ವಾಷಿಂಗ್ಟನ್,ಜ.19- ನಾಳೆ ವಾಷಿಂಗ್ಟನ್ ಡಿಸಿಯ ಕ್ಯಾಪಿಟಲ್‌ನಲ್ಲಿ ನಡೆಯುವ ಐತಿಹಾಸಿಕ ಸಮಾರಂಭದಲ್ಲಿ ಅಮೆರಿಕದ 47 ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.40 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನು, ಕ್ಯಾಪಿಟಲ್ ರೊಟುಂಡ ಕಟ್ಟಡದ ಒಳಗೆ ಆಯೋಜಿಸಲು ತೀರ್ಮಾನಿಸಲಾಗಿದೆ. ತೀವ್ರ ಚಳಿಯ ಹಿನ್ನೆಲೆಯಲ್ಲಿ ಕಟ್ಟಡದ ಒಳಗೆ ಪ್ರಮಾಣವಚನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಖುದ್ದು ಡೊನಾಲ್‌್ಡ ಟ್ರಂಪ್ ಅವರೇ ಮಾಹಿತಿ ನೀಡಿದ್ದಾರೆ.
ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡನ್, ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮಾ, ಜಾರ್ಜ್‌ಬುಶ್, ಬಿಲ್ ಕ್ಲಿಂಟನ್ ಸೇರಿ ಹಲವು ಗಣ್ಯರು ಡೊನಾಲ್ಡ್ ಟ್ರಂಪ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಕೂಡ ಭಾಗವಹಿಸುತ್ತಿದ್ದಾರೆ. ಚೀನಾ ಉಪಾಧ್ಯಕ್ಷ ಹ್ಯಾನ್ ಜೆಂಗ್, ಭಾರತದ ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ದಂಪತಿ ಸೇರಿದಂತೆ ಇನ್ನೂ ಹಲವು ಅಂತಾರಾಷ್ಟ್ರೀಯ ಗಣ್ಯರು ಭಾಗಿಯಾಗುವ ಸಾಧ್ಯತೆ ಇದೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ. ಬಲ ಪಂಥೀಯ ನಾಯಕರಾದ ನಿಗೆಲ್ ಫರಾಜ್ (ಯುಕೆ), ಎರಿಕ್ ಜೆಮೌರ್ (ಫ್ರಾನ್ಸ್ ) ಮತ್ತು ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಭಾಗಿಯಾಗಿವ ಸಾಧ್ಯತೆಯಿದೆ.
ಗೈರಾಗಲಿರುವ ಗಣ್ಯರು:
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಆಹ್ವಾನವಿಲ್ಲ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೂಡ ಗೈರುಹಾಜರಾಗಿದ್ದಾರೆ. ಮಾಜಿ ಪ್ರಥಮ ಮಹಿಳೆ ಮಿಚೆಲ್ ಒಬಾಮಾ ಗೈರಾಗಲಿದ್ದಾರೆ.
ಭಾಗವಹಿಸುವ ಉದ್ಯಮಿಗಳು:
ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ನ ಸಿಇಒ ಎಲಾನ್ ಮಸ್ಕ್, ಅಮೆಜಾನ್ ಕಾರ್ಯನಿರ್ವಾಹಕ ಅಧ್ಯಕ್ಷ ಜೆಫ್ ಬೆಜೋಸ್, ಗೂಗಲ್ ಸಿಇಒ ಸುಂದರ್ ಪಿಚೈ, ಆಪಲ್ ಸಿಇಒ ಟಿಮ್ ಕುಕ್, ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್ ಮನ್, ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್, ಟಿಕ್ ಟಾಕ್ ಸಿಇಒ ಶೌ ಜಿ ಚೆವ್ ಭಾಗಿಯಾಗಲಿದ್ದಾರೆ.
ಇದಕ್ಕೂ ಮೊದಲೇ ಟ್ರಂಪ್ ಬೆಂಬಲಿಗರ ಸಂಭ್ರಮಾಚರಣೆ ಆರಂಭಗೊಂಡಿದ್ದು, ಎಲ್ಲೆಡೆ ಹಬ್ಬದ ವಾತಾವರಣ ಕಂಡುಬರುತ್ತಿದೆ.ವರ್ಜೀನಿಯಾದ ಸ್ಟರ್ಲಿಂಗ್‌ನಲ್ಲಿರುವ ಟ್ರಂಪ್ ನ್ಯಾಷನಲ್ ಗಾಲ್ಫ್ ಕೋಸರ್‌ನಲ್ಲಿ, ಪಟಾಕಿ ಸಿಡಿಸಿ ಟ್ರಂಪ್ ಬೆಂಬಲಿಗರಿಂದ ಸಂಭ್ರಮ ಆಚರಿಸಲಾಗುತ್ತಿದೆ. ಈ ಗಾಲ್ಫ್ ಮೈದಾನವು ಡೊನಾಲ್‌್ಡ ಟ್ರಂಪ್ ಅವರಿಗೆ ಸೇರಿದ್ದಾಗಿದ್ದು, ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಒಂದು ದಿನ ಮೊದಲೇ, ಭಾರೀ ಸಂಭ್ರಮಾಚರಣೆ ಕಂಡುಬರುತ್ತಿದೆ. ದೇಶದ ಇತರ ಭಾಗಗಳಲ್ಲಿಯೂ ಟ್ರಂಪ್ ಬೆಂಬಲಿಗರು ಸಂಭ್ರಮಾಚರಣೆ ಶುರುವಿಟ್ಟಿದ್ದು, ಟ್ರಂಪ್ ಅವರ ಎರಡನೇ ಅವಧಿಯ ಆರಂಭಕ್ಕೆ ಕಾತರದಿಂದ ಕಾಯುತ್ತಿರುವುದಾಗಿ ಅಭಿಮಾನಿಗಳು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಡೊನಾಲ್‌್ಡ ಟ್ರಂಪ್ ಅವರ ಬೆಂಬಲಿಗ ಮಿಶೆಲ್, ಟ್ರಂಪ್ ಅಧಿಕಾರ ಸ್ವೀಕಾರ ಸಮಾರಂಭದ ಭವ್ಯತೆ ಕಂಡು ದಂಗಾಗಿದ್ದೇನೆ ಎಂದಿದ್ದಾರೆ. ನನ್ನ ಇಡೀ ಜೀವಮಾನದಲ್ಲಿ ಡೊನಾಲ್ಡ್ ಟ್ರಂಪ್ ಅವರು ನಾನು ಕಂಡ ಅತ್ಯುತ್ತಮ ಅಧ್ಯಕ್ಷರಾಗಿದ್ದಾರೆ. ಜಗತ್ತಿಗೆ ಡೊನಾಲ್‌್ಡ ಟ್ರಂಪ್ ಅವರಂತಹ ನಾಯಕರ ಅಗತ್ಯವಿದೆ ಎಂದು ಮಿಶೆಲ್ ಸಂತಸ ವ್ಯಕ್ತಪಡಿಸಿದ್ದಾರೆ.
ಸದ್ಯ ವರ್ಜೀನಿಯಾದ ಸ್ಟರ್ಲಿಂಗ್‌ನಲ್ಲಿರುವ ಟ್ರಂಪ್ ನ್ಯಾಷನಲ್ ಗಾಲ್‌್ಫ ಕೋಸರ್‌ನಲ್ಲಿರುವ ತಮ ನಿವಾಸದಿಂದ ವಾಷಿಂಗ್ಟನ್ನತ್ತ ಪ್ರಯಾಣ ಬೆಳೆಸಿರುವ ಅವರಿಗೆ, ಬೆಂಬಲಿಗರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಟ್ರಂಪ್ ಇಲ್ಲಿ ನಡೆಯುತ್ತಿದ್ದ ಬೆಂಬಲಿಗರ ಸಂಭ್ರಮಾಚರಣೆ ಸಮಾರಂಭದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.
ಈ ವೇಳೆ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ಅಮೆರಿಕದ ಭವಿಷ್ಯ ನಿರ್ಧರಿಸುವಲ್ಲಿ ತಮ ಬೆಂಬಲ ಅತ್ಯಗತ್ಯ ಎಂದು ಭಾವುಕರಾಗಿ ಹೇಳಿದರು. ಅಮೆರಿಕದ ಸೇವೆ ಮಾಡುವುದೇ ತಮ ಜೀವನದ ಗುರಿಯಾಗಿದ್ದು, ಈ ಪಯಣದಲ್ಲಿ ನನ್ನೊಂದಿಗೆ ಹೆಜ್ಜೆ ಹಾಕುವ ಪ್ರತಿಯೊಬ್ಬರಿಗೂ ನಾನು ಚಿರಋಣಿಯಾಗಿದ್ದೇನೆ. ಎಂದು ಟ್ರಂಪ್ ಹೇಳಿದ್ದಾರೆ.
ಭಾರತದ ಮೇಲೆ ಪರಿಣಾಮ ಏನು?:
ಬೈಡೆನ್ ಆಡಳಿತವು ವಿಧಿಸಿದ ಹೊಸ ನಿರ್ಬಂಧಗಳು, ರಷ್ಯಾದೊಂದಿಗೆ ವ್ಯವಹಾರದಲ್ಲಿ ತೊಡಗಿರುವ ಘಟಕಗಳನ್ನೂ ಟಾರ್ಗೆಟ್ ಮಾಡಿವೆ. ರಷ್ಯಾದ ಎರಡು ದೊಡ್ಡ ಗ್ರಾಹಕರಾದ ಭಾರತ ಮತ್ತು ಚೀನಾದೊಂದಿಗಿನ ತೈಲ ವ್ಯಾಪಾರಕ್ಕೆ ಅಡ್ಡಿಪಡಿಸಲಿದೆ. ಗಾಜ್‌ಪೊಮ್ ನೆಫ್‌್ಟ, ಸುರ್ಗುಟ್ನೆಫ್ಟೆಗಾಸ್ ದಿನಕ್ಕೆ 1 ಮಿಲಿಯನ್ ಬ್ಯಾರೆಲ್‌ಗಳಿಗಿಂತ ಹೆಚ್ಚು ತೈಲವನ್ನು ಉತ್ಪಾದಿಸುತ್ತವೆ. ಇದು ವರ್ಷಕ್ಕೆ 23 ಶತಕೋಟಿ ಡಾಲರ್ ಮೌಲ್ಯದ್ದಾಗಿದೆ. ಈ ಎರಡು ಕಂಪನಿಗಳ ಮೇಲಿನ ನಿರ್ಬಂಧಗಳು ಭಾರತ ಮತ್ತು ಚೀನಾದಲ್ಲಿನ ತೈಲ ಸಂಸ್ಕರಣಾಗಾರರ ಕಳವಳಕ್ಕೆ ಕಾರಣವಾಗಿವೆ.
ಹೊಸ ನಿರ್ಬಂಧಗಳು ಭಾರತೀಯ ತೈಲ ಸಂಸ್ಕರಣಾಗಾರಗಳಿಗೆ ರಷ್ಯಾದ ಸರಬರಾಜನ್ನು ಸಂಪೂರ್ಣವಾಗಿ ಅಡ್ಡಿಪಡಿಸಲು ಸಾಧ್ಯವಿಲ್ಲ. ಆದರೆ, ಪರಿಣಾಮ ಬೀರುವುದಂತೂ ಖಚಿತ. ರಷ್ಯಾದ ಬದಲಿಗೆ ಪಶ್ಚಿಮ ಏಷ್ಯಾ ಮತ್ತು ಆಫ್ರಿಕನ್ ದೇಶಗಳಿಂದ ಹೆಚ್ಚಿನ ತೈಲವನ್ನು ಪಡೆಯಲು ಭಾರತೀಯ ಕಂಪನಿಗಳ ಮೇಲೆ ಒತ್ತಡ ಸೃಷ್ಟಿಯಾಗಲಿದೆ. ಅಮೆರಿಕದ ನಿರ್ಬಂಧಗಳು ತೈಲ ಬೆಲೆ ಹೆಚ್ಚಳಕ್ಕೆ ಕಾರಣವಾಗಬಹುದು. ಇದರಿಂದ ಎರಡೂ ದೇಶಗಳ ಸರಕು ಸಾಗಣೆ ವೆಚ್ಚ ಹೆಚ್ಚಳ ಆಗಬಹುದು.
ಅಮೆರಿಕದ ನಿರ್ಬಂಧಗಳು ಭಾರತದ ಮೇಲೆ ತಕ್ಷಣದ ಪರಿಣಾಮ ಬೀರುವುದಿಲ್ಲ. ಮುಂದಿನ ಎರಡು ತಿಂಗಳಿಗೆ ಅಗತ್ಯವಿರುವ ಕಚ್ಚಾ ತೈಲವನ್ನು ಈಗಾಗಲೇ ಹಡಗುಗಳಲ್ಲಿ ಸಾಗಾಣಿಕೆಗೆ ಲೋಡ್ ಮಾಡಲಾಗಿದೆ. ಇದು ಭಾರತಕ್ಕೆ ಪೂರೈಕೆಯಾಗುವುದರಿಂದ, ತೈಲದ ಅಲಭ್ಯತೆಯಲ್ಲಿ ತಕ್ಷಣವೇ ಪರಿಣಾಮ ಬೀರುವುದಿಲ್ಲ ಎಂದು ಸರ್ಕಾರ ಹೇಳಿದೆ. ಜನವರಿ 10 ರ ಮೊದಲು ಕಾಯ್ದ್ದಿರಿಸಿದ ರಷ್ಯಾದ ತೈಲ ಸರಕುಗಳನ್ನು ನಿರ್ಬಂಧಗಳ ನಿಯಮಕ್ಕೆ ಅನುಗುಣವಾಗಿ ಬಂದರುಗಳಲ್ಲಿ ಬಿಡುಗಡೆ ಮಾಡಲು ಭಾರತಕ್ಕೆ ಅವಕಾಶ ನೀಡಲಾಗಿದೆ.
ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾ ನಂತರ ಭಾರತವು ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲ ಗ್ರಾಹಕವಾಗಿದೆ. ಹೀಗಾಗಿ, ಭಾರತವನ್ನು ತಲುಪಲು ರಷ್ಯಾ ಮಾರ್ಗಗಳನ್ನು ಕಂಡುಕೊಳ್ಳುತ್ತದೆ ಎಂದು ಭಾರತ ಸರ್ಕಾರದ ಅಧಿಕಾರಿಗಳು ಭಾವಿಸಿದ್ದಾರೆ. ಭಾರತದ ಕಂಪನಿಗಳು ಪಾಲನ್ನು ಹೊಂದಿರುವ ರಷ್ಯಾದ ವೋಸ್ಟಾಕ್ ತೈಲ ಯೋಜನೆಯ ಮೇಲೆ ಹೊಸ ಯುಎಸ್ ನಿರ್ಬಂಧಗಳ ಪರಿಣಾಮಗಳ ಬಗ್ಗೆ ಭಾರತ ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ.
ಎರಡು ತಿಂಗಳಲ್ಲಿ ವಿಂಡ್-ಡೌನ್ ಅವಧಿ (ಒಪ್ಪಂದದ ಅವಧಿ ಮುಗಿದ ನಂತರದ ದಿನಗಳು) ಮುಗಿದ ನಂತರವೇ ನಿರ್ಬಂಧಗಳ ಪರಿಣಾಮ ಕಂಡುಬರುವ ಸಾಧ್ಯತೆಯಿದೆ. ಆದರೆ, ಆಗಲೂ ಭಾರತಕ್ಕೆ ತೈಲ ಪೂರೈಕೆ ಸಮಸ್ಯೆಯಾಗುವುದಿಲ್ಲ. ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (ಒಪೆಕ್) ದಿನಕ್ಕೆ 3 ಮಿಲಿಯನ್ ಬ್ಯಾರೆಲ್‌ಗಳ ಬಿಡಿ ಸಾಮಥ್ರ್ಯವನ್ನು ಹೊಂದಿದೆ. ಆದರೆ ಯುಎಸ್, ಕೆನಡಾ, ಬ್ರೆಜಿಲ್ ಮತ್ತು ಗಯಾನಾ ಮುಂತಾದ ಒಪೆಕ್ ಅಲ್ಲದ ಪೂರೈಕೆದಾರರು ಸುಲಭವಾಗಿ ಬ್ಯಾರೆಲ್‌ಗಳನ್ನು ಸೇರಿಸಬಹುದು.
ತೈಲ ದರಗಳ ಹೆಚ್ಚಳವು ಹೆಚ್ಚು ಕಾಲ ಉಳಿಯಬಾರದು. ಮಧ್ಯಪ್ರಾಚ್ಯ ಪೂರೈಕೆದಾರರೊಂದಿಗೆ ಪೂರೈಕೆ ಒಪ್ಪಂದಗಳನ್ನು (2025/26 ವಾರ್ಷಿಕ ಒಪ್ಪಂದ) ಅಂತಿಮಗೊಳಿಸಲು ಮಾತುಕತೆಗೆ ಭಾರತೀಯ ರಿಫೈನರ್ಗಳು ಮುಂದಾಗಿದ್ದಾರೆ. ಮಾರುಕಟ್ಟೆಯನ್ನು ಅವಲಂಬಿಸಿ, ಅವರಿಂದ ಹೆಚ್ಚುವರಿ ಬ್ಯಾರೆಲ್‌ಗಳನ್ನು ಪಡೆದುಕೊಳ್ಳಬಹುದು.