ಬೆಂಗಳೂರು,ಜ.22- ಹೈಕಮಾಂಡ್ ಖಡಕ್ ಎಚ್ಚರಿಕೆ ಬಳಿಕ ಕಾಂಗ್ರೆಸ್ನಲ್ಲಿನ ಭಿನ್ನಮತದ ಹೇಳಿಕೆಗಳು ತಣ್ಣಗಾಗಿದ್ದು, ಈಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಅಧಿಕಾರದ ತ್ಯಾಗದ ಮಾತುಗಳನ್ನಾಡಿರುವುದು ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದ್ದು, ಮತ್ತೆ ಆಂತರಿಕ ಚರ್ಚೆಗೆ ಅವಕಾಶ ಒದಗಿಸಿಕೊಟ್ಟಿದೆ.
ಮೊನ್ನೆಯಷ್ಟೇ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿಕಾರ ತ್ಯಾಗ ಮನೋಭಾವದ ಕುರಿತು ಹೇಳಿಕೆ ನೀಡಿದ್ದರು. ಧರ್ಮಸಿಂಗ್ ಕಾಲದಿಂದಲೂ ನಾನು ತ್ಯಾಗ ಮಾಡಿಕೊಂಡೇ ಬರುತ್ತಿದ್ದೇನೆ. ನನಗೆ ಇದೇನು ಹೊಸದಲ್ಲ. ಜನರಿಗೆ ಒಳ್ಳೆಯದಾದರೆ ಸಾಕು ಎಂದು ಅವರು ತ್ಯಾಗದ ಮಾತುಗಳನ್ನಾಡಿದ್ದರು.
ಖರ್ಗೆಯವರ ಹೇಳಿಕೆ ಯಾರ ತ್ಯಾಗಕ್ಕೆ ಸಂಬಂಧಪಟ್ಟಿದ್ದು ಎಂಬ ಪ್ರಶ್ನೆ ಈಗ ಗಂಭೀರ ಚರ್ಚೆಗೆ ಕಾರಣವಾಗಿದೆ.ಕೆಲದಿನಗಳ ಹಿಂದಷ್ಟೇ ಕಾಂಗ್ರೆಸ್ನಲ್ಲಿ ಕಾವೇರಿದ ಚರ್ಚೆಗಳಾಗಿದ್ದವು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆಯ ಬಗ್ಗೆ ದೆಹಲಿಯಲ್ಲಿ ಒಪ್ಪಂದಗಳಾಗಿವೆ. ಅದರಂತೆ ಎರಡೂವರೆ ವರ್ಷದ ಬಳಿಕ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಬೇಕು.
ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ತಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬೆಲ್ಲಾ ಚರ್ಚೆಗಳಾಗಿದ್ದವು. ಈ ಕುರಿತಂತೆ ಕಾಂಗ್ರೆಸ್ನಲ್ಲಿ ಸಾಕಷ್ಟು ವ್ಯಾಖ್ಯಾನಗಳು ನಡೆದಿದ್ದವು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ನಡುವೆ ಬಣ ರಾಜಕೀಯ ವ್ಯಾಪಕವಾಗಿತ್ತು.
ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗರು ಸಿದ್ದರಾಮಯ್ಯನವರ ಅಧಿಕಾರ ತ್ಯಾಗದ ಬಗ್ಗೆ ಹೇಳಿಕೆ ನೀಡಿದರೆ ಸಿದ್ದರಾಮಯ್ಯನವರ ಬೆಂಬಲಿಗರು ಒಬ್ಬರಿಗೆ ಒಂದೇ ಹುದ್ದೆ ಎಂಬ ವಾದವನ್ನಿಟ್ಟುಕೊಂಡು ಡಿ.ಕೆ.ಶಿವಕುಮಾರ್ ಅಧ್ಯಕ್ಷ ಸ್ಥಾನ ಅಥವಾ ಉಪಮುಖ್ಯಮಂತ್ರಿ ಈ ಎರಡರಲ್ಲಿ ಒಂದನ್ನು ಮಾತ್ರ ಉಳಿಸಿಕೊಳ್ಳಬೇಕೆಂದು ಪ್ರತಿಪಾದಿಸಿದ್ದರು.
ಇದು ಕಾವೇರಿದ ಮಟ್ಟಕ್ಕೆ ಹೋದಾಗ ಮಲ್ಲಿಕಾರ್ಜುನ ಖರ್ಗೆಯವರೇ ಮಧ್ಯಪ್ರವೇಶ ಮಾಡಿ ಎಲ್ಲರೂ ಬಾಯಿ ಮುಚ್ಚಿಕೊಂಡು ತಮ ಕೆಲಸ ತಾವು ಮಾಡಬೇಕು. ಅಧಿಕಾರದ ಬಗ್ಗೆ ಹೈಕಮಾಂಡ್ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳುವ ಮೂಲಕ ನಾನಾ ರೀತಿಯ ಚರ್ಚೆಗಳಿಗೆ ಕಡಿವಾಣ ಹಾಕಿದ್ದರು.
ಈ ಬಳಿಕ ಗೃಹಸಚಿವ ಪರಮೇಶ್ವರ್ ಮಾತನಾಡಿ, ಹೈಕಮಾಂಡ್ನ ಆದೇಶವಾಗಿದೆ. ತಾವು ಯಾವುದೇ ವಿಚಾರವನ್ನೂ ಅದರಲ್ಲೂ ಕಾಂಗ್ರೆಸ್ ವಿಚಾರವನ್ನು ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ ಎಂದು ತಟಸ್ಥ ನಿಲುವಿಗೆ ಶರಣಾಗಿದ್ದು, ಪರಿಸ್ಥಿತಿ ಹೇಗೆ ಮುಂದುವರೆಯಬಹುದು ಎನ್ನುವ ಹಂತದಲ್ಲಿ ಈಗ ಅಧಿಕಾರದ ತ್ಯಾಗದ ಮಾತನ್ನಾಡಿ ಮಲ್ಲಿಕಾರ್ಜುನ ಖರ್ಗೆಯವರೇ ಮತ್ತೆ ನಾನಾ ವ್ಯಾಖ್ಯಾನಗಳನ್ನು ಹುಟ್ಟುಹಾಕಿದ್ದಾರೆ.
ಡಿ.ಕೆ.ಶಿವಕುಮಾರ್ ತಮ ಅಧಿಕಾರ ತ್ಯಾಗದ ಬಗ್ಗೆ ಈಗಾಗಲೇ ಸ್ಪಷ್ಟ ಹೇಳಿಕೆ ನೀಡಿಯಾಗಿದೆ. ಎಐಸಿಸಿ ಅಧ್ಯಕ್ಷರಾಗಿದ್ದ ಸೋನಿಯಾಗಾಂಧಿಯವರು ಪ್ರಧಾನಮಂತ್ರಿ ಹುದ್ದೆ ತ್ಯಾಗ ಮಾಡಿದ್ದನ್ನು ಖರ್ಗೆಯವರು ಸರಿಸಿದ್ದಾರೆ.
ಇದರ ವ್ಯಾಖ್ಯಾನ ಡಿ.ಕೆ.ಶಿವಕುಮಾರ್ ಕೂಡ ಮುಖ್ಯಮಂತ್ರಿ ಹುದ್ದೆಯ ಆಸೆಯನ್ನು ತ್ಯಾಗ ಮಾಡಬೇಕೆ ಎಂಬ ಚರ್ಚೆ ಹುಟ್ಟುಹಾಕಿದೆ. ಮತ್ತೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರ ತ್ಯಾಗದ ಬೋಧನೆ ಮಾಡಿದ್ದಾರೆಯೇ ಎಂಬ ಬಗ್ಗೆಯೂ ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯನವರು ಎಲ್ಲಿಯೂ ತ್ಯಾಗದ ಮಾತನ್ನಾಡಿಲ್ಲ. ಬದಲಾಗಿ 5 ವರ್ಷ ತಾವೇ ಮುಖ್ಯಮಂತ್ರಿಯಾಗಿರುವುದಾಗಿ ಖಚಿತ ವಿಶ್ವಾಸದೊಂದಿಗಿದ್ದಾರೆ. ಖರ್ಗೆಯ ಹೇಳಿಕೆ ನಾನಾ ರೀತಿಯ ಅರ್ಥಗಳನ್ನು ಕಲ್ಪಿಸಿದೆ.
ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ತ್ಯಾಗದ ಪೀಠದಲ್ಲಿರುವುದರಿಂದ ಅವರನ್ನು ಮತ್ತೊಮೆ ತ್ಯಾಗ ಮಾಡಿ ಎಂದು ಹೇಳಲು ಸಾಧ್ಯವಿಲ್ಲ. ಬದಲಾಗಿ ಸಿದ್ದರಾಮಯ್ಯ ಅವರಿಗೆ ಈ ಕುರಿತು ಹೇಳಿದ್ದೇ ಆಗಿದ್ದರೆ ಅದು ರಾಜ್ಯ ರಾಜಕಾರಣದಲ್ಲಿ ವಿಪ್ಲವಕ್ಕೆ ಕಾರಣವಾಗುವ ಸಾಧ್ಯತೆಯಿದೆ.
ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರು ಅಧಿಕಾರ ತೊರೆಯುವ ಮಾತಿನಲ್ಲಿ ಯಾವುದೇ ರೀತಿಯ ರಾಜಿಗೂ ಸಿದ್ಧರಿಲ್ಲ ಎಂಬ ಪರಿಸ್ಥಿತಿ ಇದೆ. ಹೀಗಾಗಿ ಖರ್ಗೆ ಹೇಳಿಕೆ ಸಾರ್ವತ್ರಿಕವೇ ಅಥವಾ ವ್ಯಕ್ತಿ ಆಧಾರಿತವೇ ಎಂಬ ಪ್ರಶ್ನೆ ಉದ್ಭವಿಸಿದೆ. ಎಲ್ಲವೂ ತಣ್ಣಗಾಗಿರುವ ಹೊತ್ತಿನಲ್ಲಿ ಅಧಿಕಾರ ತ್ಯಾಗದ ಮಂತ್ರ ಮತ್ತಷ್ಟು ಗೊಂದಲಗಳನ್ನು ಹುಟ್ಟುಹಾಕುವ ಸಾಧ್ಯತೆಯಿದೆ.