ಬೆಂಗಳೂರು,ಜ.22- ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ ಈಜುಕೊಳ ಬಿಟ್ಟು ಹೊರಬಂದು ರಾಜ್ಯದ ಜನರಿಗೆ ಆರೋಗ್ಯದ ಗ್ಯಾರಂಟಿ ಕೊಡಿ ಎಂದು ಜೆಡಿಎಸ್ ಆಗ್ರಹಿಸಿದೆ.
ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಕಳಪೆ ಗುಣಮಟ್ಟದ ಔಷಧಿಗಳಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು ಮತ್ತು ನವಜಾತ ಶಿಶುಗಳ ಸರಣಿ ಸಾವು ಆಗುತ್ತಿದ್ದರೂ, ಭ್ರಷ್ಟ ಕಾಂಗ್ರೆಸ್ ಸರ್ಕಾರ ಬುದ್ಧಿ ಕಲಿತಿಲ್ಲ ಎಂದು ಆರೋಪಿಸಿದೆ.
ರಾಜ್ಯದಲ್ಲಿ 40ಕ್ಕೂ ಅಧಿಕ ನಕಲಿ ಔಷಧಗಳು ಪತ್ತೆಯಾಗಿದ್ದು, ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ನಕಲಿ ಔಷಧಗಳು ಪೂರೈಕೆ ಜಾಲ ವ್ಯಾಪಕವಾಗಿವೆ ಎನ್ನುವ ವರದಿ ಆತಂಕ ಹುಟ್ಟಿಸುತ್ತಿದೆ ಎಂದು ಹೇಳಿದೆ.
ನಕಲಿ ಔಷಧಿಗಳಿಗೆ ಕಡಿವಾಣ ಹಾಕಬೇಕಾದ ಕಾಂಗ್ರೆಸ್ ಸರ್ಕಾರ ಮತ್ತು ಅಧಿಕಾರಿಗಳು ಕಮಿಷನ್ ಹಣಕ್ಕಾಗಿ ಕಂಪನಿಗಳ ಜತೆ ಶಾಮೀಲಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದು ಆರೋಪಿಸಿರುವ ಜೆಡಿಎಸ್, ಶೇ.60ರಷ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಬಡವರ ಪ್ರಾಣದ ಬಗ್ಗೆ ಚಿಂತೆಯಿಲ್ಲ ಎಂದು ಟೀಕಿಸಿದೆ.