ರಾಯಚೂರು,ಜ.22- ಕ್ರೂಸರ್ ವಾಹನ ಪಲ್ಟಿಯಾಗಿ ಮೂವರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ಸಿಂಧನೂರಿನ ಅರಗಿನಮರ ಬಳಿ ಸಂಭವಿಸಿದೆ.
ಮೃತ ವಿದ್ಯಾರ್ಥಿಗಳನ್ನು ಆರ್ಯವಂದನ್ (18), ಸುಚೀಂದ್ರ (22) ಮತ್ತು ಅಭಿಲಾಷ್ (20) ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ ಚಾಲಕ ಶಿವ (24) ಕೂಡ ಸಾವನ್ನಪ್ಪಿದ್ದಾರೆ. ಗಾಯಗೊಂಡ 10 ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂತ್ರಾಲಯ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವಾಹನವು ನರಹರಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಹಂಪಿಗೆ ತೀರ್ಥಯಾತ್ರೆಗೆ ಹೋಗುತ್ತಿತ್ತು. ಸಿಂಧನೂರಿನ ಅರಗಿನಮರ ಶಿಬಿರದ ಬಳಿ ಮುಂಜಾನೆ ಅಪಘಾತ ಸಂಭವಿಸಿದೆ.
ಸಿಂಧನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ದಟ್ಟ ಮಂಜಿನ ನಡುವೆ ವೇಗವಾಗಿ ಚಲಿಸುತ್ತಿದ್ದ ವಾಹನದ ಆಕ್ಸಿಲ್ ಕಟ್‌ಆಗಿ ನಿಯಂತ್ರಣ ತಪ್ಪಿ ಅಪಘಾತ ನಡೆದಿದೆ ಎಂದು ಶಂಕಿಸಲಾಗಿದೆ ,ಸಿಂಧನೂರು ಸಂಚಾರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಘಟನೆ ಹಿನ್ನೆಲೆಯಲ್ಲಿ ಮಂತ್ರಾಲಯ ಶ್ರೀಗಳು ಸ್ಥಳಕ್ಕೆ ಆಗಮಿಸಿ ಮಾಹಿತಿಯನ್ನ ಪಡೆದುಕೊಂಡಿದ್ದಾರೆ.