ಮೈಸೂರು, ಜ.25- ಬಿಜೆಪಿ,ಜೆಡಿಎಸ್ ಒಂದಾಗಿ ಚುನಾವಣೆ ಎದುರಿಸಿದರೂ 2028ರಲ್ಲಿ ಅವರು ಗೆಲ್ಲುವುದಿಲ್ಲ. ಮರಳಿ ಕಾಂಗ್ರೆಸ್ ಪಕ್ಷವೇ ಸರ್ಕಾರ ರಚನೆ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2004ರಲ್ಲಿ ತಾವು ಜೆಡಿಎಸ್ ರಾಜ್ಯ ಅಧ್ಯಕ್ಷರಾಗಿದ್ದಾಗ 59 ಸ್ಥಾನಗಳನ್ನು ಗೆಲ್ಲಲಾಗಿತ್ತು. ಈಗ ಜೆಡಿಎಸ್ 17 ಸ್ಥಾನಕ್ಕೆ ಕುಸಿದಿದೆ ಎಂದು ಹೇಳಿದರು.
ನಿನ್ನೆ ಹಾಸನದಲ್ಲಿ ನಡೆದ ಜೆಡಿಎಸ್ ನ 25ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ನಡೆದ ಸಮಾವೇಶದಲ್ಲಿ ತಮ ವಿರುದ್ಧ ಕೇಳಿ ಬಂದ ಟೀಕೆಗಳಿಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಎಚ್.ಡಿ.ರೇವಣ್ಣ ಅವರ ಬಂಧನ ಪ್ರಕರಣದಲ್ಲಿ ನಾವು ಹಸ್ತಕ್ಷೇಪ ಮಾಡಿರಲಿಲ್ಲ. ಅದೊಂದೆ ಅಲ್ಲ ಯಾವುದೇ ಪ್ರಕರಣದಲ್ಲೂ ರಾಜ್ಯ ಸರ್ಕಾರ ಪೊಲೀಸರ ತನಿಖೆಯಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದರು.
ಎಲ್ಲವನ್ನು ಕಾನೂನು ಪ್ರಕಾರವೇ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಒಂದು ವೇಳೆ ಜೆಡಿಎಸ್ ಅಧಿಕಾರಕ್ಕೆ ಬಂದರೆ ಆಗ ಕಾನೂನು ಪ್ರಕಾರ ಕ್ರಮಕೈಗೊಳ್ಳಲು ನಮ್ಮ ವಿರೋಧ ಇಲ್ಲ. ರೇವಣ್ಣ ಅವರ ಪ್ರಕರಣದಲ್ಲಿ ಕೆಲಸ ಮಾಡಿದ ಪೊಲೀಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಯಾವುದೇ ಉಡುಗೊರೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ನವರು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ 17 ಸ್ಥಾನಗಳಲ್ಲಿ ಗೆದ್ದಿರುವ ಅವರು, ಅದು ಹೇಗೆ 124 ಸ್ಥಾನಗಳಲ್ಲಿ ಗೆಲ್ಲುತ್ತಾರೆ? ಅದು ಅಸಾಧ್ಯದ ಮಾತು ಎಂದು ಹೇಳಿದರು. ಬಿಜೆಪಿಯವರೊಂದಿಗೆ ಜೆಡಿಎಸ್ ಈಗಾಗಲೇ ಮೈತ್ರಿ ಮಾಡಿಕೊಂಡಿದೆ. ಆದರೂ ಕಾಂಗ್ರೆಸ್ ಪಕ್ಷ 139 ಕ್ಷೇತ್ರಗಳಲ್ಲಿ ಗೆದ್ದಿತ್ತು. ಮುಂದಿನ ದಿನಗಳಲ್ಲಿ ಇಬ್ಬರೂ ಮೈತ್ರಿ ಮಾಡಿಕೊಂಡರೂ ಕಾಂಗ್ರೆಸ್ 2028 ರ ಚುನಾವಣೆಯಲ್ಲಿ ಮರಳಿ ಅಧಿಕಾರಕ್ಕೆ ಬರಲಿದೆ. ಆಗ ಯಾರ ನಾಯಕತ್ವ ಎಂಬುದನ್ನು ನಮ್ಮ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.
ಬಿಜೆಪಿಯವರು ಒಂದು ವೇಳೆ ಹೆಚ್ಚು ಸ್ಥಾನ ಗೆದ್ದರೆ ಜೆಡಿಎಸ್ ನವರಿಗೆ ಮುಖ್ಯಮಂತ್ರಿಯ ಹುದ್ದೆ ಬಿಟ್ಟು ಕೊಡುವುದಿಲ್ಲ. ಹಾಗಿದ್ದ ಮೇಲೆ ಜೆಡಿಎಸ್ ಹೇಗೆ ಅಧಿಕಾರಕ್ಕೆ ಬರುತ್ತದೆ ? ಎಂದು ಪ್ರಶ್ನಿಸಿದರು.
ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ನಾಳೆ ಗಣರಾಜ್ಯೋತ್ಸವದ ಅಂಗವಾಗಿ ಮಾಡಬೇಕಾದ ಭಾಷಣವನ್ನು ಈಗಾಗಲೇ ರಾಜ್ಯ ಸರ್ಕಾರ ಸಿದ್ಧಪಡಿಸಿಕೊಟ್ಟಿದೆ. ಅದರಲ್ಲಿ ಬದಲಾವಣೆ ಮಾಡಿಕೊಳ್ಳಲು ರಾಜ್ಯಪಾಲರಿಗೆ ಅವಕಾಶ ಇದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಮಾಡುವ ಭಾಷಣವನ್ನು ಸರ್ಕಾರ ಬರೆದುಕೊಡುತ್ತದೆ. ಅದರಲ್ಲಿ ಬದಲಾವಣೆ ಮಾಡಲು ಅವಕಾಶ ಇಲ್ಲ. ಗಣರಾಜ್ಯೋತ್ಸವದ ಭಾಷಣವನ್ನು ಬದಲಾವಣೆ ಮಾಡಿಕೊಳ್ಳಬಹುದು ಎಂದು ಹೇಳಿದರು.
ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ರಾಷ್ಟ್ರಪತಿಯವರಿಗೆ ರಾಜ್ಯಪಾಲರು ಮಾಹಿತಿ ನೀಡಿದ್ದಾರೆ ಅದರಲ್ಲಿ ತಪ್ಪೇನು ಇಲ್ಲ ಎಂದರು.
ದಾವೋಸ್ನಲ್ಲಿ ನಡೆದಿರುವ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೈಗಾರಿಕಾ ಸಚಿವರು ಭಾಗವಹಿಸಿದ್ದರು. ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಉತ್ತಮ ವಾತಾವರಣ ಇದೆ ಎಂದು ಅಲ್ಲಿ ಒಳ್ಳೆಯ ಅಭಿಪ್ರಾಯಗಳು ಕೇಳಿ ಬಂದಿವೆ ಎಂದರು.
ರಾಜ್ಯದಲ್ಲಿ ಕೌಶಲ್ಯಮತ್ತು ವಿಶಾಲ ಮಾನವ ಸಂಪನೂಲ ಹೆಚ್ಚಾಗಿದೆ. ಕೌಶಲ್ಯ ಅಭಿವೃದ್ಧಿ ತರಬೇತಿಯಿಂದ ಕೈಗಾರಿಕೆ ಹಾಗೂ ಉದ್ಯಮ ವಲಯಕ್ಕೆ ಬೇಕಾದ ಮಾನವ ಸಂಪನೂಲವನ್ನು ಸಜ್ಜುಗೊಳಿಸುತ್ತಿದ್ದೇವೆ. ಕೌಶಲ್ಯ ಅಭಿವೃದ್ಧಿ ತರಬೇತಿ ಪಡೆದವರಿಗೆ ನೂರಕ್ಕೆ ನೂರರಷ್ಟು ಕೆಲಸ ಸಿಗುತ್ತಿದೆ ಎಂದರು.
