Sunday, January 25, 2026
Homeರಾಜ್ಯಬೆಂಗಳೂರಲ್ಲಿ ಸುಗಮ ಸಂಚಾರ ವ್ಯವಸ್ಥೆಗಾಗಿ ಬ್ಲೂಪ್ರಿಂಟ್‌ : ಡಿಕೆಶಿ

ಬೆಂಗಳೂರಲ್ಲಿ ಸುಗಮ ಸಂಚಾರ ವ್ಯವಸ್ಥೆಗಾಗಿ ಬ್ಲೂಪ್ರಿಂಟ್‌ : ಡಿಕೆಶಿ

Blueprint for smooth traffic system in Bengaluru: DK Shivakumar

ಬೆಂಗಳೂರು,ಜ.25- ವ್ಯಾಪಾರ ಉದ್ಯಮಗಳಿಗೆ ಅನುಕೂಲವಾಗುವಂತೆ ಸುಗಮ ಸಂಚಾರ ವ್ಯವಸ್ಥೆಗಾಗಿ 25 ವರ್ಷಗಳ ಭವಿಷ್ಯದ ನೀಲ ನಕ್ಷೆಯನ್ನು ತಯಾರಿಸಲು ವಿವಿಧ ಸಚಿವರುಗಳ ಜೊತೆ ಇನ್ನೊಂದು ವಾರದಲ್ಲಿ ಮಹತ್ವದ ಸಭೆ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ತಿಳಿಸಿದ್ದಾರೆ.

ಸ್ವಿಡ್ಜರ್‌ಲ್ಯಾಂಡ್‌ನ ದಾವೋಸ್‌‍ನಲ್ಲಿ ನಡೆದ ವಿಶ್ವ ಆರ್ಥಿಕ ಸಮೇಳನದಲ್ಲಿ ಪಾಲ್ಗೊಂಡು ಬೆಂಗಳೂರಿಗೆ ಮರಳಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಮೇಳನದಲ್ಲಿ ಬಹು ಮುಖ್ಯವಾಗಿ ನಗರೀಕರಣದ ಬೆಳವಣಿಗೆ ಬಗ್ಗೆ ಚರ್ಚೆಯಾಗಿದೆ. ದಾವೋಸ್‌‍ನಲ್ಲಿ ಎರಡು ಮತ್ತು ಮೂರನೇ ಹಂತದ ನಗರಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಅದೇ ರೀತಿ ಕರ್ನಾಟಕದಲ್ಲಿ ಪ್ರತಿಯೊಂದು ಪಟ್ಟಣ ಮತ್ತು ನಗರಕ್ಕೂ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ವರ್ತುಲ ರಸ್ತೆ, ಪೆರಿಫೆರಲ್‌ ರಸ್ತೆ, ಬಿಸಿನೆಸ್‌‍ ಕಾರಿಡಾರ್‌ ನಿರ್ಮಾಣಕ್ಕಾಗಿ ಈಗಿನಿಂದಲೇ ಕ್ರಮ ಕೈಗೊಳ್ಳಬೇಕಿದೆ. ಮುಂದಿನ 25 ವರ್ಷಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನೀಲ ನಕ್ಷೆ ತಯಾರಿಸಲು ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಪೌರಾಡಳಿತ, ಕೈಗಾರಿಕೆ, ಕಂದಾಯ ಸೇರಿದಂತೆ ವಿವಿಧ ಸಚಿವರುಗಳ ಜೊತೆ ಸಭೆ ನಡೆಸಲಾಗುತ್ತದೆ ಎಂದರು.

ಅಲ್ಲಿ ರಸ್ತೆಗಳ ವಿಸ್ತೀರ್ಣ ಸೇರಿದಂತೆ ಎಲ್ಲಾ ವಿಚಾರಗಳು ಚರ್ಚೆಯಾಗಲಿವೆ. ಬಳಿಕ ಕಂದಾಯ ಮತ್ತು ಕಾನೂನು ಸಚಿವರಿಗೆ ಅಗತ್ಯ ಮಾರ್ಪಾಡು ಹಾಗೂ ಕಾನೂನು ತಿದ್ದುಪಡಿಗೆ ಶಿಫಾರಸು ಮಾಡಲಾಗುವುದು ಎಂದು ಅವರು ಹೇಳಿದರು.

ಅತಿ ಚಿಕ್ಕ ಪ್ರದೇಶವಾಗಿದ್ದರೂ ದಾವೋಸ್‌‍ನಲ್ಲಿನ ಶಿಸ್ತು ಬದ್ಧ ನಡವಳಿಕೆ, ಕಾನೂನು ಪಾಲನೆ ಮತ್ತು ಜನರ ಅರ್ಪಣಾ ಮನೋಭಾವ ಮಾದರಿಯಾಗಿದೆ. 65 ದೇಶಗಳ ಮುಖ್ಯಸ್ಥರು ಸಮೇಳನದಲ್ಲಿ ಭಾಗವಹಿಸಿದ್ದರು. ದೇಶ, ವಿದೇಶಗಳ ಆಡಳಿತಗಾರರು ಉದ್ಯಮಿಗಳನ್ನು ಭೇಟಿ ಮಾಡುವ ಅವಕಾಶ ನಮಗೆ ಸಿಕ್ಕಿತ್ತು. ಕರ್ನಾಟಕದ ಪೆವಿಲಿಯನ್‌ ಸ್ಥಾಪಿಸಿದ್ದೆವು. ವಿವಿಧ ಕ್ಷೇತ್ರಗಳ ಗಣ್ಯರು ನಮನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. 45 ಸಂಸ್ಥೆಗಳು ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿಸಿವೆ. ಆದರೆ, ಅಲ್ಲಿಗಿಂತಲೂ ಕರ್ನಾಟಕದಲ್ಲೇ ಒಪ್ಪಂದಕ್ಕೆ ಸಹಿ ಹಾಕುವ ನಿರ್ಧಾರ ಮಾಡಿದ್ದೇವೆ ಎಂದರು.

ಡಾಟಾ ಸೆಂಟರ್‌ ಮತ್ತು ಗ್ಲೋಬಲ್‌ ಕೇಪಬಲ್‌ ಸೆಂಟರ್‌ ಸ್ಥಾಪನೆಗೆ ಹೆಚ್ಚಿನ ಪ್ರಸ್ತಾವನೆಗಳು ಬಂದಿವೆ. ನಮಲ್ಲಿ ಸಮೃದ್ಧಿಯಾದ ನೀರು ಮತ್ತು ವಿದ್ಯುತ್‌ ಲಭ್ಯವಿರುವ ಬಗ್ಗೆ ಜಾಗತಿಕ ನಾಯಕರಿಗೆ ಮನವರಿಕೆಯಾಗಿದೆ. ವಿಶ್ವದ ನಾಯಕರು ಬೆಂಗಳೂರಿನ ಮೂಲಕ ಭಾರತವನ್ನು ನೋಡುತ್ತಿದ್ದಾರೆ. ಇಲ್ಲಿರುವ ಕೌಶಲ್ಯ ಭರಿತ ಸಂಪನೂಲ ಬೇರೆಲ್ಲೂ ಲಭ್ಯವಿಲ್ಲ. ಅದು ಜಗತ್ತಿಗೆ ಅರಿವಾಗಿದೆ ಎಂದು ಅವರು ತಿಳಿಸಿದರು.

ಏರೋಸ್ಪೇಸ್‌‍, ಎ.ಐ, ಗ್ರೀನ್‌ ಇಂಧನ, ಆಹಾರ ಮತ್ತು ಪಾನೀಯ, ಮಾಲಿನ್ಯ ನಿಯಂತ್ರಣ, ಎಲೆಕ್ಟ್ರಿಕಲ್‌ ವಾಹನ ಸೇರಿದಂತೆ ಹಲವಾರು ಕ್ಷೇತ್ರಗಳ ಬಂಡವಾಳ ಹೂಡಿಕೆ ಬಗ್ಗೆ ಚರ್ಚೆಯಾಗಿದೆ ಎಂದು ಅವರು ಹೇಳಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಭಾಷಣ ಕೇಳಲು ತಾವು ಒಂದೂವರೆ ಗಂಟೆ ಕಾಲ ಕಾದು ನಿಲ್ಲಬೇಕಾಯಿತು. ವಿಶ್ವಬ್ಯಾಂಕ್‌ ಅಧ್ಯಕ್ಷರು, ಸೌದಿ ಅರೇಬಿಯಾದ ಆರ್ಥಿಕ ಮುಖ್ಯಸ್ಥರು, ಸೋಮಾಲಿಯಾದ ಉಪಪ್ರಧಾನಿ ಸೇರಿದಂತೆ ಹಲವರನ್ನು ತಾವು ಭೇಟಿ ಮಾಡಿದ್ದಾಗಿ ಹೇಳಿದ ಅವರು, ಬೆಂಗಳೂರಿನ ಬಿಡದಿಯಲ್ಲಿ ಎಐ ಸೆಂಟರ್‌ ಸ್ಥಾಪಿಸಲಾಗುತ್ತಿದೆ. ಅದಕ್ಕೆ ಜಮೀನು ಕೊಡಿಸಬಾರದು ಎಂದು ಕೆಲವರು ರಾಜಕೀಯ ಮಾಡುತ್ತಿದ್ದಾರೆ. ಯಾರು ಏನೇ ಮಾಡಿದರೂ ಅಭಿವೃದ್ಧಿ ನಿಲ್ಲಿಸಲಾಗುವುದಿಲ್ಲ. ಮುಂದೊಂದು ದಿನ ಅಲ್ಲಿನ ಬೆಳವಣಿಗೆ ನೋಡಿ ರೈತರೇ ಖುದ್ದಾಗಿ ಜಮೀನು ನೀಡಲು ಮನಸ್ಸು ಮಾಡುವ ವಾತಾವರಣ ನಿರ್ಮಾಣವಾಗುತ್ತದೆ ಎಂದರು.

ತೈವಾನ್‌ ದೇಶದ ಎ ಐ ಉದ್ಯಮಿಯೊಬ್ಬರು ಸಮೇಳನದಲ್ಲಿ ಮಾತನಾಡಿ ವೈದ್ಯಕೀಯ ಕ್ಷೇತ್ರಕ್ಕೆ 60ಸಾವಿರ ನರ್ಸ್‌ಗಳ ಅಗತ್ಯವಿದೆ. ಆದರೆ ಭವಿಷ್ಯದಲ್ಲಿ ಎಐ ಮೂಲಕ ಸೇವೆ ಒದಗಿಸಬಹುದು. ಔಷಧಿ ಶಿಫಾರಸು ಕೂಡ ಮಾಡಲು ಅವಕಾಶ ಇದೆ ಎಂದಿದ್ದಾರೆ. ಅದಕ್ಕೆ ಪೂರಕವಾಗಿ ನಮಲ್ಲಿ ಉದ್ಯಮವನ್ನು ಬೆಳೆಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದರು.

ಬಂಡವಾಳ ಹೂಡಿಕೆಗೆ ಪೂರಕವಾದ ವಾತಾವರಣ ನಿರ್ಮಿಸಲು ಫೆಬ್ರವರಿಯಲ್ಲಿ ಯಸ್‌‍ ಬೆಂಗಳೂರು ಉಪಕ್ರಮಗಳನ್ನು ಆರಂಭಿಸಲಾಗುತ್ತದೆ. ಸುರಂಗ ರಸ್ತೆ ನಿರ್ಮಾಣಕ್ಕೆ ಸಂಬಂಧ ಪಟ್ಟಂತೆಯೂ ಚರ್ಚೆ ನಡೆಸಲಾಗಿದೆ. ಮಹಾರಾಷ್ಟ್ರದಲ್ಲಿ ಹಲವಾರು ಸುರಂಗ ರಸ್ತೆಗಳು ನಿರ್ಮಾಣಗೊಳ್ಳುತ್ತಿವೆ. ತಮ ನೇತೃತ್ವದಲ್ಲಿ ಅಲ್ಲಿಗೆ ನಿಯೋಗ ತೆರಳಿ ಅಧ್ಯಯನ ನಡೆಸಲಾಗುವುದು. ಒಳ್ಳೆ ಅಭ್ಯಾಸಗಳನ್ನು ಪಡೆದುಕೊಳ್ಳಲಾಗುವುದು. ದರ ಪೈಪೋಟಿ ಬಗ್ಗೆಯೂ ಚರ್ಚೆ ನಡೆಸುತ್ತೇವೆ ಎಂದು ಅವರು ಹೇಳಿದರು.

ಬಂಡವಾಳ ಹೂಡಿಕೆಗೆ ಪೂರಕ ಚಟುವಟಿಕೆಗಳನ್ನು ರೂಪಿಸಲು ಬೆಂಗಳೂರಿನಲ್ಲಿ ನಿರ್ದಿಷ್ಟ ಜಾಗ ಗುರುತಿಸಬೇಕಿದೆ. ಕೆಲವು ಖಾಸಗಿ ಸಂಸ್ಥೆಯವರು ಭವಿಷ್ಯದಲ್ಲಿ ಸ್ಥಳಾಂತರಗೊಳ್ಳುವ ರೇಸ್‌‍ಕೋರ್ಸ್‌ ಜಾಗವನ್ನೇ ಕೊಡಿ ಎಂದು ಕೇಳಿದ್ದಾರೆ. ಆ ರೀತಿ ಮಾಡಿದರೆ ನನ್ನನ್ನು ಹಿಡಿದು ಬಡಿಯುತ್ತಾರೆ. ಅದು ಪೂರ್ತಿಯಾಗಿ ಸ್ಥಳಾಂತರವಾದ ಮೇಲೆ ಪರಿಶೀಲಿಸುವುದಾಗಿ ನಾನು ಹೇಳಿದ್ದೇನೆ. ಆದರೆ, ಬೆಂಗಳೂರಿನಲ್ಲಿ ಎಲ್ಲೋ ಒಂದು ಕಡೆ ನಿರ್ದಿಷ್ಟವಾದ ಜಾಗವನ್ನು ಒದಗಿಸಲೇಬೇಕು. ಈ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದರು.

RELATED ARTICLES

Latest News