ಬೆಂಗಳೂರು,ಜ.26- ಮಹಿಳೆಯರ ಸುರಕ್ಷತೆಯ ವಿಚಾರದಲ್ಲಿ ಬೆಂಗಳೂರು ನಗರವು ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಸಮೀಕ್ಷೆಗಳು ಹೇಳಿರುವುದು ರಾಜ್ಯದ ಹೆಮೆಯ ಸಂಗತಿಯಾಗಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಶ್ಲಾಘಿಸಿದರು.
ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿಂದು ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ರಾಜ್ಯದ ಜನತೆಗೆ ಗಣರಾಜ್ಯೋತ್ಸವದ ಸಂದೇಶ ನೀಡಿದ ಅವರು, ಕರ್ನಾಟಕ ರಾಜ್ಯವು ಆರೋಗ್ಯ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದು, ಜನಸಂಖ್ಯೆಗನುಗುಣವಾಗಿ ಇಡೀ ದೇಶದಲ್ಲಿಯೇ ಅತೀ ಹೆಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆಸ್ಪತ್ರೆಗಳು ಮತ್ತು ಮೆಡಿಕಲ್ ಕಾಲೇಜುಗಳನ್ನು ಹೊಂದಿದೆ ಎಂದರು.
ಮಹಿಳಾ ಕಾರ್ಮಿಕರ ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಮಹಿಳಾ ಕಾರ್ಮಿಕರಿಗೆ ವಾರ್ಷಿಕ 12 ದಿನಗಳ ವೇತನ ಸಹಿತ ಋತುಚಕ್ರ ರಜೆಯನ್ನು ನೀಡುತ್ತಿರುವುದಾಗಿ ಹೇಳಿದರು.
ದೇಶದಲ್ಲಿ ಗ್ರಾಹಕ ಬೆಲೆ ಸೂಚ್ಯಂಕಗಳು ಆರೋಗ್ಯಕರವಾಗಿರುವ ಹಲವು ರಾಜ್ಯಗಳಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ವಿಕೇಂದ್ರೀಕರಣ ಸೂಚ್ಯಂಕದಲ್ಲಿ ಕರ್ನಾಟಕವು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.
ವಿದೇಶಿ ಹೂಡಿಕೆಗಳನ್ನು ಆಕರ್ಷಿಸುವುದರಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. 2025ರ ಇಂಡಿಯಾ ಜಸ್ಟೀಸ್ ವರದಿ ಪ್ರಕಾರ ನ್ಯಾಯ ನೀಡಿಕೆಯಲ್ಲಿ ರಾಜ್ಯವು ಮೊದಲ ಸ್ಥಾನದಲ್ಲಿದೆ ಎಂದು ಹೇಳಿದ ಅವರು, ಜ್ಞಾನ-ವಿಜ್ಞಾನ ವಲಯಗಳು, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಕೈಗಾರಿಕಪರವಾದ ವಾತಾವರಣದಿಂದ ರಾಜ್ಯವು ಐಟಿ-ಬಿಟಿ ಕ್ಷೇತ್ರಗಳಲ್ಲಿ ಇಡೀ ದೇಶದಲ್ಲಿಯೇ ಮುಂಚೂಣಿ ಸ್ಥಾನದಲ್ಲಿದೆ. ಅಲ್ಲದೆ, ಭಾರತದ ನವೋದ್ಯಮ ರಾಜಧಾನಿಯಾಗಿ ರೂಪುಗೊಳ್ಳುತ್ತಿದ್ದು, ಇದನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಕರ್ನಾಟಕ ನವೋದ್ಯಮ ನೀತಿಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.
ಸಾವಿರಾರು ವರ್ಷಗಳಿಂದ ರೂಪುಗೊಂಡಿದ್ದ ಪ್ರಜಾಪ್ರಭುತ್ವ ಹಾಗೂ 17ನೇ ಶತಮಾನದಿಂದ ಅಸ್ತಿತ್ವಕ್ಕೆ ಬಂದಿದ್ದ ವಸಾಹತುಶಾಹಿ ಆಡಳಿತವನ್ನು ಕೊನೆಗೊಳಿಸಿ ಪ್ರಭುತ್ವವನ್ನು ಪ್ರತಿಷ್ಠಾಪಿಸಿಕೊಂಡ ದಿನವಿದು. ತಾರತಮ್ಯವನ್ನು ಆಧಿರಿಸಿದ ವಸಾಹತುಶಾಹಿ ಹಾಗೂ ಪುರಾತನ ಕಾನೂನುಗಳನ್ನು ಕಿತ್ತೆಸೆದು ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯದ ವಿಚಾರದಲ್ಲಿ ಎಲ್ಲರೂ ಸಮಾನರು ಎನ್ನುವ ನವಭಾರತದ ಪರಿಕಲ್ಪನೆಯನ್ನು ಸಂವಿಧಾನವನ್ನು ಜಾರಿಗೊಳಿಸಿದ ದಿನ ಎಂದು ಬಣ್ಣಿಸಿದರು.
ನಮ ಸ್ವಾತಂತ್ರ್ಯ ಹೋರಾಟಗಾರರು ಶತಮಾನಗಳ ಕಾಲ ಹೋರಾಟ ಮಾಡಿ ನ್ಯಾಯ ಹಾಗೂ ಸ್ವಾತಂತ್ರ್ಯವನ್ನು ಧಕ್ಕಿಸಿಕೊಟ್ಟಿದ್ದಾರೆ. ನಾವೆಲ್ಲರೂ ನಮ ಹಿರಿಯರ ಶ್ರಮ ವ್ಯರ್ಥವಾಗದಂತೆ ಕಾಪಾಡಿಕೊಳ್ಳುವ ಪ್ರತಿಜ್ಞೆ ಮಾಡೋಣ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸ್ವಾತಂತ್ರ್ಯವನ್ನು ರಾಜೀಯ, ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಎಂದು ಮೂರು ಮಾದರಿಗಳಲ್ಲಿ ವ್ಯಾಖ್ಯಾನಿಸಿದ್ದಾರೆ. ರಾಜ್ಯ ಸರ್ಕಾರವು ಸಂವಿಧಾನವು ಪ್ರಸ್ತಾಪಿಸಿರುವ ಈ ಮೂರು ವಿಷಯಗಳನ್ನು ಆದ್ಯತಾ ವಿಷಯಗಳಾಗಿ ಪರಿಗಣಿಸಿದೆ ಎಂದು ಹೇಳಿದರು.
ಸರ್ಕಾರದ ವಿವಿಧ ನೇಮಕಾತಿಗಳಲ್ಲಿ ಅಲಕ್ಷಿತರಿಗೆ ಪ್ರಾಧಾನ್ಯತೆ ನೀಡಲಾಗುತ್ತಿದೆ. ವಿವಿಧ ಜನಸಮುದಾಯಗಳ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಆಯೋಗವನ್ನು ರಚಿಸಿ ಅವುಗಳ ಶಿಫಾರಸ್ಸುಗಳನ್ನು ಜಾರಿ ಮಾಡಲಾಗುತ್ತಿದೆ. ಆ ಮೂಲಕ ಕರ್ನಾಟಕದಲ್ಲಿ ಸಾಮಾಜಿಕ ಮತ್ತು ರಾಜಕೀಯ ಚೈತನ್ಯ ಉದಯಿಸುತ್ತದೆ ಎಂದು ಬಣ್ಣಿಸಿದರು.
ವಾರ್ಷಿಕ 1.12 ಲಕ್ಷ ಕೋಟಿ ರೂ. ಖರ್ಚು :
ಅತ್ಯಂತ ಹಿಂದುಳಿದವರ ಬಲವರ್ಧನೆಗಾಗಿ, ಆರ್ಥಿಕ ಚೈತನ್ಯ ನೀಡಲು ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಜನಕಲ್ಯಾಣಗಳಿಗಾಗಿ ರಾಜ್ಯವು ವರ್ಷಕ್ಕೆ 1.12 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ಇದುವರೆಗೆ 1.3 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನ ವಿನಿಯೋಗಿಸಲಾಗಿದೆ. ಇದರ ಪರಿಣಾಮ ಜನರ ಕೊಳ್ಳುವ ಶಕ್ತಿ ಹೆಚ್ಚಿದ್ದು, ಕುಟುಂಬಗಳು ಆರ್ಥಿಕವಾಗಿ ಸಬಲವಾಗುತ್ತಿದೆ ಎಂದು ಹಲವು ಅಧ್ಯಯನಗಳು ಹೇಳಿವೆ.
ಕುಟುಂಬ ಸರ್ವೆ ದತ್ತಾಂಶದ ಪ್ರಕಾರ 2024-25 ನೇ ಸಾಲಿನಲ್ಲಿ ರಾಜ್ಯದಲ್ಲಿ 1.37 ಕುಟುಂಬಗಳು ಸರ್ಕಾರದ ಒಂದಲ್ಲಾ ಒಂದು ಯೋಜನೆಯಿಂದ ನೇರ ಆರ್ಥಿಕ ಸೌಲಭ್ಯ ಪಡೆದಿವೆ. ಸರ್ಕಾರವು ಯೂನಿವರ್ಸಲ್ ಬೇಸಿಕ್ ಎಂಬ ತತ್ವಾಧಾರದ ಮೇಲೆ ತಂದಿರುವ ಗ್ಯಾರಂಟಿ ಯೋಜನೆಗಳು ಮಹಿಳೆಯರ ಬದುಕಿನಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿವೆ ಎಂಬುದು ಸಮೀಕ್ಷೆಗಳಿಂದ ತಿಳಿದುಬಂದಿದೆ. ಮಕ್ಕಳ ಶಿಕ್ಷಣ, ಆರೋಗ್ಯ, ಉತ್ತಮ ಆಹಾರ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಗ್ಯಾರಂಟಿ ಕಾರ್ಯಕ್ರಮಗಳು ಕಾರಣವಾಗಿವೆ. ಜೊತೆಗೆ ಅಕ್ಕ ಕಾರ್ಯಪಡೆಯ ಮೂಲಕ 25ಕ್ಕೂ ಹೆಚ್ಚು ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದರು.
ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 83200 ಕೋಟಿ ರೂ. ಬಂಡವಾಳ ವೆಚ್ಚಗಳಿಗೆ ಒದಗಿಸಿದ್ದು, 1.50 ಲಕ್ಷ ಕೋಟಿ ರೂ. ಯೋಜನೆಯನ್ನು ಕೈಗೆತ್ತಿಕೊಳ್ಳಲಿದ್ದು ಅಭಿವೃದ್ಧಿ ವೇಗಗೊಳ್ಳುತ್ತದೆ. ಕಾನೂನು ಸುವ್ಯವಸ್ಥೆ ಸಮರ್ಪಕವಾಗಿದ್ದು, ಕಂದಾಯ ನ್ಯಾಯಾಲಯಗಳಲ್ಲಿ ನೆನೆಗುದಿಗೆ ಬಿದ್ದಿದ್ದ ಶೇ.80ಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
ಕಂದಾಯ ಗ್ರಾಮಗಳನ್ನು ಘೋಷಣೆ ಮಾಡಿದ್ದು, 1 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಸಿದ್ಧವಾಗಿದೆ. ಬಿ ಖಾತಾಗಳನ್ನು ಎ ಖಾತಾಗಳಾನ್ನಾಗಿ ಪರಿವರ್ತಿಸಲು ಅನುಮೋದನೆ ನೀಡಲಾಗಿದೆ. ಇದರಿಂದ ನಗರ ಸಂಸ್ಥೆಗಳ 20 ಲಕ್ಷಕ್ಕೂ ಹೆಚ್ಚಿನ ಜನರಿಗೆ ಅನುಕೂಲವಾಗಿದ್ದು, ಇ ಸ್ವತ್ತ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಕಟ್ಟಡಗಳ ಸೆಟ್‌ಬ್ಯಾಕ್ ಅನ್ನು ಕಡಿಮೆ ಮಾಡಲಾಗಿದೆ ಎಂದು ಹೇಳಿದರು.
