ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಬಳಿ ತರಕಾರಿ ತುಂಬಿದ್ದ ಲಾರಿ ಪಲ್ಟಿಯಾದ ಪರಿಣಾಮ 10 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಮುಂಜಾನೆ 4.30 ರ ಸುಮಾರಿನಲ್ಲಿ ಸಂಭವಿಸಿದೆ.ಮೃತರೆಲ್ಲರೂ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದವರೆಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸೌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಮೃತಪಟ್ಟವರನ್ನು ಫಯಾಜ್ ಜಮಖಂಡಿ (45), ವಾಸಿಂ ಮುಡಗೇರಿ (35), ಹಿಜಾಜ್‌ಮುಲ್ಲಾ (20), ಸಾಧಿಕ್ ಭಾಷ (30), ಗುಲಾಂ ಹುಸೇನ್ ಜವಳಿ (40), ಇಮ್ತಿಯಾಜ್ (36), ಅಲ್ಫಾಜ್ ಜಾಫರ್ (25), ಜಿಲಾನಿ ಅಬ್ದುಲ್ (28), ಅಸ್ಲಂ (24) ಹಾಗೂ ಮತ್ತೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇವರ ಹೆಸರು ಸದ್ಯಕ್ಕೆ ತಿಳಿದುಬಂದಿಲ್ಲ.
ಸವಣೂರಿನಿಂದ ಸುಮಾರು 28 ಮಂದಿ ತರಕಾರಿ ಹಾಗೂ ಹಣ್ಣುಗಳನ್ನು ಲಾರಿಯಲ್ಲಿ ತುಂಬಿಕೊಂಡು ಕುಮಟಾದಲ್ಲಿ ಇಂದು ಸಂತೆಯಿದ್ದ ಕಾರಣ ಹೋಗುತ್ತಿದ್ದರು. ಈ ಲಾರಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಗುಳ್ಳಾಪುರಘಟ್ಟ ಭಾಗದಲ್ಲಿ ಮುಂಜಾನೆ 4.30 ರ ಸುಮಾರಿನಲ್ಲಿ ತೆರಳುತ್ತಿದ್ದಾಗ ಇಳಿಜಾರು ಪ್ರದೇಶವಾದ್ದರಿಂದ ಚಾಲಕನ ಗಮನಕ್ಕೆ ಬಾರದೆ ಎಡಕ್ಕೆ ಹೋಗಿ ಸುಮಾರು 50 ಮೀಟರ್ ಆಳದ ಕಣಿವೆಗೆ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಪರಿಣಾಮ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ ಗಂಭೀರ ಗಾಯಗೊಂಡಿದ್ದ ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಗಾಯಗೊಂಡಿರುವ 15ಕ್ಕೂ ಹೆಚ್ಚು ಮಂದಿಯ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.ಲಾರಿ ಮಗುಚಿಬಿದ್ದ ಪರಿಣಾಮ ಲಾರಿ ಬಾಗಿಲು ತೆಗೆಯಲಾಗದೆ ಮುಂಭಾಗದಲ್ಲಿ ಕುಳಿತಿದ್ದವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಯಲ್ಲಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿ ಕ್ರೇನ್ ಸಹಾಯದಿಂದ ಲಾರಿಯನ್ನು ಮೇಲಕ್ಕೆತ್ತಿ ಮೃತದೇಹಗಳನ್ನು ಹೊರತೆಗೆದು ಸ್ಥಳೀಯರ ನೆರವಿನೊಂದಿಗೆ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ಅವರು ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಅಪಘಾತದದಲ್ಲಿ ಸವಣೂರು ಪಟ್ಟಣದ 10 ಮಂದಿ ಮೃತಪಟ್ಟಿರುವ ಸುದ್ದಿ ತಿಳಿದು ಪಟ್ಟಣವೇ ಶೋಕಸಾಗರದಲ್ಲಿ ಮುಳುಗಿದ್ದು, ನೀರವ ಮೌನ ಆವರಿಸಿದೆ. ಈ ಅಪಘಾತದಲ್ಲಿ ಬಹುತೇಕ ಯುವಕರೇ ಮೃತಪಟ್ಟಿರುವುದು ವಿಷಾದಕರ.
2 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಅಸ್ಲಾಂ :
ಅಪಘಾತದಲ್ಲಿ ಮೃತಪಟ್ಟಿರುವ ಅಸ್ಲಾಂ ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ತಡರಾತ್ರಿ ತರಕಾರಿ ಸಾಗಿಸಲು ತಾನು ಬರುತ್ತೇನೆಂದು ಅಸ್ಲಾಂ ಹಠ ಹಿಡಿದು ಲಾರಿ ಹತ್ತಿದ್ದರು ಎಂದು ಕಟುಂಬಸ್ಥರು ಕಣ್ಣೀರು ಹಾಕಿದ್ದಾರೆ.