ಭುವನೇಶ್ವರ, ಜ.21– ನರೇಂದ್ರ ಮೋದಿ ಸರ್ಕಾರವು ಭಾರತೀಯ ಸಂವಿಧಾನದ ಶಿಲ್ಪಿ ಅವರ ತತ್ವಗಳ ಆಧಾರದ ಮೇಲೆ ರಾಷ್ಟ್ರವನ್ನು ನಿರ್ಮಿಸುವಲ್ಲಿ ನಿರತವಾಗಿದೆ ಎಂದು ಬಿಜೆಪಿಯ ಹಿರಿಯ ಸಂಸದ ಅನುರಾಗ್ ಠಾಕೂರ್ ಹೇಳಿದ್ದಾರೆ.
ವಿರೋಧ ಪಕ್ಷದ ಕಾಂಗ್ರೆಸ್ ವಿರುದ್ದ ಟೀಕಾ ಪ್ರಹಾರ ನಡೆಸಿದ ಠಾಕೂರ್, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಡಾ. ಅಂಬೇಡ್ಕರ್ ಅವರ ಸಿದ್ಧಾಂತಗಳಿಂದ ಪ್ರಭಾವಿತವಾಗಿದೆ ಅಲ್ಲದೆ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು. ನಮ ಪಕ್ಷದ ನೀತಿಯೂ ಕೂಡ ಅಂಬೇಡ್ಕರ್ ಅವರ ಸಿದ್ಧಾಂತಗಳ ಪ್ರತಿಬಿಂಬಗಳಾಗಿವೆ ಎಂದು ತಿರುಗೇಟು ನೀಡಿದರು.
ಯುಸಿಸಿ ಎಲ್ಲಾ ಸಮುದಾಯಗಳಿಗೆ ಸಮಾನತೆಯನ್ನು ಖಚಿತಪಡಿಸುತ್ತದೆ. ಯುಸಿಸಿ ಮದುವೆ, ವಿಚ್ಛೇದನ, ದತ್ತು ಮತ್ತು ಉತ್ತರಾಧಿಕಾರ ನಿಯಮಗಳ ಮೇಲಿನ ಧರ್ಮ-ಕೇಂದ್ರಿತ ಕಾನೂನುಗಳನ್ನು ಕೊನೆಗೊಳಿಸುತ್ತದೆ ಮತ್ತು ಎಲ್ಲರಿಗೂ ಏಕರೂಪದ ಕಾನೂನುಗಳನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.
ಭಾರತೀಯ ಸಂವಿಧಾನದ 75 ವರ್ಷಗಳನ್ನು ಸರಿಸಲು ಮತ್ತು ಅಂಬೇಡ್ಕರ್ ಅವರನ್ನು ಗೌರವಿಸಲು ಬಿಜೆಪಿ ಹಮಿಕೊಂಡಿರುವಎರಡು ವಾರಗಳ ಸಂವಿಧಾನ್ ಗೌರವ ಅಭಿಯಾನದಲ್ಲಿ ಭಾಗವಹಿಸಿದ್ದ ಠಾಕೂರ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಕಾಂಗ್ರೆಸ್ ತನ್ನ ರಾಜಕೀಯ ಲಾಭಕ್ಕಾಗಿ ಹಲವಾರು ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಿದೆ,ದೇಶದಲ್ಲಿ ಕಾಂಗ್ರೆಸ್ ಸರ್ಕಾರಗಳು ಇದ್ದಾಗ 75 ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಿದ್ದಾರೆ.ರಾಹುಲ್ ಗಾಂಧಿ ಅವರು ಸಂವಿಧಾನದ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಪಂಡಿತ್ ನೆಹರೂ ಅವರಿಂದ ಹಿಡಿದು ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿಯವರವರೆಗೆ ಕಾಂಗ್ರೆಸ್ ಪಕ್ಷವು ಬುಡಕಟ್ಟು ಜನಾಂಗದವರು, ದಲಿತರು ಮತ್ತು ಇತರ ಹಿಂದುಳಿದ ಜಾತಿ ಸಮುದಾಯಗಳ ಹಕ್ಕುಗಳಿಗಾಗಿ ತಮ ಜೀವನದುದ್ದಕ್ಕೂ ಹೋರಾಡಿದ ಡಾ. ಅಂಬೇಡ್ಕರ್ ಅವರನ್ನು ಅವಮಾನಿಸಿದೆ ಎಂದು ಟೀಕಿಸಿದರು.
ಒಡಿಶಾ ಬಿಜೆಪಿ ಅಧ್ಯಕ್ಷ ಮನಮೋಹನ್ ಸಮಲ್ ಅವರು, ಸಂವಿಧಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ದುರ್ಬಲಗೊಳಿಸುವ ಬಗ್ಗೆ ಕಾಂಗ್ರೆಸ್ ಪ್ರಾರಂಭಿಸಿದ ಆರೋಪಗಳನ್ನು ಎದುರಿಸಲು ಪಕ್ಷವು 50 ಸ್ಥಳಗಳಲ್ಲಿ ವಿಚಾರ ಸಂಕಿರಣಗಳು ಮತ್ತು ಬೌದ್ಧಿಕ ಸಭೆಗಳನ್ನು ಆಯೋಜಿಸಲಿದೆ ಹೇಳಿದರು