ಬೆಂಗಳೂರು,ಜ.18– ಕರ್ನಾಟಕ ಗೂಂಡಾ ರಾಜ್ಯವಾಗುತ್ತಿದ್ದು, ಕೇವಲ ಎರಡೇ ದಿನದಲ್ಲೇ ಎರಡು ಬ್ಯಾಂಕ್ಗಳ ದರೋಡೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕವನ್ನು ಜಂಗಲ್ರಾಜ್ ಎನಿಸಿದ್ದ ಬಿಹಾರ ಮಾಡಲು ಹೊರಟ್ಟಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಬಿಹಾರದಲ್ಲಿ ಕಾಲಿಡಲು ಜನ ಹೆದರುತ್ತಿದ್ದರು. ಇಂದು ಕರ್ನಾಟಕದಲ್ಲಿ ಕೇವಲ ಎರಡು ದಿನಗಳಲ್ಲೇ ಹಾಡಹಗಲೇ ಎರಡು ಬ್ಯಾಂಕ್ಗಳಲ್ಲಿ ರಾಜಾರೋಷವಾಗಿ ದರೋಡೆ ನಡೆದಿದೆ ಎಂದರೆ ರಾಜ್ಯದಲ್ಲಿ ಗೃಹ ಇಲಾಖೆ ಬದುಕಿದೆಯೋ? ಇಲ್ಲವೇ ಸತ್ತುಹೋಗಿದೆಯೇ ಎಂದು ಪ್ರಶ್ನೆ ಮಾಡಿದರು.
ಬೀದರ್ ಹಾಗೂ ಮಂಗಳೂರಿನಲ್ಲಿ ದರೋಡೆಕೋರರು ಕೇವಲ 5 ನಿಮಿಷದಲ್ಲಿ 15 ಕೋಟಿ ದರೋಡೆ ಮಾಡಿ ಓರ್ವನನ್ನು ಹತ್ಯೆಗೈಯ್ದು ಪರಾರಿಯಾಗಿದ್ದಾರೆ. ದರೋಡೆ ರಾಜ್ಯಕ್ಕೆ ನಿಮನ್ನು ಸ್ವಾಗತ ಮಾಡುತ್ತೇವೆ ಎಂದು ಹೇಳುವಂತಹ ಪರಿಸ್ಥಿತಿ ಕರ್ನಾಟಕದಲ್ಲಿ ನಿರ್ಮಾಣವಾಗಿದೆ. ಹಿಂದೆ ಬಿಹಾರದಲ್ಲಿ ಲಾಲುಪ್ರಸಾದ್ ಯಾದವ್ ಅವಧಿಯಲ್ಲೂ ಯಾವ ಪರಿಸ್ಥಿತಿ ಇತ್ತೋ ಅದೇ ಪರಿಸ್ಥಿತಿ ಇಲ್ಲೂ ಇದೆ. ದರೋಡೆಕೋರರು ಹಾಲಿವುಡ್ ಸಿನಿಮಾ ರೀತಿ ದರೋಡೆ ಮಾಡಿ ಪರಾರಿಯಾಗುತ್ತಿದ್ದಾರೆ ಎಂದು ಕುಹುಕವಾಡಿದರು.
ಮಂಗಳೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿತ್ತು. ದರೋಡೆಕೋರರು ಕಾನೂನಿನ ಮೇಲೆ ಎಷ್ಟು ಗೌರವ ಇಟ್ಟಿದ್ದಾರೆ ಎಂಬುದು ಇದರಿಂದ ತಿಳಿಯುತ್ತದೆ. ಅಧಿಕಾರಿಗಳು ಸಿಎಂಗೆ ಸಲ್ಯೂಟ್ ಹೊಡೆಯುವುದರಲ್ಲಿ ನಿರತರಾಗಿದ್ದರೆ ಹೊರತು ದರೋಡೆಕೋರರನ್ನು ಹಿಡಿಯಲು ಕಿಂಚಿತ್ತೂ ಆಸಕ್ತಿ ತೋರಲಿಲ್ಲ ಎಂದು ಆರೋಪಿಸಿದರು.
ಸಿಎಂಗೆ ಅಧಿಕಾರಿಗಳ ಹಾಗೂ ಸರ್ಕಾರದ ಮೇಲೆ ಎಷ್ಟು ಹಿಡಿತ ಇದೆ ಎಂಬುದರ ಬಗ್ಗೆ ಗೊತ್ತಾಗುತ್ತದೆ. ಸಿದ್ದರಾಮಯ್ಯ ಅಸಹಾಯಕ ಮುಖ್ಯಮಂತ್ರಿ. ರಾಜ್ಯದಲ್ಲಿ ದರೋಡೆಕೋರರ ಜಾತ್ರೆ ನಡೆಯುತ್ತಿದೆ. ಮತ್ತೆ ರೌಡಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳ ಕೈಗಳ ಶಸ್ತ್ರವಿಲ್ಲ. ದರೋಡೆಕೋರ ಬಳಿ ಹೊಸ ಗನ್, ಚಾಕು,ಲಾಗ್ ಎಲ್ಲ ಇರುತ್ತದೆ. ಇದು ಪೊಲೀಸರು ತಲೆ ತಗ್ಗಿಸುವ ವಿಷಯ ಎಂದರು.
ಮುಡಾ ಹಗರಣ ಬಗೆದಷ್ಟು ಬ್ರಹಾಂಡ ಭ್ರಷ್ಟಾಚಾರ ಹೊರಬೀಳುತ್ತಿದೆ. ಇಂದು 300 ಕೋಟಿಯಷ್ಟು ಆಸ್ತಿಯನ್ನು ಇ.ಡಿ ಜಪ್ತಿ ಮಾಡಿದೆ. ಪ್ರಕರಣ ಹೈಕೋರ್ಟ್ ಹೋಗಿದೆ, ತನಿಖೆ ನಡೆಯುತ್ತಿದೆ. ಲೋಕಾಯುಕ್ತರಿಗೆ ತನಿಖೆ ಮಾಡಲು ಇಷ್ಟ ಇಲ್ಲ ಅನಿಸುತ್ತದೆ. ಇಡಿಯವರು ತನಿಖೆ ಮಾಡಿ ವರದಿ ನೀಡಿದರೂ ನೋಡಿಲ್ಲ. ತನಿಖೆ ಮಾಡುವ ಮನಸ್ಸು ಇಲ ್ಲ. ಅಧಿಕಾರಿಗಳ ಮೇಲೆ ಒತ್ತಡವಿದೆ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ತನಿಖೆಗೆ ನೀಡುವಂತೆ ಒತ್ತಾಯ ಮಾಡುತ್ತೇನೆ ಎಂದರು.
ಕಾಂಗ್ರೆಸ್ ಪಕ್ಷ ಅವರಪ್ಪನ ಮನೆ ಆಸ್ತಿ ಆಗಿದ್ದರೆ ಅಭಿವೃದ್ಧಿ ಹಣ ಕೇಳುವುದಿಲ್ಲ. ನಾವೂ ಕೂಡ ತೆರಿಗೆ ಕಟ್ಟುತ್ತಿದ್ದೇವೆ. ಕೋಟ್ಯಾಂತರ ಜನ ತೆರಿಗೆ ಕಟ್ಟಿದ್ದಾರೆ. ಹಿಂದೆ ಬಸವರಾಜ್ ಬೊಮಾಯಿ ಅವರು ಎಷ್ಟು ಹಣ ಬಿಡುಗಡೆ ಮಾಡಿದ್ದರು? ಇವರು ಎಷ್ಟು ಬಿಡುಗಡೆ ಮಾಡಿದ್ದಾರೆ? ಇವರದ್ದು ಪಾಪರ್ ಸರ್ಕಾರ. ಅಲ್ಲ ಅಂತಾದರೆ ಶ್ವೇತ ಪತ್ರ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.ಬಿಜೆಪಿ ಸಾಲ ಬಿಟ್ಟು ಹೋಗಿದ್ದಾರೆ ಎಂದು ಕಾಂಗ್ರೆಸ್ನವರು ದೂರುತ್ತಾರೆ 60 ವರ್ಷದಲ್ಲಿ ಕಾಂಗ್ರೆಸ್ ಎಷ್ಟು ಸಾಲ ಬಿಟ್ಟಿದೆ ಹೇಳಿ? ಬಿಜೆಪಿ 9 ವರ್ಷದಲ್ಲಿ ಎಷ್ಟು ಸಾಲ ಮಾಡಿದೆ ಎಂಬುದನ್ನು ನಾವು ಬಿಡುಗಡೆ ಮಾಡುತ್ತೇವೆ ಎಂದರು.
ಬಿಜೆಪಿ ಉಳಿತಾಯ ಬಜೆಟ್ ಕೊಟ್ಟಿಲ್ಲವೆಂದು ಸಿದ್ದರಾಮಯ್ಯ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅಶೋಕ್, 2009ರಲ್ಲಿ ನಾವು ಅಧಿಕಾರಕ್ಕೆ ಬಂದಿದ್ದು. ನೀವು ಲಾಭ ಮಾಡಿ ಹೋಗಿದ್ದರೆ ನಾವು ಅದನ್ನೇ ಮುಂದುವರೆಸುತ್ತಿದ್ದೆವು. ಬೊಮಾಯಿ ಅವರು ಉಳಿತಾಯ ಬಜೆಟ್ ಮಾಡಿದರು. ನೀವು ಖೋತಾ ಬಜೆಟ್ ಮಾಡಿದ್ದೀರಿ, ನೀವು ತೆರಿಗೆ ಹಾಕಿ ಬಜೆಟ್ ಮಾಡಿದ್ದೀರಿ. ಬೊಮಾಯಿ ತೆರಿಗೆ ಇಲ್ಲದೆ ಬಜೆಟ್ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.
ಮೆಟ್ರೋ ಟಿಕೆಟ್ ದರ ಏರಿಕೆ ಕುರಿತು ಮಾತನಾಡಿದ ಅಶೋಕ್, ಬೆಂಗಳೂರು ಜನತೆ ಮತ್ತೊಂದು ಬೆಲೆ ಏರಿಕೆಗೆ ರೆಡಿಯಾಗಬೇಕು. ಈಗ ಮೆಟ್ರೋ ದರ ಏರಿಕೆಗೆ ಹುನ್ನಾರ ಮಾಡುತ್ತಾ ಇದ್ದಾರೆ. ಐದು ಗ್ಯಾರಂಟಿ ಕೊಡುತ್ತೇವೆ ತೆರಿಗೆ ಹಾಕಲ್ಲ ಅಂದವರು. ಆದರೆ ಈಗ ಪ್ರತಿನಿತ್ಯ ಬೆಲೆ ಏರಿಕೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.