Saturday, January 18, 2025
Homeಜಿಲ್ಲಾ ಸುದ್ದಿಗಳು | District Newsಹಾಸನ / Hassanಪ್ರಿಯಕರನ ಜೊತೆ ಸೇರಿ ಸುಪಾರಿ ಕೊಟ್ಟು ಪತಿಯ ಬರ್ಬರ ಕೊಲೆ ಮಾಡಿಸಿದ ಪತ್ನಿ

ಪ್ರಿಯಕರನ ಜೊತೆ ಸೇರಿ ಸುಪಾರಿ ಕೊಟ್ಟು ಪತಿಯ ಬರ್ಬರ ಕೊಲೆ ಮಾಡಿಸಿದ ಪತ್ನಿ

Wife who brutally murdered her husband by giving him supari along with her lover

ಹಾಸನ,ಜ.18- ಚನ್ನರಾಯಪಟ್ಟಣ ತಾಲ್ಲೂಕಿನ, ಮರುವನಹಳ್ಳಿ ಮಡಬ ರಸ್ತೆಯಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಪತ್ನಿಯೇ ಪ್ರಿಯಕರನ ಜೊತೆ ಸೇರಿ ಸುಪಾರಿ ಕೊಟ್ಟು ಬರ್ಬರವಾಗಿ ಕೊಲೆ ಮಾಡಿಸಿದ್ದಳು ಎನ್ನುವ ಅಂಶ ಬಯಲಾಗಿದೆ.

14 ವರ್ಷಗಳ ಹಿಂದೆ ಸವಿತಾ ಜೊತೆ ವಿವಾಹವಾಗಿದ್ದ ಲೋಕೇಶ ಅಲಿಯಾಸ್‌‍ ನಂಜುಂಡೇಗೌಡ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಕುಟುಂಬದೊಂದಿಗೆ ಕುಂಬಾರಹಳ್ಳಿಯಲ್ಲಿ ವಾಸವಿದ್ದರು. ಮದುವೆಯಾಗಿ ಮೂರು ವರ್ಷದವರೆಗೂ ಪತಿ ಜೊತೆ ಚೆನ್ನಾಗಿದ್ದ ಸವಿತಾ, ನಂತರ ಎದುರು ಮನೆಯ ಅರುಣ್‌ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.

ಮದುವೆಯಾಗಿ ಇಬ್ಬರು ಮಕ್ಕಳಿದ್ದು, ಪತ್ನಿಯಿಂದ ದೂರವಿದ್ದ ಆರೋಪಿ ಅರುಣ ಅಲಿಯಾನ್‌ ಆಶೋಕ, ಸವಿತಾ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಬಗ್ಗೆ ಗ್ರಾಮಸ್ಥರಿಗೆ ತಿಳಿದಿತ್ತು. ಈ ಸಂಬಂಧ ಲೋಕೇಶ್‌, ಆರುಣನ ವಿರುದ್ಧ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದ. ರಾಜಿ, ಪಂಚಾಯಿತಿ ನಡೆಸಿ ಹೊಂದಿಕೊಂಡು ಹೋಗುವಂತೆ ಕುಟುಂಬಸ್ಥರು ತಿಳಿ ಹೇಳಿದ್ದರೂ ಬದಲಾಗದ ಸವಿತಾ ತನ್ನ ಮನೆಯಲ್ಲಿ ಏನೇ ನಡೆದರೂ, ಎಲ್ಲವನ್ನೂ ಪ್ರಿಯಕರಿನಿಗೆ ತಿಳಿಸುತ್ತಿದ್ದಳು.

ತನ್ನ ಅಕ್ರಮ ಸಂಬಂಧಕ್ಕೆ ಯಾರೂ ಅಡ್ಡಿ ಬರಬಾರದೆಂದು ಪತಿಯನ್ನು ಅವರ ಸಂಬಂಧಿಕರಿಂದ ದೂರ ಮಾಡಿದ್ದಳು. ತನ್ನ ಎರಡು ಹೆಣ್ಣು ಮಕ್ಕಳಿಗಾಗಿ ಲೋಕೇಶ್‌ ಎಲ್ಲವನ್ನೂ ಸಹಿಸಿಕೊಂಡಿದ್ದನು.ಕೆಲ ದಿನಗಳ ಹಿಂದೆ ಎರಡು ಬಾರಿ ಲೋಕೇಶ (ನಂಜುಂಡೇಗೌಡ)ನ ಮೇಲೆ ಅರುಣ ತನ್ನ ಸಹಚರರೊಂದಿಗೆ ಸೇರಿ ಅಟ್ಯಾಕ್‌ ಮಾಡಿದ್ದ. ಆಗ ಅದೃಷ್ಟವಶಾತ್‌ ಲೋಕೇಶ ಬಚಾವಾಗಿದ್ದಮೂರನೇ ಬಾರಿ ತಪ್ಪಿಸಿಕೊಳ್ಳಲಾಗದಂತೆ ಸವಿತಾ ಹಾಗೂ ಅರುಣ ಖತರ್ನಾಕ್‌ ಸ್ಕೆಚ್‌ ಹಾಕಿದ್ದರು.

ಗುರುವಾರ ಸಂಜೆ ರೈತರಿಂದ ಹಾಲು ಸಂಗ್ರಹ ಮಾಡಿಕೊಂಡು ಮರುವನಹಳ್ಳಿ ಮಡಬ ಮಾರ್ಗ ಮಧ್ಯೆ ಮಹೀಂದ್ರಾ ಜಿತೋ ವಾಹನದಲ್ಲಿ ಬರುತ್ತಿದ್ದ ಲೋಕೇಶನ ಕೊಲೆಗೆ ಮೂರು ಜಾಗಗಳನ್ನು ಆರೋಪಿಗಳು ಗುರುತಿಸಿ ಸ್ಕೆಚ್‌ ಹಾಕಿದ್ದರು.

ಬ್ಯಾಡರಹಳ್ಳಿಗೆ ಹೋಗುವ ರಸ್ತೆ ಮಧ್ಯೆಯಿರುವ ಬೋರೆಯ ಬಳಿ ಮರದಪಟ್ಟಿಗೆ ಉದ್ದವಾದ 50 ಕ್ಕೂ ಹೆಚ್ಚು ಮೊಳೆ ಚುಚ್ಚಿ ರಸ್ತೆಗೆ ಇಟ್ಟು ಹುಲ್ಲು ಮುಚ್ಚಿದ್ದರು. ಇದ್ಯಾವುದೂ ತಿಳಿಯದ ಲೋಕೇಶ ಎಂದಿನಂತೆ ಹಾಲು ಅಳೆಸಿಕೊಂಡು ಗುರುವಾರ ರಾತ್ರಿ 8.30 ರ ಸುಮಾರಿಗೆ ಮಹೀಂದ್ರಾ ಜಿತೋ ವಾಹನದಲ್ಲಿ ತೆರಳುತ್ತಿದ್ದರು.

ರಸ್ತೆಯಲ್ಲಿ ಚಕ್ರಕ್ಕೆ ಮೊಳೆ ಸಿಕ್ಕಿ ಪಂಚರ್‌ ಆದ ವಾಹನದಿಂದ ತಕ್ಷಣವೇ ಕೆಳಗಿಳಿದು ಮೊಳೆ ಹೊಡೆದಿದ್ದ ರಿಪೀಸ್‌‍ ಪಟ್ಟಿ ವಾಹನಕ್ಕೆ ಹಾಕಿಕೊಂಡಿರುವುದು ಗೊತ್ತಾಯಿತು. ತಕ್ಷಣ ಲೋಕೇಶ ಸ್ನೇಹಿತ ತಮಯ್ಯ ಎಂಬುವವರಿಗೆ ಕರೆ ಮಾಡಿ, ಯಾರೋ ರಿಪೀಸ್‌‍ ಪಟ್ಟಿಗೆ ಮೊಳೆ ಹೊಡೆದು ಅದರ ಮೇಲೆ ಹುಲ್ಲು ಮುಚ್ಚಿದ್ದಾರೆ. ವಾಹನ ಪಂಚರ್‌ ಆಗಿದೆ. ಬೇಗ ಸ್ಥಳಕ್ಕೆ ಬನ್ನಿ ಎಂದು ಹೇಳಿ ವಾಹನದಲ್ಲಿ ಕುಳಿತಿದ್ದ. ಈ ವೇಳೆ ಏಕಾಏಕಿ ಅಟ್ಯಾಕ್‌ ಮಾಡಿ ಕೊಲೆಗಡುಕರು ಲೋಕೇಶನ ಕಣ್ಣಿಗೆ ಖಾರದಪುಡಿ ಎರಚಿ ಲಾಂಗ್‌ಗಳಿಂದ ಸಾಯುವವರೆಗೂ ಮನಬಂದಂತೆ ಕೊಚ್ಚಿ ಲಾಂಗನ್ನು ಅಲ್ಲೇ ಬಿಟ್ಟು ಎಸ್ಕೇಪ್‌ ಆಗಿದ್ದರು.

ಮೂರು ಹಂತದ ಸ್ಕೆಚ್‌ :
ಕೊಲೆ ಸ್ಕೆಚ್‌ ಮಿಸ್‌‍ ಆಗದಂತೆ ಒಂದೇ ರಸ್ತೆಯಲ್ಲಿ ಮೂರು ಕಡೆ ಮಾರಕಾಸ್ತ್ರವಿಟ್ಟು ಕಾಯ್ದು ಕುಳಿತಿದ್ದ ದುರುಳರು, ಒಂದು ಜಾಗದಲ್ಲಿ ಲೋಕೇಶ ತಪ್ಪಿಸಿಕೊಂಡರೂ ಮುಂದೆ ಸಿಕ್ಕಿಕೊಳ್ಳಲೇಬೇಕು ಎನ್ನುವಂತೆ ಜಾಲ ಹೆಣೆದಿದ್ದರು. ಆದರೆ ದುರದೃಷ್ಟವಶಾತ್‌ ಲೋಕೇಶ ಮೊದಲ ಹಂತದಲ್ಲಿಯೇ ಸಿಕ್ಕಿಬಿದ್ದರು. ಆತನ ಕಣ್ಣಿಗೆ ಖಾರದ ಪುಡಿ ಎರಚಿ ವಾಹನದಿಂದ ಕೆಳಗಿಳಿದ ಪಾತಕಿಗಳು ಬರ್ಬರವಾಗಿ ಕೊಲೆಗೈದಿದ್ದರು. ಸ್ನೇಹಿತರು ಸ್ಥಳಕ್ಕೆ ಬರುವುದರೊಳಗೆ ಲೋಕೇಶ ಕೊಲೆಗೈದಿದ್ದರು.

ನಾಟಕವಾಡಿದರೂ ಸಿಕ್ಕಿಬಿದ್ದಳು ಸವಿತಾ :
ಗಂಡನ ಕೊಲೆಯಾಗಿದೆ ಎಂಬ ಸುದ್ದಿ ತಿಳುತ್ತಿದ್ದಂತೆಯೇ ಕುಸಿದು ಬಿದ್ದಂತೆ ನಾಟಕವಾಡಿದ್ದ ಸವಿತಾ, ಸುಮಾರು ಅರ್ಧ ಗಂಟೆ ಪ್ರಜ್ಞಾಹೀನಳಾದಂತೆ ನಟಿಸಿದ್ದಳು.ಸವಿತಾ ಮುಖಕ್ಕೆ ನೆರೆಹೊರೆಯವರು ನೀರು ಚುಮುಕಿಸಿದರೂ ಅರ್ಧಗಂಟೆ ಮೇಲೆಳೆದ ಸವಿತಾ ನಾಟಕ ಪೊಲೀಸರ ತನಿಖೆಯಿಂದ ಬಯಲಿಗೆ ಬಂದಿದೆ.ಲೋಕೇಶವ ಸಹೋದರಿಯರು ಹಾಗೂ ಗ್ರಾಮಸ್ಥರ ಮಾಹಿತಿ ಮೇರೆಗೆ ಸವಿತಾಳನ್ನು ವಶಕ್ಕೆ ವಡೆದಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ನಿನ್ನೆ ಸಂಜೆ ಕುಂಬಾರಹಳ್ಳಿ ಗ್ರಾಮದಲ್ಲಿ ಲೋಕೇಶ್‌ ಅವರ ಅಂತ್ಯಕ್ರಿಯೆ ನಡೆದಿದ್ದು ಅವರ ಮಕ್ಕಳು ಹಾಗೂ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್‌‍ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

RELATED ARTICLES

Latest News