Monday, January 20, 2025
Homeರಾಜ್ಯತೂಕ ಮತ್ತು ಅಳತೆ ಮಾಪನ ಇಲಾಖೆ ಮೇಲೆ ಲೋಕಾಯುಕ್ತ ದಾಳಿ

ತೂಕ ಮತ್ತು ಅಳತೆ ಮಾಪನ ಇಲಾಖೆ ಮೇಲೆ ಲೋಕಾಯುಕ್ತ ದಾಳಿ

Lokayukta raids Weight and Measurement Department

ಬೆಂಗಳೂರು,ಜ.20- ಕೆಲಸಕ್ಕೆ ಗೈರು ಹಾಜರಿ, ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ ನೌಕರರು ಕಾಣದಿರುವ ಬಗ್ಗೆ ಕೆಂಡಾಮಂಡಲರಾದ ಲೋಕಾಯುಕ್ತರು ಹಿರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಗರದಲ್ಲಿ ನಡೆದಿದೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಹಿಂಭಾಗದಲ್ಲಿರುವ ತೂಕ ಮತ್ತು ಅಳತೆ ಮೌಲ್ಯಮಾಪನ ಇಲಾಖೆಗೆ ದಿಢೀರ್ ದಾಳಿ ನಡೆಸಿದ ಉಪ ಲೋಕಾಯುಕ್ತ ವೀರಪ್ಪ ಮತ್ತು ಅಧಿಕಾರಿಗಳ ತಂಡ ಅಲ್ಲಿನ ಅವ್ಯವಸ್ಥೆಯನ್ನು ಕಂಡು ರಾಜಧಾನಿಯಲ್ಲೇ ಈ ರೀತಿಯ ವ್ಯವಸ್ಥೆ ಎಲ್ಲೂ ನೋಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಕಚೇರಿಯ ಕೆಲ ವಿಭಾಗ ಬೀಗ ಹಾಕಲಾಗಿತ್ತು. ಇದನ್ನು ಕೇಳಿದಾಗ ಅಧಿಕಾರಿಗಳು ಇನ್ನೂ ಬರಬೇಕು ಎಂದು ಅಲ್ಲಿದ್ದ ಡಿ ದರ್ಜೆ ನೌಕರರು ಹೇಳಿದಾಗ ಸಮಯ 11 ಗಂಟೆಯಾಗಿದೆ. ಇನ್ನೂ ಎಲ್ಲಿದ್ದಾರೆ? ಎಂದು ಪ್ರಶ್ನಿಸಿದರು.

ಹಾಜರಿಪುಸ್ತಕವನ್ನು ನೋಡಿದಾಗ ಕೆಲವರು ಸಹಿ ಹಾಕಿದ್ದರೂ ಅವರ ಆಸನದಲ್ಲಿ ಇಲ್ಲದಿದ್ದನ್ನು ಗಮನಿಸಿ ನಂತರ ಕೆಲವರು ಗೈರುಹಾಜರಾಗಿರುವುದರ ಬಗ್ಗೆ ಯಾವುದೇ ಸ್ಪಷ್ಟ ಉತ್ತರ ನೀಡಿಲ್ಲ.
ಲೋಕಾಯುಕ್ತ ದಾಳಿ ನಡೆದಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಕೆಲ ನೌಕರರು ಅಲರ್ಟ್ ಆಗಿದ್ದು, ಕಚೇರಿಯ ಹೊರಗೆ ಕಾಣಿಸಿಕೊಂಡಿದ್ದಾರೆ.

ಯಾರ್ಯಾರು ಅನಧಿಕೃತವಾಗಿ ಗೈರುಹಾಜರಾಗಿದ್ದರೋ ಅವರಿಗೆ ನೋಟಿಸ್ ಜಾರಿ ಮಾಡಿದರಲ್ಲದೆ, ಕಚೇರಿ ಸಮಯದಲ್ಲಿ ಆಸನದಲ್ಲಿ ಇರದ ಸಿಬ್ಬಂದಿಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ದಾಳಿ ವೇಳೆ ಹಾಜರಾತಿ ಪುಸ್ತಕದಲ್ಲಿ ಮುಂದಿನ 10 ದಿನಕ್ಕೂ ಹೆಚ್ಚು ದಿನಗಳಲ್ಲಿ ಸಹಿ ಮಾಡಿರುವುದು ಪತ್ತೆಯಾಗಿದೆ. ಕೆಲ ಅಧಿಕಾರಿಗಳ ಮೊಬೈಲ್ ಚೆಕ್ ಮಾಡಿದಾಗ ಫೋನ್ ಪೇ ಮತ್ತು ಗೂಗಲ್ ಪೇಗಳಲ್ಲಿ ಹಣ ಬಂದಿರುವುದನ್ನು ಪ್ರಶ್ನಿಸಿದಾಗ ತಡಬಡಾಯಿಸಿದ್ದಾರೆ.

ದಾಖಲಾತಿಗಳನ್ನು ನೀಡಲು ಲಂಚ ಪಡೆಯಲಾಗುತ್ತಿದೆ ಮತ್ತು ಕಡತಗಳ ವಿಲೇವಾರಿ ವಿಳಂಬ ಸೇರಿದಂತೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಇಂದು ಲೋಕಾಯುಕ್ತರು ಹಾಗೂ ಉಪ ಲೋಕಾಯುಕ್ತರು ಮತ್ತು 40 ಜನರ ತಂಡ ಮೌಲ್ಯಮಾಪನ ಇಲಾಖೆಯಲ್ಲಿ ತಪಾಸಣೆ ನಡೆಸಿದೆ.
ಒಟ್ಟಾರೆ ಲೋಕಾಯುಕ್ತರು ಮೌಲ್ಯಮಾಪನ ಇಲಾಖೆಯ ಅಧಿಕಾರಿಗಳ ಬೆವರಿಳಿಸಿದ್ದಾರೆ.
ಇತ್ತೀಚೆಗೆ ಬಿಬಿಎಂಪಿ ಕಚೇರಿಯ ಮೇಲೆ ದಾಳಿ ನಡೆಸಿದಾಗ ತಾಯಿಯ ಬದಲು ಮಗ ಕೆಲಸ ಮಾಡುತ್ತಿದ್ದುದು ಬೆಳಕಿಗೆ ಬಂದಿದ್ದು ಭಾರೀ ಸಂಚಲನ ಸೃಷ್ಟಿಯಾಗಿತ್ತು.

RELATED ARTICLES

Latest News