ಬೆಂಗಳೂರು,ಜ.20– ಏರ್‌ಫೋರ್ಸ್ ಮಾಜಿ ಅಧಿಕಾರಿಯೊಬ್ಬರು ಮೆಟ್ರೋ ಹಳಿಗೆ ಹಾರಿ ಆತಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಇಂದು ಬೆಳಿಗ್ಗೆ 10.30 ರ ಸಮಯದಲ್ಲಿ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಸಂಭವಿಸಿದೆ.
ಆತಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಬಿಹಾರ ಮೂಲದ ಅನಿಲ್ ಕುಮಾರ್ ಪಾಂಡೆ (49) ಎಂದು ಗುರುತಿಸಲಾಗಿದೆ.ಮೆಟ್ರೋ ರೈಲು ಚಾಲಕನ ಸಮಯ ಪ್ರಜ್ಞೆಯಿಂದ ಪಾಂಡೆ ಅವರ ಪ್ರಾಣ ಉಳಿದಿದ್ದು, ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ಮೆಟ್ರೋ ಟ್ರೈನ್ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಏರ್‌ಫೋರ್ಸ್ ಮಾಜಿ ಅಧಿಕಾರಿ ಏಕಾಏಕಿ ಹಳಿಗೆ ಹಾರಿದರು. ತಕ್ಷಣ ಚಾಲಕ ರೈಲು ನಿಲ್ಲಿಸಿದ ಪರಿಣಾಮ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಳಿಗೆ ಹಾರಿದ ಅವರನ್ನು ತಕ್ಷಣ ರಕ್ಷಿಸಿದ ಸಿಬ್ಬಂದಿಗಳು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈ ಘಟನೆಯಲ್ಲಿ ಪಾಂಡೆ ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಘಟನೆಯಿಂದಾಗಿ ಸುಮಾರು 15 ನಿಮಿಷಗಳ ಕಾಲ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿತ್ತು.ಇತ್ತಿಚೆಗೆ ಮೆಟ್ರೋ ಹಳಿಗೆ ಹಾರಿ ಆತಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿರುವ ಘಟನೆಗಳು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.