ಬೆಂಗಳೂರು, ಜ.19- ಬಿಜೆಪಿ ಸದಸ್ಯತ್ವ ಪಡೆದಿರುವವರನ್ನು ಹೊರತು ಪಡಿಸಿ, ಗಾಂಧಿಜೀ ಅವರ ತತ್ವಾದರ್ಶಗಳನ್ನು ಪ್ರಚಾರ ಮಾಡಲು ಬಯಸುವ ಯಾರು ಬೇಕಾದರೂ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದಲ್ಲಿ ಭಾಗವಹಿಸಬಹುದು ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.
ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಬಹುತೇಕ ಎಲ್ಲವೂ ಸಿದ್ಧವಾಗಿದೆ. ಇಂದು ಸಂಜೆ ಪ್ರಯೋಗಾತಕ ಪರಿಶೀಲನೆ ನಡೆಯುತ್ತಿದೆ. ವಾಹನ ನಿಲ್ದಾಣಗಳ ವ್ಯವಸ್ಥೆಯನ್ನು ನಿಗಾವಹಿಸಲಾಗುವುದು ಎಂದರು.
ಆಹಾರ ಸಮಿತಿ ಅಧ್ಯಕ್ಷರಾಗಿರುವ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ, ವಸತಿ ಸಮಿತಿ ಅಧ್ಯಕ್ಷರಾಗಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಈಗಾಗಲೇ ಬೆಳಗಾವಿಗೆ ಬಂದಿದ್ದಾರೆ. ಗೃಹ ಸಚಿವರ ಡಾ.ಜಿ.ಪರಮೇಶ್ವರ್ ಒಟ್ಟಾರೆ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದು ಅವರು ಕೂಡ ಬರುತ್ತಿದ್ದಾರೆ. ಜಿಲ್ಲಾ ಸಚಿವರು ತಮ ಜಿಲ್ಲೆಗಳಲ್ಲಿ ಸಂಘಟನಾತಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
ಜನವರಿ 21ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ನೇರವಾಗಿ ವಿಮಾನದಲ್ಲಿ ಬೆಳಗಾವಿಗೆ ಬಂದಿಳಿಯಲಿದ್ದಾರೆ. ಸುವರ್ಣ ಸೌಧದ ಮುಂದಿರುವ ಮಹಾತಗಾಂಧಿ ಪ್ರತಿಮೆಯನ್ನು ಉದ್ಘಾಟಿಸಲಿದ್ದು, ನಂತರ ಭೋಜನ ವಿರಾಮದ ಬಳಿಕ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಸಮಾವೇಶಕ್ಕೆ ಯಾರು ಬೇಕಾದರೂ ಭಾಗವಹಿಸಬಹುದಾಗಿದೆ. ಗಾಂಧಿಜೀ, ಅಂಬೇಡ್ಕರ್ ವಿಚಾರಗಳನ್ನು ಒಪ್ಪ್ಪುವ ಎಲ್ಲರಿಗೂ ಮುಕ್ತ ಆಹ್ವಾನವಿದೆ. ಬಿಜೆಪಿ ಸದಸ್ಯ ಪಡೆದು, ಆ ಪಕ್ಷದಲ್ಲಿ ಗುರುತಿಸಿಕೊಂಡಿರುವವರನ್ನು ಹೊರತು ಪಡಿಸಿ ಬೇರೆ ಯಾರು ಬೇಕಾದರೂ ದೇಶ, ಸಂವಿಧಾನ ಉಳಿಸುವ ಬದ್ಧತೆ ಇರುವವರು, ಗಾಂಧಿ ಆಚಾರ, ವಿಚಾರ ಪ್ರಚಾರ ಮಾಡಲು ಬಯಸುವವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದರು.
ಸರ್ಕಾರದ ದುಡ್ಡಿನಲ್ಲಿ ಕಾಂಗ್ರೆಸ್ ಪಕ್ಷ ಜಾತ್ರೆ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಅವರನ್ನು ನಾನೇ ಗೌರವರಿಂದ ಬೆಳಗಾವಿ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತೇನೆ. ಈ ಮೊದಲು ಬಿಜೆಪಿ ಬಿಟ್ಟು ಕಾಂಗ್ರೆಸ್ಗೆ ಬಂದಾಗ ಅವರು ಆಡಿದ ಅಣಿಮುತ್ತುಗಳನ್ನು ನೆನಪು ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಬೆಳಗಾವಿಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ನಾನು ದೈವ ಭಕ್ತ. ಬೆಳಗಾದರೆ ನಾನು ನಂಬಿರುವ ಶಕ್ತಿಗೆ ನಮಿಸಿ, ಹೊರ ಬರುತ್ತೇನೆ ಎಂದು ಹಣೆಯಲ್ಲಿ ಇಟ್ಟಿರುವ ಕುಂಕುಮವನ್ನು ತೋರಿಸಿದರು.
ನಾಳೆ ಬಿಡುವಿರುವುದಿಲ್ಲ, ಅದಕ್ಕಾಗಿ ಇಂದು ಮೊದಲು ಈಶ್ವರನ ದೇವಸ್ಥಾನಕ್ಕೆ ಹೋಗಿ ಬರುತ್ತೇನೆ. ನಂತರ ನಿಮನ್ನು ಭೇಟಿ ಮಾಡುತ್ತೇನೆ ಎಂದ ಡಿ.ಕೆ.ಶಿವಕುಮಾರ್, ನಿಮಿಂದ ನನಗೆ ರಕ್ಷಣೆ ಬೇಕಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು. ರಕ್ಷಣೆ ಬೇಕು ಎಂದು ಪದೇ ಪದೇ ಹೇಳುತ್ತಿರುವುದೇಕೆ ಎಂಬ ಪ್ರಶ್ನೆ ಎದುರಾದಾಗ ಕೈ ಮುಗಿದು ನಿರ್ಗಮಿಸಿದರು.