ಚೆನ್ನೈ,ಜ.18- ಕಾನುಂ ಪೊಂಗಲ್ ಅಂಗವಾಗಿ ತಮಿಳುನಾಡಿನ ಪುದುಕ್ಕೊಟ್ಟೈನಲ್ಲಿ ಆಯೋಜಿಸಿದ್ದ ಜಲ್ಲಿಕಟ್ಟು ಮತ್ತು ಮಂಜುವಿರಾಟ್ಟು ಕಾರ್ಯಕ್ರಮದಲ್ಲಿ 7 ಮಂದಿ ಜೀವ ಕಳೆದುಕೊಂಡಿದ್ದರೆ, ಎರಡು ಹೋರಿಗಳು ಕೂಡ ಸಾವನ್ನಪ್ಪಿವೆ.
ಹೋರಿಗಳ ಅಖಾಡಕ್ಕೆ ಇಳಿದವರು ಹಾಗೂ ಪ್ರೇಕ್ಷಕರು, ಮಾಲೀಕರು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದು, ಹಲವಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿಸಲಾಗಿದೆ.
ಪುದುಕ್ಕೊಟ್ಟೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಂದು ಹೋರಿ ಸಾವನ್ನಪ್ಪಿದರೆ, ಶಿವಗಂಗೆಯ ಸಿರವಯಲ್ ಮಂಜುವಿರಟ್ಟು ಎಂಬಲ್ಲಿ ಗೂಳಿ ಮಾಲೀಕ ರಾಜ ಹಾಗೂ ಅವರ ಹೋರಿ ಕೂಡ ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಜುವಿರಟ್ಟು ಕಾರ್ಯಕ್ರಮವನ್ನು ಹೊಲದ ಬಯಲು ಪ್ರದೇಶದಲ್ಲಿ ನಡೆಸುವಾಗ ಗೂಳಿ ಓಡಿ ಬಂದಿದ್ದರಿಂದ ಮಾಲೀಕ ಬಾವಿಗೆ ಹಾರಿದ್ದಾನೆ. ಇವನ ಹಿಂದೆಯೇ ಗೂಳಿ ಕೂಡ ಬಾವಿಗೆ ಹಾರಿದ್ದರಿಂದ ನೀರಲ್ಲಿ ಮುಳುಗಿ ಅದರ ಪ್ರಾಣಪಕ್ಷಿ ಹಾರಿಹೋಗಿದೆ. ಈ ಕಾರ್ಯಕ್ರಮದಲ್ಲಿ 150 ಆಕಳುಗಳು ಮತ್ತು 250 ಹೋರಿಗಳು ಇದ್ದವು. ಅಲ್ಲದೇ ಸ್ಪರ್ಧೆಯಲ್ಲಿ ಸುಮಾರು 130 ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ವಡಿಪಟ್ಟಿ ಬಳಿಯ ಮೆಟ್ಟುಪಟ್ಟಿ ಗ್ರಾಮದಲ್ಲಿ 55 ವರ್ಷದ ಪ್ರೇಕ್ಷಕ ಪಿ.ಪೆರಿಯಸಾಮಿ ಅವರ ಕುತ್ತಿಗೆಗೆ ಹೋರಿ ಕೊಂಬಿನಿಂದ ತಿವಿದಿದ್ದರಿಂದ ಸಾವನ್ನಪ್ಪಿದ್ದಾರೆ. ಈ ಊರಿನಲ್ಲಿ ಸುಮಾರು 70 ಜನರು ಗಂಭೀರವಾಗಿ ಗಾಯಗೊಂಡಿದ್ದು,ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.