರಾರು ಜನರು ತ್ಯಾಗ ಬಲಿದಾನ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಅದನ್ನು ಅಪಮಾನಿಸಲಾಗುತ್ತಿದೆ. ದೇಶದಲ್ಲಿ ಸಂವಿಧಾನ ಇಲ್ಲ ಎಂದರೆ ಶಿಕ್ಷಣ, ಆರೋಗ್ಯ ಎಲ್ಲವೂ ಒಂದು ವರ್ಗಕ್ಕೆ ಸೀಮಿತವಾಗಲಿದೆ. ಈ ಬಗ್ಗೆ ಜನ ಸಾಮಾನ್ಯರು ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು.
ಹಿಂದೆ ಬಿಜೆಪಿ ಸರ್ಕಾರ ಭೂ ಸುಧಾರಣೆ ಕಾಯ್ದೆ, ಮತಾಂತರ ಕಾಯ್ದೆ ತಿದ್ದುಪಡಿ ಮಾಡಿತ್ತು, ಅದನ್ನು ಕಾಂಗ್ರೆಸ್ ಸರ್ಕಾರ ತಿದ್ದುಪಡಿ ಮಾಡಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕರ್ನಾಟಕ ಎಲ್ಲಾ ರಾಜ್ಯಗಳಿಂತ ಮೊದಲು ಚರ್ಚೆ ಮಾಡಿದೆ. ಅದನ್ನು ಜಾರಿಗೆ ತರಬೇಕು.
ಸಂಘ ಪರಿವಾರದ ಜೊತೆ ಸಂಪರ್ಕ ಇಟ್ಟುಕೊಂಡವರು ಸರ್ಕಾರದಲ್ಲಿ ಈಗಲೂ ಆಯಕಟ್ಟಿನ ಜಾಗದಲ್ಲಿದ್ದಾರೆ. ಅವರನ್ನು ದೂರ ಇಡಬೇಕಿದೆ. ನಮ ಸರ್ಕಾರ ಗ್ಯಾರಂಟಿಯಲ್ಲಿ ಮುಳುಗಿ ಹೋಗಿದ್ದೇವೆ. ಈ ವಿಚಾರಗಳ ಕುರಿತು ಪಕ್ಷ ಮತ್ತು ಸರ್ಕಾರ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯಿಸಿದರು.ಪಕ್ಷದಲ್ಲಿ ಯಾವುದೇ ಗೊಂದಲಗಳು ಇಲ್ಲ. ಎಲ್ಲರಿಗೂ ತಮ ಅಭಿಪ್ರಾಯ ಹೇಳಿಕೊಳ್ಳಲು ನಮಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಹೈಕಮಾಂಡ್ ಎಲ್ಲವನ್ನೂ ಬಗೆ ಹರಿಸುತ್ತದೆ ಎಂದರು.