ಬೆಂಗಳೂರು,ಜ.21- ಬಸ್ ನಿಲ್ದಾಣ ತೋರಿಸುವುದಾಗಿ ತಮಿಳುನಾಡು ಮೂಲದ ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿ ಚಿನ್ನಾಭರಣಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಕೇಂದ್ರ ವಿಭಾಗದ ಮಹಿಳಾ ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.
ಕೆ.ಆರ್ ಮಾರ್ಕೆಟ್ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಗಣೇಶ್(27), ಶರವಣ(35) ಬಂಧಿತ ಆರೋಪಿಗಳು. ಈ ಇಬ್ಬರು ಆರೋಪಿಗಳಿಗೆ ಮನೆ ಇಲ್ಲ. ಕೂಲಿ ಕೆಲಸ ಮಾಡಿ ಕೊಂಡು ಹೋಟೆಲ್ಗಳಲ್ಲಿ ತಿಂಡಿ, ಊಟ ಮಾಡಿ, ಸಿಟಿ ಮಾರ್ಕೆಟ್ ಪುಟ್ಪಾತ್ನಲ್ಲಿ ಮಲಗಿ ದಿನದೂಡುತ್ತಾರೆ. ತಮಿಳುನಾಡಿನಲ್ಲಿ ಪಾತ್ರೆ ವ್ಯಾಪಾರ ಮಾಡುವ ಸುಮಾರು 37 ವರ್ಷದ ಮಹಿಳೆಯೊಬ್ಬರು ಮೊನ್ನೆ ಮಧ್ಯರಾತ್ರಿ 11.30ರ ವೇಳೆಗೆ ತಮಿಳುನಾಡಿನಿಂದ ನಗರಕ್ಕೆ ಬಂದಿದ್ದು, ಯಲಹಂಕದಲ್ಲಿರುವ ಅಣ್ಣನ ಮನೆಗೆ ಹೋಗಲು ಕೆ.ಆರ್ ಮಾರ್ಕೆಟ್ ಬಳಿ ಬಸ್ಗಾಗಿ ಕಾಯುತ್ತಿದ್ದರು.
ಯಲಹಂಕ ಕಡೆಗೆ ಬಸ್ ಬರದ ಕಾರಣ ಮಾರ್ಕೆಟ್ನಲ್ಲಿದ್ದ ಈ ಇಬ್ಬರನ್ನುಮಹಿಳೆ ವಿಚಾರಿಸಿದ್ದಾರೆ. ಆ ವೇಳೆ ಬಸ್ ಬರುವ ಜಾಗ ತೋರಿಸತ್ತೇವೆಂದು ಈ ಕಾಮುಕರು ಎಸ್ಜೆ ಪಾಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ಗೋಡೌನ್ ಸ್ಟ್ರೀಟ್ಗೆ ಕರೆದೊಯ್ದು ಅತ್ಯಾಚಾರ ವೆಸಗಿದ್ದಾರೆ. ಅಲ್ಲದೇ ಮಹಿಳೆಯ ಮೈ ಮೇಲಿದ್ದ ಆಭರಣಗಳನ್ನ ಕಿತ್ತಿಕೊಂಡು ಆರೋಪಿಗಳು ಪರಾರಿಯಾಗಿದ್ದರು.
ಈ ಬಗ್ಗೆ ಸಂತ್ರಸ್ತ ಮಹಿಳೆ ಕೇಂದ್ರ ವಿಭಾಗದ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾಮುಕರ ಪತ್ತೆಗೆ ಎರಡು ವಿಶೇಷ ತಂಡಗಳನ್ನ ರಚಿಸಿ ಕಾರ್ಯಾಚರಣೆ ಕೈಗೊಂಡರು. ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಎಸ್ಜೆ ಪಾರ್ಕ್ ಠಾಣೆ ಇನ್‌್ಸಪೆಕ್ಟರ್ ಗುರುಪ್ರಸಾದ್ ಅವರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.