ಹಾಸನ,ಜ.18- ರಾಜಧಾನಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣ ಹಾಗೂ ನಂಜನಗೂಡಿನಲ್ಲಿ ಕರುವಿನ ಬಾಲ ಕತ್ತರಿಸಿದ ಪ್ರಕರಣಗಳು ಇನ್ನೂ ಹಸಿಯಾಗಿರುವಾಗಲೇ ಹಾಸನದಲ್ಲೊಂದು ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ.
ಆಲೂರು ತಾಲ್ಲೂಕಿನ ಹೆದ್ದುರ್ಗ ಗ್ರಾಮದ ಹೂವಣ್ಣ ಎಂಬುವವರಿಗೆ ಸೇರಿದ್ದ ಕರುವನ್ನು ಕಿರಾತಕರು ಹೊತ್ತೊಯ್ದು ಕಡಿದು ಮಾಂಸದೂಟ ಮಾಡಿದ್ದಾರೆ.ಕೊಟ್ಟಿಗೆಯಲ್ಲಿ ಕರು ಕಾಣದಿದ್ದಾಗ ಹುಡುಕಾಟ ನಡೆಸಿದ್ದಾರೆ. ಮಡಬಲು ಗ್ರಾಮದ ರೈಲ್ವೇಗಟ್ ಬಳಿ ಕರುವಿನ ರುಂಡ ಪತ್ತೆಯಾಗಿದೆ.
ಈ ಸಂಬಂಧ ಕಿರಾತಕರಾದ ಅಜ್ಗರ್, ಕೌಶಿಕ್, ಮೋಹನ್, ಮನೋಜ್, ಚಂದನ್, ಪವನ್, ಅಜಿತ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.ಹೂವಣ್ಣ 12 ಹಸುಗಳನ್ನು ಸಾಕಿದ್ದು ಅದರಲ್ಲಿ ಒಂದು ಕರುವನ್ನು ಜ.14 ರ ಮಧ್ಯರಾತ್ರಿ ದುಷ್ಕರ್ಮಿಗಳು ಕದ್ದೊಯ್ದು ಮಾಂಸದೂಟ ಮಾಡಿ ಸೇವಿಸಿದ್ದಾರೆ.
ಸಾಕ್ಷಿ ನಾಶಕ್ಕಾಗಿ ರುಂಡ ಹಾಗೂ ಕರಳು ಹಾಗೂ ಚರ್ಮವನ್ನು ನದಿಗೆ ಎಸೆಯಲು ಪ್ರಯತ್ನಿಸಿದ್ದರು. ಅಷ್ಟರೊಳಗಾಗಿ ಬೆಳಗಾದ್ದರಿಂದ ರೈತರು ಜಮೀನು ಕೆಲಸಕ್ಕೆ ಬರುತ್ತಿರುವುದನ್ನು ಕಂಡು ರುಂಡವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು ಎನ್ನಲಾಗಿದೆ.
ಈ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಏಳು ಮಂದಿ ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಆಯುಧಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.