ಡೆಹ್ರಾಡೂನ್,ಜ.20- ಉತ್ತರಾಖಂಡದ ಬಿಜೆಪಿ ನೇತೃತ್ವದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಸಚಿವಸಂಪುಟ ಏಕರೂಪ ನಾಗರಿಕ ಸಂಹಿತೆಗೆ ಅನುಮೋದನೆ ನೀಡಿದೆ. ಈ ಮೂಲಕ 2022ರಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಲಾಗಿದೆ ಎಂದು ಸಿಎಂ ಹೇಳಿದ್ದಾರೆ.
ಉತ್ತರಾಖಂಡ ಸರ್ಕಾರ ಯುಸಿಸಿ ಜಾರಿಗೆ ತರಲು ಸಿದ್ಧತೆ ನಡೆಸಿದೆ. 2025ರ ಜನವರಿ 26 ರಿಂದ ರಾಜ್ಯದಲ್ಲಿ ಯುಸಿಸಿ ಜಾರಿಗೆ ಬರಬಹುದು. ಈ ಕಾನೂನನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ಉತ್ತರಾಖಂಡವಾಗಿದೆ ಎಂದು ತಿಳಿಸಿದ್ದಾರೆ. ಯುಸಿಸಿ ಈಗಾಗಲೇ ಸದನದಲ್ಲಿ ಅಂಗೀಕರಿಸಲ್ಪಟ್ಟಿದ್ದರಿಂದ ರಾಷ್ಟ್ರಪತಿಯವರಿಂದ ಅನುಮೋದನೆ ಪಡೆದು ಮತ್ತೊಮೆ ರಾಜ್ಯ ಸರ್ಕಾರ ಸಮಿತಿ ರಚಿಸಿದ್ದು, ಈ ಕಾನೂನನ್ನು ತಳಮಟ್ಟದಲ್ಲಿ ಜಾರಿಗೆ ತರಲು ಕಾರ್ಯತಂತ್ರ ರೂಪಿಸಿದೆ.
ಏಕರೂಪ ನಾಗರಿಕ ಸಂಹಿತೆ ಎಂದರೇನು?: ಏಕರೂಪ ನಾಗರಿಕ ಸಂಹಿತೆ ಎಂದರೆ ಇಡೀ ದೇಶದಲ್ಲಿ ಪ್ರತಿಯೊಂದು ಧರ್ಮ, ಜಾತಿ, ಪಂಗಡ, ವರ್ಗಕ್ಕೆ ಒಂದೇ ನಿಯಮವಿರುವುದು. ಏಕರೂಪ ನಾಗರಿಕ ಸಂಹಿತೆಯು ಜಾತ್ಯತೀತ ಕಾನೂನಾಗಿದ್ದು, ಅದರ ಅನುಷ್ಠಾನವಾದರೆ ಬೇರೆಲ್ಲಾ ಧರ್ಮಗಳ ವೈಯಕ್ತಿಕ ಕಾನೂನುಗಳು ಅಂತ್ಯಗೊಳ್ಳುತ್ತವೆ. ಇದೀಗ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಪಾರ್ಸಿ ಸಮುದಾಯಗಳು ವಿಭಿನ್ನ ಧಾರ್ಮಿಕ ಕಾನೂನುಗಳನ್ನು ಹೊಂದಿವೆ.
ಹಿಂದೂ ಕಾನೂನು ಬುದ್ಧ, ಜೈನ ಮತ್ತು ಸಿಖ್ ಧರ್ಮಗಳ ಅನುಯಾಯಿಗಳಿಗೂ ಅನ್ವಯಿಸುತ್ತದೆ. ವಿಲ್ ಮತ್ತು ಮದುವೆಯಂತಹ ವಿಷಯಗಳಲ್ಲಿ ಈ ಕಾನೂನುಗಳನ್ನು ಪಾಲಿಸಬೇಕು. ಮತ್ತೊಂದು ಅರ್ಥದಲ್ಲಿ ಏಕರೂಪ ನಾಗರಿಕ ಸಂಹಿತೆ ಎಂದರೆ ಇಡೀ ದೇಶಕ್ಕೆ ಏಕರೂಪದ ಕಾನೂನಿನ ಜೊತೆಗೆ ಮದುವೆ, ವಿಚ್ಛೇದನ, ಉತ್ತರಾಧಿಕಾರ, ದತ್ತು ಸ್ವೀಕಾರದ ನಿಯಮಗಳು ಎಲ್ಲಾ ಧಾರ್ಮಿಕ ಸಮುದಾಯಗಳಿಗೆ ಒಂದೇ ಆಗಿರುತ್ತದೆ.