ಬೆಂಗಳೂರು,ಜ.17- ಕರ್ನಾಟಕ ಜನತೆಯ ದಶಕಗಳ ಕನಸು ಕೊನೆಗೂ ನನಸಾಗಿದ್ದು, ಬಹುದಿನಗಳ ಬೇಡಿಕೆಯಂತೆ ಅಮೆರಿಕದ ದೂತಾವಾಸ (ಯುಎಸ್ ಕಾನ್ಸುಲೇಟ್) ಕಚೇರಿಯು ಇಂದು ಸಾರ್ವಜನಿಕರ ಸೇವೆಗೆ ಲೋಕಾರ್ಪಣೆಯಾಗಿದೆ. ಕರ್ನಾಟಕದ ಜನತೆಯು ಅಮೆರಿಕಾಕ್ಕೆ ಪ್ರಯಾಣಿಸ ಬೇಕೆಂದರೆ ವೀಸಾ ಪಡೆಯಲು ದೂರದ ದೆಹಲಿ, ಚೆನ್ನೈ, ಹೈದರಾಬಾದ್ ಹಾಗೂ ಮುಂಬೈಗೆ ತೆರಳಬೇಕಿತ್ತು. ಇದನ್ನು ತಪ್ಪಿಸಲು ರಾಜಧಾನಿ ಬೆಂಗಳೂರಿನಲ್ಲಿ ಶಾಶ್ವತವಾಗಿ ಕಾರ್ಯ ನಿರ್ವಹಿಸುವ ಧೂತಾವಾಸ ಕಚೇರಿಯನ್ನು ಈಗ ತೆರೆಯಲಾಗಿದೆ.ಅಮೆರಿಕ ದೂತವಾಸ ಕಚೇರಿಯಲ್ಲಿ ವೀಸಾ ಸೇವೆ ಇನ್ನು ಲಭ್ಯವಾಗಿಲ್ಲ. ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದು, ಒಂದು ವಾರದ ನಂತರ ಇಲ್ಲಿಂದಲೇ ವೀಸಾಗಳನ್ನು ಪಡೆದು ಪ್ರಯಾಣಿಸಬಹುದು.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಜಯಶಂಕರ್, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಬಿ.ಪಾಟೀಲ್, ಪ್ರಿಯಾಂಕ ಖರ್ಗೆ, ಸಂಸದರಾದ ತೇಜಸ್ವಿ ಸೂರ್ಯ, ಡಾ.ಸಿ.ಎನ್.ಮಂಜುನಾಥ್, ಭಾರತದಲಿರುವ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಜಿ ಖ್ಯಾತ ಉದ್ಯಮಿ ಕಿರಣ್ ಮಂಜುಂದರ್ ಷಾ, ಕ್ರಿಸ್ ಗೋಪಾಲಕೃಷ್ಣನ್, ಯುಎಸ್ ದೂತವಾಸ ಅಧಿಕಾರಿಗಳುಮತ್ತಿತರರು ಭಾಗಿಯಾಗಿದ್ದರು.
ಇತ್ತೀಚೆಗೆ ನಡೆದ ಅಮೆರಿಕ ಮತ್ತು ಭಾರತ ಬಿಸಿನೆಸ್ ಕೌನ್ಸಿಲ್ (ಯುಎಸ್ಐಬಿಸಿ) ಸಂವಾದದಲ್ಲಿ ಮಾತನಾಡಿದ್ದ ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ, ಬೆಂಗಳೂರಿನಲ್ಲಿ ಅಮೆರಿಕ ರಾಯಭಾರ ಕಚೇರಿ ಆರಂಭಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದ್ದೇವೆ. ಬೆಂಗಳೂರಿನಲ್ಲಿ ದೂತವಾಸ ಕಚೇರಿ ಹೊಂದಿರದ ಏಕೈಕ ದೇಶ ಅಮೆರಿಕ ಆಗಿತ್ತು. ಆದರೆ, 2025ರ ಜನವರಿಯಲ್ಲಿ ರಾಯಭಾರ ಕಚೇರಿ ಕಾರ್ಯಾರಂಭ ಮಾಡಲಿದೆ ಎಂದು ಘೋಷಿಸಿದ್ದರು.
ಸದ್ಯ ಧೂತವಾಸ ಕಚೇರಿಯು ನಗರದ ವಿಠಲಮಲ್ಯ ರಸ್ತೆಯಲ್ಲಿರುವ ಜೆಡಬ್ಲ್ಯು ಮ್ಯಾರಿಯೇಟ್ ಹೋಟೆಲ್ನಲ್ಲಿ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸಲಿದೆ. ನಂತರ ನಗರದ ಪ್ರಮುಖ ಭಾಗವೊಂದರಲ್ಲಿ ಶಾಶ್ವತ ಕಚೇರಿ ಸ್ಥಾಪನೆಯಾಗಲಿದೆ. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಒಡಂಬಡಿಕೆ ಮಾಡಿಕೊಂಡಿವೆ.
ಅಮೆರಿಕದ ಪ್ರಮುಖ ನಗರಗಳಿಂದ ಬೆಂಗಳೂರಿಗೆ ನೇರ ವಿಮಾನಯಾನ ಸೌಲಭ್ಯ ಇದೆ. ಆದರೆ ಆದರೆ ವೀಸಾ ಮತ್ತಿತರ ಕೆಲಸಗಳಿಗೆ ಬೇಕಾದ ಸೌಕರ್ಯ ಇರಲಿಲ್ಲ. ಇನ್ನು ಮುಂದೆ ಅಮೆರಿಕಕ್ಕೆ ಶಿಕ್ಷಣ, ಉದ್ಯೋಗ, ವ್ಯವಹಾರಕ್ಕೆ ಹೋಗುವವರಿಗೆ ಇಲ್ಲೇ ವೀಸಾ ಸಿಗಲಿದೆ.ಆರಂಭದಲ್ಲಿ ಒಂದು ಒಂದು ಮಿತಿಯಲ್ಲಿ ವೀಸಾ ನೀಡಲಾಗುತ್ತದೆ. ಶಾಶ್ವತ ಕಚೇರಿ ಆರಂಭವಾದ ಬಳಿಕ ಸಂಪೂರ್ಣವಾಗಿ ಕಚೇರಿ ಸಿಬ್ಬಂದಿ ತಮ ಕೆಲಸದಲ್ಲಿ ತೊಡಗಲಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಅಮೆರಿಕ ಕಾನ್ಸುಲೆಟ್ ಕಚೇರಿ ಸ್ಥಾಪನೆಯಿಂದ ಸಾಕಷ್ಟು ಅನುಕೂಲವಾಗಲಿದೆ. ಐಟಿ-ಬಿಟಿ, ವಿದ್ಯಾರ್ಥಿಗಳಿಗೆ, ಉದ್ಯಮಿಗಳಿಗೆ ಅನುಕೂಲವಾಗಲಿದೆ. ಮುಂಬೈ ಬಳಿಕ ಬೆಂಗಳೂರಿನಲ್ಲಿ ಅಮೆರಿಕ ದೂತವಾಸ ಕಚೇರಿ ಆರಂಭವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಅಮೆರಿಕಾದ ರಾಯಭಾರ ಕಚೇರಿ ಆಗಬೇಕೆಂದು ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾದಾಗಲೇ ಪ್ರಯತ್ನ ನಡೆಸಿದ್ದರು. ಅಂದು ಪ್ರಧಾನಿಯಾಗಿದ್ದ ವಾಜಪೇಯಿಯವರನ್ನು ಭೇಟಿ ಮಾಡಲಾಗಿತ್ತು. ಅಲ್ಲಿಂದ ಪ್ರಯತ್ನ ನಡೆದರೂ ಆಗಿರಲಿಲ್ಲ. ಇದೀಗ ಅನುಷ್ಠಾನವಾಗುತ್ತಿರುವುದು ಖುಷಿಯ ವಿಚಾರ. ಬೆಂಗಳೂರು ಜಾಗತಿಕವಾಗಿ ಬೆಳೆದಿದೆ, ಯೋಜನಾ ಬದ್ಧವಾದ ನಗರ ಅಲ್ಲದ ಕಾರಣ ಒಂದಷ್ಟು ಸಮಸ್ಯೆ ಇರಬಹುದು.
ಅದನ್ನು ಪರಿಹರಿಸಲು ಪ್ರಯತ್ನ ನಡೆಸಲಾಗಿದೆ ಎಂದು ಶಿವಕುಮಾರ್ ಹೇಳಿದರು.
ದೀರ್ಘ ಕಾಲದ ಕನಸು ನನಸು:
2025ರ ಜನವರಿ ಎರಡನೇ ವಾರದಲ್ಲಿ ಅಮೆರಿಕ ರಾಯಭಾರ ಕಚೇರಿ ಆರಂಭಿಸುತ್ತಿರುವುದು ಬೆಂಗಳೂರಿಗೆ ಐತಿಹಾಸಿಕ ಮೈಲುಗಲ್ಲು. ಅಮೆರಿಕ ರಾಯಭಾರ ಕಚೇರಿ ಆರಂಭದೊಂದಿಗೆ ಬೆಂಗಳೂರಿನ ನಾಗರಿಕರ ದೀರ್ಘಕಾಲದ ಕನಸು ನನಸಾಗುತ್ತಿದೆ ಎಂದು ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿಅಮೆರಿಕ ರಾಯಭಾರ ಕಚೇರಿ ಆರಂಭವಾಗುತ್ತಿರುವುದರಿಂದ ಸಾವಿರಾರು ವಿದ್ಯಾರ್ಥಿಗಳು, ಐಟಿ ವೃತ್ತಿಪರರು ಮತ್ತು ಉದ್ಯಮಿಗಳಿಗೆ ವೀಸಾ ಪ್ರಕ್ರಿಯೆ ಸರಳವಾಗಲಿದೆ. ಜತೆಗೆ ದ್ವಿಪಕ್ಷೀಯ ವ್ಯಾಪಾರ ಮತ್ತು ಸಹಯೋಗ ವೃದ್ಧಿಸಲಿದೆ. ವಿಶೇಷವಾಗಿ ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರ, ವಾಣಿಜ್ಯ ಮತ್ತು ಜಾಗತಿಕ ಕೇಂದ್ರವಾಗಿ ಬೆಂಗಳೂರಿನ ಸ್ಥಾನ ಇನ್ನಷ್ಟು ಬಲಗೊಳ್ಳುತ್ತದೆ.
ವೈಟ್ ಫೀಲ್ಡ್ ನಲ್ಲಿ ಕಚೇರಿ?:
ಐಟಿ ಬಿಟಿ ಕಂಪನಿಗಳು ಹೆಚ್ಚಿರುವ ವೈಟ್ ಫೀಲ್ಡ್ ನಲ್ಲಿ ಯೇ ಬೆಂಗಳೂರಿನ ಅಮೆರಿಕ ಕಾನ್ಸುಲೇಟ್ ಕಚೇರಿ ಆರಂಭವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ರಾಜ್ಯದ ಐಟಿಬಿಟಿ ಹಾಗೂ ಕೈಗಾರಿಕಾ ಸಚಿವರ ಜತೆ ಮಾತುಕತೆ ಕೂಡ ಆಗಿದೆ ಎನ್ನಲಾಗಿದೆ.
20ರಿಂದ 30 ಸಾವಿರ ರೂ. ಉಳಿತಾಯ: ಬೆಂಗಳೂರಿನಲ್ಲಿ ಹಲವು ದೇಶಗಳ ಕಾನ್ಸುಲೇಟ್ ಕಚೇರಿಗಳಿದ್ದರೂ, ಅಮೆರಿಕ ರಾಯಭಾರ ಕಚೇರಿ ಇರಲಿಲ್ಲ. ದೇಶದ ಸಾಫ್‌್ಟವೇರ್ ವಲಯದ ರಫ್ತಿನಲ್ಲಿ ಬೆಂಗಳೂರಿನ ಪಾಲು ಸುಮಾರು ಶೇಕಡಾ 40ರಷ್ಟಿದ್ದರೂ, ಬೆಂಗಳೂರಿಗರು ಅಮೆರಿಕ ವೀಸಾಕ್ಕಾಗಿ ಚೆನ್ನೈಅಥವಾ ಹೈದರಾಬಾದ್ಗೆ ಹೋಗಬೇಕಿತ್ತು. ಇದು ತ್ರಾಸದಾಯಕವಾಗಿತ್ತು. ಮಾತ್ರವಲ್ಲದೇ, 20ರಿಂದ 30 ಸಾವಿರ ರೂ. ಖರ್ಚಾಗುತ್ತಿತ್ತು. ಸದ್ಯ ಆ ಮೊತ್ತವು ಉಳಿತಾಯವಾಗಲಿದೆ ಎನ್ನಲಾಗಿದೆ.
ಅಮೆರಿಕ – ಭಾರತ ಸಂಬಂಧ ಸುಧಾರಣೆಗೆ ಹೊಸ ಭಾಷ್ಯ
ಕರ್ನಾಟಕದ ರಾಜಧಾನಿ ಹಾಗೂ ಮಾಹಿತಿ ತಂತ್ರಜ್ಞಾನದ ಸಿಲಿಕಾನ್ ವ್ಯಾಲಿ ಎಂದೇ ಗುರು ತಿಸಿಕೊಂಡಿರುವ ಬೆಂಗಳೂರಿನಲ್ಲಿ ನೂತನ ಅಮೆರಿಕ ದೂತಾವಾಸ ಕಚೇರಿ ಆರಂಭಗೊಂಡಿರುವುದು ಉಭಯ ದೇಶಗಳ ನಡುವಿನ ಸಂಬಂಧ ಸುಧಾರಣೆಗೆ ಹೊಸ ಭಾಷ್ಯ ಬರೆದಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಅಮೆರಿಕ ದೂತವಾಸ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈಗಾಗಲೇ 12 ದೂತವಾಸ ಕಚೇರಿ ಬೆಂಗಳೂರಲ್ಲಿವೆ. ಇನ್ನಷ್ಟು ದೇಶಗಳು ಇಲ್ಲಿ ದೂತವಾಸ ಕಚೇರಿ ತೆರೆಯಬೇಕೆಂದು ನಮ ಬಯಕೆ ಇದೆ. ಬೆಂಗಳೂರಿನಲ್ಲಿ 1 ವರ್ಷದಲ್ಲಿ 8.80 ಲಕ್ಷ ಪಾಸ್ ಪೋರ್ಟ್ ವಿತರಣೆಯಾಗಿದೆ. ಅಂದರೆ 10 ವರ್ಷ ಅವಧಿಯಲ್ಲಿ ಎಷ್ಟು ಪಾಸ್ ಪೋರ್ಟ್ ವಿತರಣೆಯಾಗಿರಬಹುದು, ಅದರ ಮಹತ್ವ ಅರಿಯಬೇಕು ಎಂದರು.
ಹೊರ ದೇಶದಲ್ಲಿ 35 ಲಕ್ಷ ಭಾರತೀಯ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 50 ಲಕ್ಷ ಭಾರತೀಯ ಕುಟುಂಬಗಳಿವೆ. ಈ ದೂತವಾಸದಿಂದ ಅವರಿಗೆ ವೀಸಾ ಸೇವೆ ಹೆಚ್ಚಿನ ಅನುಕೂಲವಾಗಲಿದೆ. ಈಗ ಬೆಂಗಳೂನಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ವಾರದಲ್ಲಿ ಮೂರು ದಿನ ವಿಮಾನ ಸಂಚರಿಸುತ್ತಿದೆ. ಇದರಿಂದ ಅಧ್ಯಯನ, ಶಿಕ್ಷಣ, ತಂತ್ರಜ್ಞಾನ, ರಕ್ಷಣಾ ಕ್ಷೇತ್ರದಲ್ಲಿ ಅಮೆರಿಕಾ-ಬೆಂಗಳೂರಿನ ಸಂಬಂಧ ವೃದ್ಧಿಸಲು ಅನುಕೂಲವಾಗಲಿದೆ ಎಂದರು.
2023ರಲ್ಲಿ ಮೋದಿಯವರು ಬೆಂಗಳೂರು ಕಾನ್ಸುಲೇಟ್ ಆರಂಭದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು. ನಾನು ಬೆಂಗಳೂರಿಗೆ ಬಂದಾಗಲೆಲ್ಲ ಅಮೆರಿಕಾ ದೂತವಾಸ ಕಚೇರಿ ಯಾವಾಗ ಆರಂಭವಾಗುತ್ತದೆ ಎಂಬ ಪ್ರಶ್ನೆ ಬರುತ್ತಿತ್ತು. ನನಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧ ಇದೆ. ನಾನು ಬೆಂಗಳೂರಿನಲ್ಲಿ ಶಿಕ್ಷಣ ಪಡೆದಿದ್ದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಿಂದ ನನ್ನ ವೃತ್ತಿ ಬದುಕು ಆರಂಭಿಸಿದ್ದೇನೆ. ಹೀಗಾಗಿ ಒಂದು ವಿಶೇಷ ಆಸಕ್ತಿ ಇತ್ತು ಎಂದು ತಿಳಿಸಿದರು.
ಯುಎಸ್ ಕಾನ್ಸುಲೇಟ್ ಕಚೇರಿ ಆರಂಭಕ್ಕೆ ಬೆಂಗಳೂರು ಅತ್ಯಂತ ಪ್ರಶಸ್ತ ಸ್ಥಳವಾಗಿದೆ. ಅಮೆರಿಕದ ರಾಜತಾಂತ್ರಿಕರ ಖಾಯಂ ಉಪಸ್ಥಿತಿಯು ಉಭಯ ದೇಶಗಳ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಬೆಂಗಳೂರಿನಲ್ಲಿ ಅಮೆರಿಕದ ದೂತವಾಸ ಕಚೇರಿ ಆರಂಭಗೊಂಡಂತೆ, ಲಾಸ್ ಏಂಜಲಿಸ್ನಲ್ಲಿ ಭಾರತದ ದೂತಾವಾಸ ಕಚೇರಿಯೂ ಆರಂಭಗೊಂಡಿದೆ ಎಂದರು.
ಇಂದು ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧವು ಹೆಚ್ಚು ತಂತ್ರಜ್ಞಾನವನ್ನು ಅವಲಂಬಿಸಿದೆ. ಅದರಂತೆ ಬಾಹ್ಯಾಕಾಶ ಕ್ಷೇತ್ರದಲ್ಲೂ ನಾವು ಹೆಚ್ಚಿನ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಗಲಿದ್ದೇವೆ. ಎರಡು ದಶಕಗಳಿಂದ ಭಾರತ-ಅಮೆರಿಕ ನಡುವಿನ ರಕ್ಷಣಾ ಸಂಬಂಧ ವೃದ್ಧಿಯಾಗುತ್ತಿದ್ದು. ವಾಣಿಜ್ಯ ಕ್ಷೇತ್ರದಲ್ಲೂ ನಾವು ಪರಸ್ಪರ ಹತ್ತಿರಕ್ಕೆ ಬಂದಿದ್ದೇವೆ ಎಂದರು.
ಇನ್ನು ಶಿಕ್ಷಣ ಮತ್ತು ಸಂಶೋಧನೆ ಕ್ಷೇತ್ರದಲ್ಲೂ ಉಭಯ ದೇಶಗಳ ನಡುವಿನ ಸಹಕಾರ ಹೆಚ್ಚಿದ್ದು, ವಿದ್ಯಾರ್ಥಿಗಳ ವಿನಿಮಯ ಮತ್ತು ಬಲವಾದ ಅಮೆರಿಕನ್ ಶಿಕ್ಷಣದ ಉಪಸ್ಥಿತಿ ನಮಗೆ ಸಂತಸ ತಂದಿದೆ. ಈ ಕಾನ್ಸುಲೇಟ್ನ ಔಪಚಾರಿಕ ಉದ್ಘಾಟನೆಯು ನಾವು ಮತ್ತಷ್ಟು ಪರಿಣಾಮಕಾರಿ ಕೆಲಸಗಳನ್ನು ಕೈಗೊಳ್ಳಲು ಉತ್ತೇಜಿಸುತ್ತದೆ ಎಂದರು.
ಒಂದು ದೇಶವಾಗಿ ನಾವು ಹಲವು ರಾಜ್ಯಗಳ ರಾಜಧಾನಿಗಳಲ್ಲಿ ಹೆಚ್ಚಿನ ರಾಯಭಾರ ಕಚೇರಿಗಳನ್ನು ತೆರೆಯುವುದನ್ನು ಪ್ರೋತ್ಸಾಹಿಸುತ್ತಿದ್ದೇವೆ. ಬೆಂಗಳೂರಿನಲ್ಲಿ ಹೆಚ್ಚಿನ ದೂತಾವಾಸಗಳನ್ನು ತೆರೆಯುವ ನಿರ್ಧಾರವು, ಭಾರತದ, ಕರ್ನಾಟಕದ ಹಾಗೂ ಬೆಂಗಳೂರಿನ ಹಿತಾಸಕ್ತಿಗೆ ಪೂರಕವಾಗಿ ಸೇವೆ ಸಲ್ಲಿಸುತ್ತದೆ ಎಂದು ಹೇಳಿದರು.
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಪ್ರಧಾನಿ ನರೇಂದ್ರಮೋದಿ ಅವರ ಪರಿಶ್ರಮದಿಂದ ಬೆಂಗಳುರಿಗೆ ಯುಎಸ್ ಕಾನ್ಸುಲೆಟ್ ಬಂದಿದೆ. ನಾನು ಈ ವಿಚಾರಕ್ಕೆ ಯುಎಸ್ ಅಧಿಕಾರಿಗಳನ್ನು ಭೇಟಿ ಮಾಡಿ ಮಾತಾಡಿದ್ದೆ. ಇವತ್ತು ಬೆಂಗಳೂರಿಗರಿಗೆ ಮತ್ತು ಕನ್ನಡಿಗರಿಗೆ ಸಂತೋಷದ ಸಂಗತಿ ಎಂದರು. ಬೆಂಗಳೂರು ಆರ್ಥಿಕ ರಾಜಧಾನಿ ಯಾಗಿ ಹೊರ ಹೊಮುತ್ತಿದೆ. ಸ್ಪೆಸ್ ಟೆಕ್ನಾಲಜಿಯಿಂದ ಎಲ್ಲದರಲ್ಲೂ ಎಮರ್ಜಿಂಗ್ ಆಗುತ್ತಿದೆ. ಲಕ್ಷಾಂತರ ಜನ ಅಮೆರಿಕ ಪ್ರವಾಸ ಮಾಡುತ್ತಾರೆ, ಓದಲು ಹೋಗುತ್ತಾರೆ. ಅವರೆಲ್ಲರೂ ಕೂಡ ಬೇರೆ ನಗರಕ್ಕೆ ವೀಸಾಗಾಗಿ ಹೋಗಬೇಕಾಗಿಲ್ಲ. ಆದಷ್ಟು ಬೇಗ ವೀಸಾ ಸೌಲಭ್ಯ ಪ್ರಾರಂಭ ಮಾಡೋದಾಗಿ ಹೇಳಿದ್ದಾರೆ. ಫುಲ್ ಫ್ಲೆಡ್‌್ಜ ಆಗಿ ಕೆಲಸ ಮಾಡುತ್ತದೆ ಎಂದು ನೂರಕ್ಕೆ ನೂರು ವಿಶ್ವಾಸ ಇದೆ ಎಂದು ಹೇಳಿದರು.