Thursday, January 23, 2025
Homeರಾಜಕೀಯ | Politicsಡಿಕೆಶಿ - ವಿಶ್ವನಾಥ್ ಮಾತುಕತೆ

ಡಿಕೆಶಿ – ವಿಶ್ವನಾಥ್ ಮಾತುಕತೆ

H. Vishwanath Meet D.K. Shivakumar

ಬೆಂಗಳೂರು,ಜ.22- ಬಿಜೆಪಿಯ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಸದಾಶಿವನಗರದ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ಇಂದು ಬೆಳಿಗ್ಗೆ ಆಗಮಿಸಿದ ಅವರು ಸುಮಾರು ಅರ್ಧಗಂಟೆಗಳ ಕಾಲ ರಹಸ್ಯ ಚರ್ಚೆ ನಡೆಸಿದರು.ಈ ಮೊದಲು ಕಾಂಗ್ರೆಸ್ ಪಕ್ಷದಲ್ಲೇ ಸಚಿವರಾಗಿ ಹಲವಾರು ಹುದ್ದೆಗಳನ್ನು ನಿಭಾಯಿಸಿದ್ದ ಎಚ್.ವಿಶ್ವನಾಥ್ ಕಾರಣಾಂತರಗಳಿಂದ ಜೆಡಿಎಸ್ ಸೇರಿದ್ದರು. ಅಲ್ಲಿ ಶಾಸಕರು ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾಗಲೇ ಆಪರೇಷನ್ ಕಮಲದ ವೇಳೆ ಬಿಜೆಪಿ ಸೇರಿದ್ದರು.

ವಿಶ್ವನಾಥ್ ಅವರ ವಿಧಾನಸಭಾ ಉಪಚುನಾವಣೆಯಲ್ಲಿ ಸೋಲು ಕಂಡ ಕಾರಣಕ್ಕೆ ಬಿಜೆಪಿ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ನೇಮಿಸಿತ್ತು.ವಿಧಾನಸಭಾ ಚುನಾವಣೆಗೂ ಮೊದಲು ವಿಶ್ವನಾಥ್ ಅವರು ಕಾಂಗ್ರೆಸ್ ಪರವಾದ ಹೇಳಿಕೆಗಳನ್ನು ನೀಡಿ ಗಮನ ಸೆಳೆದಿದ್ದರು. ಒಂದರ್ಥದಲ್ಲಿ ಬಿಜೆಪಿಗೆ ವ್ಯತಿರಿಕ್ತವಾಗಿ ಮಾತನಾಡುತ್ತಿದ್ದ ಅವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಚರ್ಚೆಗಳೂ ನಡೆದಿದ್ದವು.

ವಿಧಾನಸಭಾ ಚುನಾವಣೆ ಬಳಿಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಿದ್ದಂತೆ ಕಾಂಗ್ರೆಸ್ ಪರವಾದ ಹೇಳಿಕೆಗಳನ್ನು ವಿಶ್ವನಾಥ್ ಸ್ಥಗಿತಗೊಳಿಸಿದ್ದರು. ಮುಡಾದಲ್ಲಿ ನಿವೇಶನ ಹಂಚಿಕೆಯಲ್ಲಿ ನಾಲ್ಕೈದು ವರ್ಷಗಳ ಹಿಂದೆ ನಡೆದಿರುವ ಹಗರಣದ ಕುರಿತು ಇತ್ತೀಚೆಗೆ ಪ್ರಸ್ತಾಪಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ದೊಡ್ಡ ಬಿರುಗಾಳಿಗೆ ವಿಶ್ವನಾಥ್ ಕಾರಣರಾಗಿದ್ದಾರೆ.

ಸಿದ್ದರಾಮಯ್ಯ ಹಾಗೂ ನಗರ ಅಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರನ್ನು ಟೀಕೆ ಮಾಡುತ್ತಲೇ ವಿಶ್ವನಾಥ್ ಕಾಂಗ್ರೆಸ್ನ ಇತರ ಸ್ನೇಹಿತರೊಂದಿಗೆ ಸೌಹಾರ್ದ ಸಂಬಂಧವನ್ನು ಕಾಯ್ದುಕೊಂಡಿದ್ದಾರೆ. ಇಂದು ಡಿ.ಕೆ.ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿದ ವೇಳೆ ಔಪಚಾರಿಕ ಚರ್ಚೆಯಾಗಿದೆ. ಯಾವುದೇ ರಾಜಕಾರಣದ ಮಾತುಗಳನ್ನಾಡಿಲ್ಲ ಎಂದು ಹೇಳಲಾಗುತ್ತಿದೆ.

RELATED ARTICLES

Latest News