Sunday, January 19, 2025
Homeರಾಜ್ಯರಾಜ್ಯದ ದಕ್ಷಿಣ ಒಳನಾಡಿನಲ್ಲಿ ಅಕಾಲಿಕ ಮಳೆ

ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಅಕಾಲಿಕ ಮಳೆ

Bengaluru wakes up to unseasonal rain; IMD predicts more showers

ಬೆಂಗಳೂರು, ಜ.19- ಬಂಗಾಳ ಕೊಲ್ಲಿಯಲ್ಲಿ ಮೇಲೈ ಸುಳಿಗಾಳಿ ಉಂಟಾಗಿರುವ ಪರಿಣಾಮ ರಾಜ್ಯದಲ್ಲಿ ನಿನ್ನೆಯಿಂದ ಮೋಡ ಕವಿದ ವಾತಾವರಣವಿದ್ದು, ಇಂದು ರಾಜ್ಯದ ದಕ್ಷಿಣ ಭಾಗದ ಕೆಲವು ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಾಗಿದೆ. ಬೆಳಿಗ್ಗೆ ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಸುಮಾರು ಹತ್ತು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಅಕಾಲಿಕ ಮಳೆಯಾಗಿದೆ.

ಇಂದು ಬೆಳಗಿನ ಜಾವ ಹಾಸನ, ಕೊಡಗು, ಮೈಸೂರು, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗಿದೆ. ಅಂದರೆ ಸುಮಾರು 5ರಿಂದ 15 ಮಿ.ಮೀ.ವರೆಗೆ ಮಳೆಯಾಗಿದೆ.

ಚಳಿಗಾಲದಲ್ಲಿ ಮಳೆಯಾಗುವುದು ವಿರಳ. ವಾತಾವರಣದಲ್ಲಿ ಮಳೆಗೆ ಪೂರಕವಾದ ಪರಿಚಲನೆಗಳು ಉಂಟಾದಾಗ ಮಾತ್ರ ಮಳೆಯಾಗುತ್ತದೆ. ಜನವರಿಯಲ್ಲಿ ಮಳೆ ಬೀಳುವುದು ಅಪರೂಪ. ಆದರೂ ಈ ತಿಂಗಳ ವಾಡಿಕೆ ಪ್ರಮಾಣ ಅತ್ಯಂತ ಕಡಿಮೆ ಇದೆ.
ಧಾನ್ಯಗಳ ಒಕ್ಕಣೆ ಸಮಯವಾಗಿರುವುದರಿಂದ ಅಕಾಲಿಕ ಮಳೆಯಿಂದ ರೈತರಿಗೆ ಪ್ರತಿಕೂಲವಾಗಿದೆ. ಆದರೆ, ಭಾರಿ ಮಳೆಯಾಗದೆ, ಹಗುರ ಮಳೆಯಾಗಿದ್ದು, ನಿರಂತರವಾಗಿ ಹೆಚ್ಚು ದಿನ ಮುಂದುವರೆಯುವ ಸಾಧ್ಯತೆ ವಿರಳವಾಗಿರುವುದರಿಂದ ಬೆಳೆ ಸಂರಕ್ಷಣೆ ಮಾಡಿಕೊಳ್ಳಬಹುದಾಗಿದೆ.

ಹವಾಮಾನ ಮುನ್ಸೂಚನೆ ಪ್ರಕಾರ ಇಂದು ಮೋಡ ಕವಿದ ವಾತಾವರಣವಿದ್ದು, ದಕ್ಷಿಣ ಒಳನಾಡಿನಲ್ಲಿ ತುಂತುರು ಇಲ್ಲವೆ ಹಗುರ ಮಳೆಯಾಗಲಿದೆ. ಉತ್ತರ ಒಳನಾಡು ಭಾಗದಲ್ಲಿ ಒಣ ಹವೆ ಮುಂದುರೆಯಲಿದೆ. ದಕ್ಷಿಣ ಒಳನಾಡಿನ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.

ನಾಳೆ ಮೋಡ ಭಾಗಶಃ ಕಡಿಮೆಯಾಗಲಿದ್ದು, ಜ.21ರಿಂದ ಮೋಡ ಕ್ರಮೇಣ ಕಡಿಮೆಯಾಗಲಿದ್ದು, ಶುಭ್ರವಾದ ಆಕಾಶ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೈಲೈ ಸುಳಿಗಾಳಿಯ ತಮಿಳುನಾಡಿನ ದಕ್ಷಿಣ ಕರಾವಳಿ ಹಾಗೂ ಕೇರಳ ಭಾಗದಲ್ಲಿರುವುದರಿಂದ ಕರ್ನಾಟಕದ ಮೇಲೆ ಹೆಚ್ಚಿನ ಪರಿಣಾಮ ಉಂಟಾಗುವುದಿಲ್ಲ. ಹೀಗಾಗಿ ಯಾವುದೇ ಮುನ್ನೆಚ್ಚರಿಕೆಗಳನ್ನು ನೀಡಿಲ್ಲ.

ಆದರೆ, ಹಲವೆಡೆ ಬೆಳಗಿನವೇಳೆ ಮಂಜು ಮುಸುಕಿದ ವಾತಾವರಣ ಯಥಾರೀತಿ ಕಂಡುಬರಲಿದೆ. ಚಳಿಯ ಅನುಭವ ಹೆಚ್ಚಾಗಲಿದೆ. ರಾಜ್ಯದ ಉತ್ತರ ಒಳನಾಡು, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಇತರ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದ್ದು, ಒಂದೆರಡು ಕಡೆಗಳಲ್ಲಿ ಮಂಜು ಕವಿಯುವ ಸಾಧ್ಯತೆಗಳಿವೆ. ಇದೇ ರೀತಿಯ ಪರಿಸ್ಥಿತಿ ಮುಂದಿನ ಮೂರು ದಿನಗಳವರೆಗೆ ಕಂಡುಬರಲಿದೆ. ಆಗಾಗ್ಗೆ ತಂಪಾದ ಮೈಲೈ ಗಾಳಿ ಬೀಸುವುದರಿಂದ ರಾತ್ರಿವೇಳೆ ಹೆಚ್ಚು ಚಳಿ ಹಾಗೂ ಹಗಲಿನಲ್ಲೂ ಚಳಿಯ ಅನುಭವ ಕಂಡುಬರಲಿದೆ.

RELATED ARTICLES

Latest News