ಬೆಂಗಳೂರು,ಜ.18- ಮುಡಾ ಹಗರಣದಲ್ಲಿ ಬಿಜೆಪಿಯವರು ಎಷ್ಟೇ ಆಳಕ್ಕೆ ಹೋದರೂ ಅವರಿಗೇ ತಿರುಗಬಾಣವಾಗಲಿದ್ದು, ಮೂಗು ಕೊಯ್ದುಕೊಳ್ಳಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್‌ಖರ್ಗೆ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ದಾಳಿ ನಡೆಸಿ ಪತ್ರಿಕಾ ಪ್ರಕಟಣೆ ನೀಡಿರುವ ಜಾರಿ ನಿರ್ದೇಶನಾಲಯದ ಬಗ್ಗೆ ಪ್ರತಿಕ್ರಿಯಿಸಿದರು.ಕಳೆದ 10-15 ವರ್ಷಗಳಿಂದ ನಗರಾಭಿವೃದ್ಧಿ ಇಲಾಖೆಯಲ್ಲಿ ಏನು ನಡೆದಿದೆ ಎಂಬುದರ ತನಿಖೆಯಾಗಬೇಕು ಎಂದು ನಾವು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇವೆ. ಆದಾಯ ತೆರಿಗೆ ಜಾರಿ ನಿರ್ದೇಶನಾಲಯದ ತನಿಖೆಗಳಾಗಬೇಕು ಎಂದು ಹಲವು ಬಾರಿ ಒತ್ತಾಯಿಸಿದ್ದೇವೆ. ಏನೇ ನಡೆದರೂ ಎಲ್ಲವೂ ಕಾನೂನು ಪ್ರಕಾರವೇ ನಡೆಯಲಿದೆ ಎಂದರು.
ಯಾವುದಾದರೂ ಕಾನೂನು ಬಾಹಿರವಾಗಿದ್ದರೂ ಅದರ ಕುರಿತು ಕ್ರಮಗಳಾಗುತ್ತವೆ. ಮುಡಾಗೆ ಬಿಜೆಪಿ, ಜೆಡಿಎಸ್‌ನ ಪಕ್ಷದವರೂ ಕೂಡ ಸದಸ್ಯರಿದ್ದರು. ಅವರ ಆಡಳಿತದಲ್ಲಿ ಏನಾಗಿದೆ ಎಂದು ಜನರಿಗೆ ಗೊತ್ತಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳಿದ್ದಾರೆ.
ಯಾವುದೇ ತನಿಖೆಗೆ ಅಡ್ಡಿಪಡಿಸುವುದಿಲ್ಲ. ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ರಾಜ್ಯಪಾಲರ ಕಚೇರಿ ಪ್ರತಿನಿಧಿಗಳು ಯಾರನ್ನು ಬೇಕಾದರೂ ಕಳುಹಿಸಲಿ ಎಂದು ಹೇಳಿದರು.
ರಾಜ್ಯದಲ್ಲಿ ಸಚಿವರು ತಮಗೆ ವಹಿಸಿರುವ ಜವಾಬ್ದಾರಿಯನ್ನು ಅರ್ಥ ಮಾಡಿಕೊಂಡು ಬಾಯಿ ಮುಚ್ಚಿ ಕೆಲಸ ಮಾಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಈ ಹಿಂದೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅವರು ಹೇಳಿದ್ದನ್ನೇ ಎಐಸಿಸಿ ಅಧ್ಯಕ್ಷರು ಪುನರುಚ್ಚರಿಸಿದ್ದಾರೆ.
ಯಾವುದೇ ಬದಲಾವಣೆಗಳಿದ್ದರೂ ಪಕ್ಷ ಸಂಘಟನೆಯ ನೀಲನಕ್ಷೆ ಕುರಿತಂತೆ ಯಾವುದೇ ವಿಚಾರಗಳಾದರೂ ಅದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಜನ ಅಧಿಕಾರ ಕೊಟ್ಟಿದ್ದಾರೆ. ಅದನ್ನು ಬಳಸಿ ಎಲ್ಲರಿಗೂ ಅವಕಾಶ ನೀಡಲಾಗಿದೆ. ಅದರಂತೆ ಜನರ ಸೇವೆ ಮಾಡಬೇಕು ಎಂದು ಅಧ್ಯಕ್ಷರು ಮತ್ತೊಮೆ ಹೇಳಿದ್ದಾರೆ ಎಂದರು.
ತೂತು ಒಲೆ ಕೆಡಿಸುತ್ತದೆ, ಮಾತು ಮನೆ ಕೆಡಿಸುತ್ತದೆ ಎಂಬ ಗಾದೆಯಂತೆ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಯಾರ ಬಾಯಿಗೂ ಬೀಗ ಹಾಕಲಾಗುವುದಿಲ್ಲ. ಎಲ್ಲರೂ ವಿವೇಚನೆ ಅನುಸಾರ ನಡೆದುಕೊಳ್ಳಬೇಕು. ಆ ಸೂಕ್ಷ್ಮತೆಯನ್ನು ಅರಿತು ನಡೆಯಬೇಕು. ಹಿಂಬಾಲಕರಿಗೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಟಿಕೆಟ್ ಕೊಡಿಸಲು, ಶಾಸಕರಾಗಲು, ವಿಧಾನಪರಿಷತ್ ಸದಸ್ಯರಾಗಲು, ಸಂಸದರಾಗಲು ಕಾಂಗ್ರೆಸ್ ಬಿ ಫಾರಂ ಬೇಕು. ಅಧಿಕಾರ ಸಿಕ್ಕಾದ ಮೇಲೆ ಯಾವ ಕಾಂಗ್ರೆಸ್ ಪಾರ್ಟಿ?, ಎಐಸಿಸಿ ಅಧ್ಯಕ್ಷರ್ಯಾರು?, ರಾಹುಲ್‌ಗಾಂಧಿ ಯಾರು?, ದೆಹಲಿಯಲ್ಲಿ ಕುಳಿತುಕೊಂಡು ಹೈಕಮಾಂಡ್ ಏನು ಮಾಡುತ್ತದೆ ? ಎಂದೆಲ್ಲಾ ಪ್ರಶ್ನೆ ಮಾಡುವುದು ಸರಿಯಲ್ಲ. ಹೀಗಾಗಿ ಎಐಸಿಸಿ ಅಧ್ಯಕ್ಷರು ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ಹೇಳಿದರು.
ರಾಜಕಾರಣದಲ್ಲಿ ಸ್ನೇಹಿತರು ಪದೇಪೇ ಸೇರುವುದು ಸಹಜ. ಈ ರೀತಿ ಯಾವುದೇ ಸಭೆ ಮಾಡಬೇಡಿ ಎಂದು ಹೈಕಮಾಂಡ್ ಹೇಳಿಲ್ಲ. ವಿಧಾನಸೌಧದಲ್ಲೇ ಸಭೆ ನಡೆಸಬಹುದು ಎಂದು ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ. ಸಂಪುಟದಲ್ಲಿ ಭಾಗವಹಿಸಲು ಎಲ್ಲರಿಗೂ ಅವಕಾಶ ಇರುವುದಿಲ್ಲ. ಬಿಜೆಪಿಯವರು ಮೊದಲು ಅವರ ಪಕ್ಷವನ್ನು ನೋಡಿಕೊಳ್ಳಲಿ.
ಸಂಕ್ರಾಂತಿಯ ನಂತರ ವಿಜಯೇಂದ್ರ ಬದಲಾಗುತ್ತಾರೆ ಎಂದು ಅವರ ಪಕ್ಷದ ನಾಯಕರೇ ಅಧಿಕೃತವಾಗಿ ಹೇಳಿದ್ದಾರೆ. ಬಿಜೆಪಿಯನ್ನು ಯಾವ ರೀತಿ ನಾಶ ಮಾಡಬೇಕು, ನಾಯಕತ್ವವನ್ನು ಯಾವ ರೀತಿ ಬದಲಾವಣೆ ಮಾಡಬೇಕು ಎಂಬುದರಲ್ಲಿ ಬಿಜೆಪಿಯವರು ಅವರದೇ ನಾಯಕರು ಗಂಭೀರ ಚರ್ಚೆ ಮಾಡುತ್ತಿದ್ದಾರೆ. ನಮಲ್ಲಿ ಅಂತಹ ವಾತಾವರಣ ಇಲ್ಲ ಎಂದು ತಿರುಗೇಟು ನೀಡಿದರು.
ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್‌ರನ್ನು ಭೇಟಿ ಮಾಡಿ ಉದ್ಯೋಗಖಾತ್ರಿ ಯೋಜನೆಯಲ್ಲಿ ಹೊಸ ಕಾಮಗಾರಿಗಳನ್ನು ಕೈಗೊಳ್ಳಲು ಅಳವಡಿಸಿಕೊಳ್ಳಬೇಕಾದ ಬದಲಾವಣೆಗಳ ಬಗ್ಗೆ ಮನವಿ ಸಲ್ಲಿಸಿದ್ದೇನೆ ಎಂದು ಹೇಳಿದರು.