ಬೆಂಗಳೂರು, ಜ.19- ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ದಿನೇಶ್ ಕಾರ್ತಿಕ್ ಅವರ ಫಿನಿಷಿಂಗ್ ಪಾತ್ರವನ್ನು ಜಿತೇಶ್ ಶರ್ಮಾ ನಿಭಾಯಿಸುತ್ತಾರೆ ಎಂದು ಅಂದಾಜಿಸಲಾಗಿತ್ತಾದರೂ ಇತ್ತೀಚಿನ ಅವರ ಪ್ರದರ್ಶನವು ಆರ್ ಸಿಬಿ ತಂಡದ ಫ್ರಾಂಚೈಸಿಯ ಟೆನ್ಷನ್ ಹೆಚ್ಚಿಸಿದೆ.
ದುಬೈನಲ್ಲಿ 18ನೇ ಐಪಿಎಲ್ ಟೂರ್ನಿಯ ನಿಮಿತ್ತ ನಡೆದ ಮೆಗಾ ಹರಾಜಿನಲ್ಲಿ ವಿದರ್ಭ ಆಟಗಾರನನ್ನು 11 ಕೋಟಿಗೆ ಬಿಕರಿ ಮಾಡಿಕೊಂಡು ಫಿನಿಷಿಂಗ್ ಪಾತ್ರ ನೀಡಲು ಫ್ರಾಂಚೈಸಿ ಯೋಚಿಸಿತ್ತು. ಆದರೆ ಇತ್ತೀಚೆಗೆ ನಡೆದ ವಿಜಯ್ ಹಝಾರೆ ಟ್ರೋಫಿಯಲ್ಲಿ ತಮ ಬ್ಯಾಟಿಂಗ್ ಚಮತ್ಕಾರ ತೋರುವಲ್ಲಿ ಜಿತೀಶ್ ಶರ್ಮಾ ಸಂಪೂರ್ಣವಾಗಿ ಎಡವಿದ್ದಾರೆ.
ಹೊರೆಯಾಗ್ತಾರಾ ಜಿತೇಶ್:
ವಿಜಯ್ ಹಝಾರೆ ಟ್ರೋಫಿಯಲ್ಲಿ 6 ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಜಿತೇಶ್ ಶರ್ಮಾ, 1 ಅರ್ಧಶತಕ ಸೇರಿದಂತೆ 183 ರನ್ ಗಳಿಸಿದ್ದರು. 112.96 ಸ್ಟ್ರೈಕ್ ಹೊಂದಿದ್ದಾರೆ. ಅಲ್ಲದೆ ಫೈನಲ್ ಪಂದ್ಯದಲ್ಲೂ ಕೂಡ ಕರ್ನಾಟಕ ವಿರುದ್ಧ ಪಂದ್ಯ ಗೆಲ್ಲಲು 349 ರನ್ ಬೃಹತ್ ಗುರಿ ಪಡೆದಿತ್ತು. ಆದರೆ 312 ರನ್ ಗಳಿಗೆ ಸೀಮಿತಗೊಂಡ ವಿದರ್ಭ 36 ರನ್ ಸೋಲು ಕಂಡಿತು.
ತಮ ಫಿನಿಷಿಂಗ್ ಶೈಲಿಯಿಂದ ಪಂದ್ಯವನ್ನು ಗೆಲ್ಲಿಸಬೇಕಾಗಿದ್ದ ಜಿತೇಶ್ ಶರ್ಮಾ ಅವರು ಅಮೆಗತಿ ಯಲ್ಲಿ ರನ್ ಗಳಿಸಿ 42 ಎಸೆತಗಳಲ್ಲಿ 34 ರನ್ ಗಳಿಸಿರು ವುದನ್ನು ಗಮನಿಸಿದರೆ, ವಿಶ್ವದ ಅತ್ಯಂತ ಫ್ರಾಂಚೈಸಿ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊರೆಯಾಗುತ್ತಾರಾ ಎಂಬ ಪ್ರಶ್ನೆ ಕಾಡುತ್ತಿದೆ.
ಆರ್ ಸಿಬಿಗೆ ಫಿನಿಷರ್ ಯಾರು?
ಜಿತೇಶ್ ಶರ್ಮಾ ಅಲ್ಲದೆ ಕೃನಾಲ್ ಪಾಂಡ್ಯ ಬರೋಡಾ ತಂಡಕ್ಕೆ ನಿರ್ಣಾಯಕ ಹಂತದಲ್ಲಿ ರನ್ ಗಳಿಸಿ ಗೆಲುವು ತಂದುಕೊಡುವಲ್ಲಿ ಎಡವಿರುವುದರಿಂದ ಆರ್ ಸಿಬಿ ತಂಡದ ಪರ ಫಿನಿಷಿಂಗ್ ಪಾತ್ರ ವಹಿಸುವವರು ಯಾರು ಎಂಬ ಪ್ರಶ್ನೆಯೂ ಮೂಡಿದೆ. ಆದರೆ ಟಿಮ್ ಡೇವಿಡ್ ಹಾಗೂ ಕನ್ನಡಿಗ ದೇವದತ್ ಪಡಿಕ್ಕಲ್ ಅವರು ಉತ್ತಮ ಫಾರ್ಮ್ ನಲ್ಲಿರುವುದು ತಂಡಕ್ಕೆ ವರವಾಗಿದೆ.