ಬೆಳಗಾವಿ,ಜ.20- ಆರಂಭದಿಂದಲೂ ನಾನು ರಾಜಕೀಯದಲ್ಲಿ ದಮು ತಡೆದುಕೊಂಡು ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇನೆ, ನನಗೆ ಯಾರ ಜೊತೆಯೂ ಭಿನ್ನಾಭಿಪ್ರಾಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಅಧ್ಯಕ್ಷನಾಗಿ ಎಲ್ಲರನ್ನೂ ಸರಿಸಮನಾಗಿ ಕಾಣುವುದು ನನ್ನ ಧರ್ಮ. ಆ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡಿಕೊಂಡು ಬಂದಿದ್ದೇನೆ ಎಂದರು.ವಿದ್ಯಾರ್ಥಿ ನಾಯಕನಾಗಿದ್ದಾಗಲೇ ಕಾಂಗ್ರೆಸ್ ಪಕ್ಷ ನನ್ನನ್ನು ಗುರುತಿಸಿ ಟಿಕೆಟ್ ನೀಡಿದೆ. ನನಗೆ ಪಕ್ಷ ಮುಖ್ಯ. ನನಗೆ ಕೊಟ್ಟ ಜವಾಬ್ದಾರಿಯನ್ನು ನಾನು ನಿಷ್ಠೆಯಿಂದ ಪಾಲಿಸುತ್ತೇನೆ ಎಂದು ಹೇಳಿದರು.
ಮೊದಲಿನಿಂದಲೂ ಅನೇಕ ಸಂದರ್ಭಗಳಲ್ಲಿ ತ್ಯಾಗ ಮಾಡಿಕೊಂಡು ಬಂದಿದ್ದೇನೆ. ಧರ್ಮಸಿಂಗ್ ನೇತೃತ್ವದ ಸಮಿಶ್ರ ಸರ್ಕಾರದಲ್ಲಿ ಈ ಮೊದಲು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯಿಂದಲೂ ದಮು ತಡೆದುಕೊಂಡು ಕೆಲಸ ಮಾಡಿಕೊಂಡು ಬಂದಿದ್ದೇನೆ. ಯಾರದೋ ಮಾತು ಕೇಳಿ ನನ್ನ ಹೆಸರನ್ನು ಭಿನ್ನಮತ ಎಂದು ಬಳಕೆ ಮಾಡಬೇಡಿ. ನನಗೆ ಯಾರೊಂದಿಗೂ ಭಿನ್ನಾಭಿಪ್ರಾಯಗಳಿಲ್ಲ. ನಾನು ತ್ಯಾಗ ಮಾಡಿಕೊಂಡೇ ಬರುತ್ತೇನೆ. ಜನರಿಗೆ ಒಳ್ಳೆಯದಾದರೆ ಸಾಕು ಎಂದರು.
ನಾನುಂಟು, ನನ್ನ ಹೈಕಮಾಂಡ್ ಉಂಟು. ಕಾರ್ಯಕರ್ತರ ರಕ್ಷಣೆ, ಸರ್ಕಾರವನ್ನು ಭದ್ರಗೊಳಿಸುವುದು, ಪಕ್ಷ ಉಳಿಸುವುದು… ಇದು ನನ್ನ ಕರ್ತವ್ಯ. ಅದನ್ನು ಬಿಟ್ಟು ಬೇರೆ ಯಾವುದಕ್ಕೂ ನನ್ನ ಹೆಸರನ್ನು ಬಳಕೆ ಮಾಡಬೇಡಿ ಎಂದು ತಿಳಿಸಿದರು.
ನಿನ್ನೆ ಹಿರಿಯ ಶಾಸಕ ಆಸಿಫ್ ಸೇಠ್ ಅವರ ಮನೆಗೆ ನಾನು ಭೇಟಿ ನೀಡಿದ್ದೆ. ಅದಕ್ಕೆ ಮಾಧ್ಯಮಗಳು ಬೇರೆಯದೇ ಬಣ್ಣ ಬಳಿದಿವೆ. ಆಸಿಫ್ ಸೇಠ್ ಅವರಿಗೆ ಹೈಕಮಾಂಡ್ ಎಚ್ಚರಿಕೆ ನೀಡಿದೆ. ಅದಕ್ಕಾಗಿ ಅವರನ್ನು ಸಮಾಧಾನಪಡಿಸಲು ನಾನು ಹೋಗಿದ್ದೇನೆ ಎಂದೆಲ್ಲಾ ಬಿಂಬಿಸಲಾಗಿದೆ. ಇದು ಸತ್ಯಕ್ಕೆ ದೂರವಾದುದು. ಮಾಧ್ಯಮಗಳು ಸುಳ್ಳು ಸುದ್ದಿಗಳ ಮೂಲಕ ತಮ ಘನತೆಯನ್ನು ಕಳೆದುಕೊಳ್ಳುತ್ತಿವೆ ಎಂದು ಆರೋಪಿಸಿದರು.
ಬೆಳಗಾವಿಯಲ್ಲಿ ನಾವು ರಾಷ್ಟ್ರಮಟ್ಟದ ಘನತೆಯುತವಾದ ಕಾರ್ಯಕ್ರಮ ಮಾಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಸ್ಥಳೀಯವಾದ ಕೆಳಮಟ್ಟದ ರಾಜಕಾರಣದ ಬಗ್ಗೆ ಚರ್ಚೆ ಮಾಡುವುದು ಅನಗತ್ಯ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ರ ಪ್ರಶ್ನೆಯೊಂದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದರು.ನನಗೆ ರಾಜಕಾರಣದಲ್ಲಿ ಯಾರ ಜೊತೆಗೂ ವೈಯಕ್ತಿಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟಪಡಿಸಿದರು.
ದೆಹಲಿಯ ವಿಧಾನಸಭಾ ಚುನಾವಣೆಗೆ ನನ್ನನ್ನು ಸ್ಟಾರ್ ಪ್ರಚಾರಕರ ಪಟ್ಟಿಗೆ ಸೇರಿಸಿರುವ ಅರಿವಿದೆ. ಪ್ಯಾರಿ ದೀದಿ ಭರವಸೆಯಡಿ ಪ್ರತಿ ಮಹಿಳೆಗೆ 2,500 ರೂ. ನೀಡುವ ಘೋಷಣೆಯನ್ನು ದೆಹಲಿಯಲ್ಲಿ ನಾನೇ ಮಾಡಿ ಬಂದಿದ್ದೇನೆ. ಹೀಗಾಗಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ನನ್ನ ಹೆಸರು ಸೇರಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರನ್ನು ಪ್ರಚಾರಕರ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಅನಗತ್ಯವಾದ ವ್ಯಾಖ್ಯಾನ ಮಾಡುವ ಅಗತ್ಯವಿಲ್ಲ. ಸಿದ್ದರಾಮಯ್ಯನವರು ಬಜೆಟ್ ಪೂರ್ವ ತಯಾರಿಯಲ್ಲಿ ತೊಡಗಿಸಿಕೊಳ್ಳಬೇಕಿದೆ. ಹಲವಾರು ಸಭೆಗಳನ್ನು ನಡೆಸಲಿದ್ದಾರೆ. ಅದಕ್ಕಾಗಿ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.ನಾಳೆ ನಡೆಯಲಿರುವ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್ ಸಮಾವೇಶದ ಬಗ್ಗೆ ಇದೇ ವೇಳೆ ಡಿ.ಕೆ.ಶಿವಕುಮಾರ್ ವಿವರಣೆ ನೀಡಿದರು.