ನವದೆಹಲಿ,ಜ.20- ಎಎಪಿ ಮುಖ್ಯಸ್ಥ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಅತಿಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನವದೆಹಲಿ ಕ್ಷೇತ್ರದಿಂದ ಕೇಜ್ರಿವಾಲ್ ಸ್ಪರ್ಧಿಸುತ್ತಿದ್ದು ಇವರ ವಿರುದ್ಧ 23 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿರುವ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆಯಲು ಇಂದು ಕೊನೆಯ ದಿನವಾಗಿತ್ತು. ಚುನಾವಣಾ ಆಯೋಗದ ಮಾಹಿತಿ ಪ್ರಕಾರ 70 ಕ್ಷೇತ್ರಗಳಿಗೆ 719 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದು, ಆಯೋಗ ಒಟ್ಟು 1040 ನಾಮಪತ್ರಗಳನ್ನು ಸ್ವೀಕರಿಸಿದೆ.
ಅಚ್ಚರಿ ಎಂಬಂತೆ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಅರವಿಂದ ಕೇಜ್ರಿವಾಲ್ ವಿರುದ್ಧ ನವದೆಹಲಿ ಕ್ಷೇತ್ರದಲ್ಲಿ ಎದುರಾಳಿ ಸ್ಪರ್ಧಿಗಳಾಗಿದ್ದಾರೆ. ಬಿಜೆಪಿಯಿಂದ ಪರ್ವೇಶ್ ವರ್ಮಾ ಅಭ್ಯರ್ಥಿ. ಇವರು ಮಾಜಿ ಸಿಎಂ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರರಾಗಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಸಿಎಂ ಶೀಲಾ ದೀಕ್ಷಿತ್ ಅವರ ಪುತ್ರ ಸಂದೀಪ್ ದೀಕ್ಷಿತ್ ಅಭ್ಯರ್ಥಿಯಾಗಿದ್ದಾರೆ.
ಅತಿ ಕಡಿಮೆ ನಾಮಪತ್ರಗಳು (5) ಪಟೇಲ್‌ನಗರ, ಕಸ್ತೂರ್‌ಬಾ ನಗರದಲ್ಲಿ ಸಲ್ಲಿಕೆಯಾಗಿವೆ. ಕಸ್ತೂರ್‌ಬಾನಗರದಲ್ಲಿ 6 ಅಭ್ಯರ್ಥಿಗಳು 9 ನಾಮಪತ್ರ ಸಲ್ಲಿಸಿದ್ದರು. 5 ನಾಮಪತ್ರ ಸ್ವೀಕಾರಗೊಂಡಿವೆ. ಬಿಜೆಪಿಯಿಂದ ನೀರಜ್ ಬಸೋಯಾ, ಎಎಪಿಯಿಂದ ರಮೇಶ್ ಪಹಲ್ವಾನ್ ಮತ್ತು ಕಾಂಗ್ರೆಸ್‌ನಿಂದ ಅಭಿಷೇಕ್ ದತ್ ಕಣದಲ್ಲಿದ್ದಾರೆ.
2025ರ ದೆಹಲಿ ವಿಧಾನಸಭೆ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. 2015, 2020ರಲ್ಲಿ ಸ್ಪಷ್ಟ ಬಹುಮತ ಪಡೆದು ಗೆದ್ದ ಆಮ್ ಆದಿ ಪಕ್ಷ ಈ ಬಾರಿಯೂ ಗೆಲ್ಲುವ ಉತ್ಸಾಹದಲ್ಲಿದೆ. ಎಎಪಿಗೆ ಬಿಜೆಪಿ, ಕಾಂಗ್ರೆಸ್ ಸಮಾನ ಎದುರಾಳಿಗಳಾಗಿವೆ.
15 ವರ್ಷಗಳ ಕಾಲ ದೆಹಲಿಯನ್ನು ಆಳಿದ್ದ ಕಾಂಗ್ರೆಸ್ ಪಕ್ಷ ಕಳೆದ ಎರಡು ಚುನಾವಣೆಗಳಲ್ಲಿ ಹಿನ್ನಡೆ ಕಂಡಿದೆ. 2020ರಲ್ಲಿ ರಾಜ್ಯದಲ್ಲಿ ಒಂದು ಸೀಟ್‌ನ್ನೂ ಗೆಲ್ಲಲು ಪಕ್ಷ ವಿಫಲವಾಗಿತ್ತು. ಕಳೆದ ಚುನಾವಣೆಯಲ್ಲಿ ಎಎಪಿ 62, ಬಿಜೆಪಿ 8 ಸೀಟುಗಳಲ್ಲಿ ಜಯಗಳಿಸಿತ್ತು.
2024ರ ಲೋಕಸಭೆ ಚುನಾವಣೆಗೆ ಎಎಪಿ, ಕಾಂಗ್ರೆಸ್ ಇಂಡಿಯಾ ಮೈತ್ರಿಕೂಟದಲ್ಲಿದ್ದವು. ಆದರೆ ದೆಹಲಿ ವಿಧಾನಸಭೆ ಚುನಾವಣೆಯನ್ನು ಎರಡೂ ಪಕ್ಷಗಳು ಏಕಾಂಗಿಯಾಗಿ ಎದುರಿಸುತ್ತಿವೆ.
ಬಿಜೆಪಿ ಸಹ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರ ಪಡೆಯುವ ಉತ್ಸಾಹದಲ್ಲಿದ್ದು, ಬಿಜೆಪಿ, ಕಾಂಗ್ರೆಸ್ ಪ್ರಕಾರ ಎಎಪಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ.
ಸರ್ಕಾರದ ವಿರುದ್ಧದ ಭ್ರಷ್ಟಾಚಾರದ ಆರೋಪಗಳು, ಅರವಿಂದ ಕೇಜ್ರಿವಾಲ್, ಮನೀಸ್ ಸಿಸೋಡಿಯಾ ಜೈಲುವಾಸ, ಮುಖ್ಯಮಂತ್ರಿ ಬದಲಾವಣೆ ಹಿನ್ನಲೆಯಲ್ಲಿ ಎಎಪಿ ಈ ಬಾರಿ ಚುನಾವಣೆಯಲ್ಲಿ ಹಲವು ಸವಾಲು ಎದುರಿಸುತ್ತಿದೆ.
2024ರ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚನೆ ಮಾಡಿರುವ ಬಿಜೆಪಿ, ಅತಿ ಹೆಚ್ಚು ಸ್ಥಾನ ಗೆದ್ದಿರುವ ಕಾಂಗ್ರೆಸ್ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಧಿಕಾರವನ್ನು ಪಡೆಯುವ ಉತ್ಸಾಹದಲ್ಲಿದೆ. ಎಎಪಿ ಅಧಿಕಾರಕ್ಕೆ ಬಂದರೆ ಮತ್ತೆ ಅರವಿಂದ ಕೇಜ್ರಿವಾಲ್ ಮುಖ್ಯಮಂತ್ರಿ ಎಂದು ಈಗಾಗಲೇ ಘೋಷಣೆ ಮಾಡಿದೆ.
ಬಿಜೆಪಿಯಿಂದ ರಕ್ತಸಿಕ್ತ ಪ್ರಚಾರ :
ಮಾಜಿ ಮುಖ್ಯಮಂತ್ರಿಯನ್ನು ಕೊಲ್ಲಲು ಯತ್ನಿಸಿರುವ ಬಿಜೆಪಿ, ಪ್ರಚಾರ ಕಣವನ್ನು ರಕ್ತಸಿಕ್ತಗೊಳಿಸಲು ಹೊರಟಿದೆ. ದೆಹಲಿಯ ಜನತೆ ಹಿಂದೆಂದೂ ಕಂಡರಿಯದ ಹಿಂಸಾತಕ ಪ್ರಚಾರಕ್ಕೆ ಬಿಜೆಪಿ ಪ್ರಯತ್ನ ಮಾಡುತ್ತಿದೆ, ಎಂದು ಮುಖ್ಯಮಂತ್ರಿ ಆತಿಷಿ ಮರ್ಲೇನಾ ಆರೋಪಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಮತ್ತವರ ಬೆಂಬಲಿಗರು ಕೇಜ್ರಿವಾಲ್ ಕಾರಿನ ಮೇಲೆ ದಾಳಿ ನಡೆಸುವ ಮೂಲಕ ಜನರಲ್ಲಿ ಭಯಭೀತಿ ಉಂಟು ಮಾಡತ್ತಿದ್ದಾರೆ ಎಂದು ಆರೋಪಿಸಿರುವ ಆತಿಷಿ, ಕೇಜ್ರಿವಾಲ್ ಮೇಲೆ ದಾಳಿ ನಡೆಸಿದ ರೋಹಿತ್ ತ್ಯಾಗಿ, ಶಾಂಕಿ ಎಂಬಿಬ್ಬರು ವರ್ಮಾ ಬೆಂಬಲಿಗರು. ಸೋಲುವ ಭೀತಿಯಲ್ಲಿ ದಾಳಿ ನಡೆಸಿದ್ದಾರೆ ಎಂದು ದೂರಿದರು.
ಗೂಂಡಾಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಚುನಾವಣಾ ಪ್ರಚಾರ ನಡೆಸುತ್ತಿದೆ. ಕ್ರಿಮಿನಲ್ ಹಿನ್ನೆಲೆ ಉಳ್ಳವರನ್ನು ಬಳಸಿಕೊಂಡು ಪ್ರತಿಪಕ್ಷ ನಾಯಕರ ಮೇಲೆ ದಾಳಿಗೆ ಸಂಚು ರೂಪಿಸಿದೆ. ಕೇಜ್ರಿವಾಲ್ ಹತ್ಯೆ ಯತ್ನ ಅದರ ಒಂದು ಭಾಗವಾಗಿದೆ ಎಂದು ಆಪ್ ಸಂಸದ ಸಂಜಯ್ ಸಿಂಗ್ ಆರೋಪಿಸಿದರು.
ಅನುಕಂಪ ಗಿಟ್ಟಿಸುವ ಪ್ರಯತ್ನ:
ಕೇಜ್ರಿವಾಲ್ ಹತ್ಯೆ ಯತ್ನದ ಆರೋಪ ತಳ್ಳಿ ಹಾಕಿದ ಪರ್ವೇಶ್ ವರ್ಮಾ, ೞೞಪ್ರಚಾರ ಮಾಡುತ್ತಿದ್ದ ಕೇಜ್ರಿವಾಲ್ ಮುಂದೆ ಬಂದ ಕೆಲ ಯುವಕರು ಕೆಲಸದ ಬಗ್ಗೆ ಕೇಳುತ್ತಿದ್ದರು. ಆದರೆ, ಯುವಕರ ಮೇಲೆ ಕಾರು ಹರಿಸಲಾಗಿದೆ. ಮೂವರು ಯುವಕರು ಗಾಯಗೊಂಡಿದ್ದಾರೆ. ಜನರ ಅನುಕಂಪ ಗಿಟ್ಟಿಸಲು ಸುಳ್ಳು ಆರೋಪ ಮಾಡುತ್ತಿದ್ದಾರೆ,ೞೞ ಎಂದು ವಾಗ್ದಾಳಿ ನಡೆಸಿದರು.
ದೆಹಲಿ ಮೆಟ್ರೋದಲ್ಲಿ ವಿದ್ಯಾರ್ಥಿಗಳಿಗೆ ಪ್ರಯಾಣ ದರ ಕಡಿತಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದ ಕೇಜ್ರಿವಾಲ್, ದಿಲ್ಲಿ ಸರಕಾರದ ನೌಕರರು, ಪೌರ ಕಾರ್ಮಿಕರಿಗೆ ಮನೆ ಕಟ್ಟಿಕೊಡಲು ಭೂಮಿ ನೀಡುವಂತೆ ಕೋರಿ ಭಾನುವಾರ ಮತ್ತೊಂದು ಪತ್ರ ಬರೆದಿದ್ದಾರೆ. ದೆಹಲಿಯನ್ನು ಸ್ವಚ್ಚವಾಗಿಡುವ ಕೆಲಸ ಮಾಡುವ ಕಾರ್ಮಿಕರು ಸೇರಿ ಪಾಲಿಕೆ ಸಿಬ್ಬಂದಿಯ ಸ್ವಂತ ಮನೆಯ ಕನಸು ನನಸು ಮಾಡಲು ಆಪ್ ಸಿದ್ಧವಿದೆ. ಕೇಂದ್ರ ಜಾಗ ನೀಡಿದರೆ ಆಪ್ ಸರಕಾರದಿಂದ ಮನೆಗಳನ್ನು ಕಟ್ಟಿ ಕೊಡಲಾಗುವುದು ಎಂದು ಪತ್ರದಲ್ಲಿ ಕೇಜ್ರಿವಾಲ್ ವಿವರಿಸಿದ್ದಾರೆ.
ನವದೆಹಲಿ ಕ್ಷೇತ್ರದಲ್ಲಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಅತ್ಯಧಿಕ 28 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ದೆಹಲಿ 70 ಕ್ಷೇತ್ರಗಳಿಗೆ ಒಟ್ಟು 981 ಅಭ್ಯರ್ಥಿಗಳು 1,523 ನಾಮಪತ್ರ ಸಲ್ಲಿಸಿದ್ದಾರೆ. ಪರಿಶೀಲನೆ ವೇಳೆ 477 ನಾಮಪತ್ರಗಳು ತಿರಸ್ಕೃತಗೊಂಡಿದ್ದು, 1,040 ನಾಮಪತ್ರ ಸ್ವೀಕೃತವಾಗಿವೆ.
ಕಳೆದ 10 ವರ್ಷದಲ್ಲಿ ದೆಹಲಿ ಜನರಿಗೆ ಕೊಟ್ಟ ಮೂರು ಭರವಸೆ ಈಡೇರಿಸಲು ಸಾಧ್ಯವಾಗಿಲ್ಲ. ಮೂರನೇ ಬಾರಿಗೆ ಅಧಿಕಾರ ನೀಡಿದರೆ ಹಿಂದಿನ ಎಲ್ಲಾ ವಾಗ್ದಾನ ಪೂರೈಸಲಾಗುವುದು ಎಂದು ಕೇಜ್ರಿವಾಲ್ ಆಶ್ವಾಸನೆ ನೀಡಿದ್ದಾರೆ.
ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧೆ ಮಾಡಿರುವ ಅರವಿಂದ್ ಕೇಜ್ರಿವಾಲ್ ಆವರ ಆಮ್ ಆದಿ ಪಕ್ಷದ ನಿರ್ಧಾರ ಬಿಜೆಪಿಯನ್ನು ಗೆಲ್ಲಿಸಲು ಮಾಡಿದ ಪ್ರಯತ್ನದಂತೆ ಕಾಣುತ್ತಿದೆ. ಆಪ್ ಏಕಾಂಗಿ ಸ್ಪರ್ಧೆಯು ಬಿಜೆಪಿಗೆ ಸಹಕಾರಿಯಾಗಲಿದೆ ಎಂದು ಕಾಂಗ್ರೆಸ್ ನಾಯಕ ಅಜಯ್ ಮಾಕೆನ್ ದೂರಿದ್ದಾರೆ.