Thursday, January 23, 2025
Homeರಾಜ್ಯಒಪಿಎಸ್ ಜಾರಿಗೆ ಸರ್ಕಾರಿ ನೌಕರರ ಪಟ್ಟು, ರಾಜ್ಯ ಸರ್ಕಾರಕ್ಕೆ ಇಕ್ಕಟ್ಟು

ಒಪಿಎಸ್ ಜಾರಿಗೆ ಸರ್ಕಾರಿ ನೌಕರರ ಪಟ್ಟು, ರಾಜ್ಯ ಸರ್ಕಾರಕ್ಕೆ ಇಕ್ಕಟ್ಟು

Government employees' demand for OPS implementation

ಬೆಂಗಳೂರು,ಜ.22– ರಾಜ್ಯ ಸರ್ಕಾರಕ್ಕೆ ಇದೀಗ ಹಳೆಯ ಪಿಂಚಣಿ ಯೋಜನೆ ತಲೆನೋವು ಶುರುವಾಗಿದೆ. ಸರ್ಕಾರಿ ನೌಕರರು ಒಪಿಎಸ್ ಜಾರಿಗೆ ಪಟ್ಟು ಹಿಡಿದಿದ್ದು, ಹೋರಾಟದ ಹಾದಿ ಹಿಡಿಯಲು ತೀರ್ಮಾನಿಸಿದ್ದಾರೆ. ಇದು ಸರ್ಕಾರಕ್ಕೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.

ಈಗಾಗಲೇ ಪಂಚ ಗ್ಯಾರಂಟಿ ಹೊರೆ, ಮಿತಿ ಮೀರಿದ ಬದ್ಧ ವೆಚ್ಚದ ಬರೆ, ಗುರಿ ಮುಟ್ಟದ ಆದಾಯ ಸಂಗ್ರಹದ ಆರ್ಥಿಕ ಮುಗ್ಗಟ್ಟಿನ ಮಧ್ಯೆ ರಾಜ್ಯ ಸರ್ಕಾರದ ಮುಂದೆ ಇದೀಗ ಒಪಿಎಸ್ ಸಂಕಷ್ಟ ಎದುರಾಗಿದೆ. ರಾಜ್ಯ ಸರ್ಕಾರಿ ನೌಕರರು ರಾಷ್ಟ್ರೀಯ ಪಿಂಚಣಿ ಯೋಜನೆ ರದ್ದುಗೊಳಿಸಿ, ರಾಜ್ಯದಲ್ಲಿ ಒಪಿಎಸ್ ಅನುಷ್ಠಾನ ಮಾಡುವಂತೆ ಬಿಗಿ ಪಟ್ಟು ಹಿಡಿದಿದ್ದಾರೆ. ಈ ಸಂಬಂಧ ಫೆಬ್ರವರಿಯಲ್ಲಿ ಒಪಿಎಸ್ ಹಕ್ಕೊತ್ತಾಯ ಧರಣಿ ನಡೆಸಲು ತೀರ್ಮಾನಿಸಲಾಗಿದೆ. ಬಜೆಟ್ ತಯಾರಿಯಲ್ಲಿರುವ ಸಿಎಂ ಸಿದ್ದರಾಮಯ್ಯಗೆ ಒಪಿಎಸ್ ಕಗ್ಗಂಟು ದೊಡ್ಡ ತಲೆನೋವಾಗಿ ಪರಿಣಮಿಸಲಿದೆ.

ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲೂ ರಾಜ್ಯದಲ್ಲಿ ಎನ್ಪಿಎಸ್ ರದ್ದುಗೊಳಿಸಿ, ಒಪಿಎಸ್ ಜಾರಿಯ ಭರವಸೆ ನೀಡಿತ್ತು. ಹೀಗಾಗಿ, ಇದೀಗ ಒಪಿಎಸ್ ವಿಚಾರ ಕಾಂಗ್ರೆಸ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಈಗಾಗಲೇ ಆರ್ಥಿಕ ಹೊರೆಯ ಮಧ್ಯೆ ಒಪಿಎಸ್ ಭಾರ ಅಕ್ಷರಶಃ ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಲಿದೆ. ಆದರೆ, ನುಡಿದಂತೆ ನಡೆಯುವ ಅಡಕತ್ತರಿಯಲ್ಲಿ ಕಾಂಗ್ರೆಸ್ ಸರ್ಕಾರ ಸಿಲುಕಿದೆ.

ಏನಿದು ಒಪಿಎಸ್ ಜಾರಿ ಪಟ್ಟು ಒಪಿಎಸ್ ಜಾರಿಗೆ ಪಟ್ಟು ಹಿಡಿದಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಫೆ.7ರಂದು ಒಪಿಎಸ್ ಹಕ್ಕೊತ್ತಾಯ ಧರಣಿ ನಡೆಸಲು ತೀರ್ಮಾನಿಸಲಾಗಿದೆ. ಜ.19ರಂದು ಬೆಂಗಳೂರಿನಲ್ಲಿ ನಡೆದ ವಿಶೇಷ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಈ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರಿ ನೌಕರರು ನಮಗೆ ಎನ್ಪಿಎಸ್ ಬೇಡವೇ ಬೇಡ, ಕೇಂದ್ರ ಸರ್ಕಾರದ ಹೊಸ ಏಕೀಕೃತ ಪಿಂಚಣಿ ಯೋಜನೆಯೂ ಬೇಡ ಎಂದು ಪಟ್ಟು ಹಿಡಿದಿದ್ದು, ನಮಗೆ ಒಪಿಎಅ್ ಬಿಟ್ಟು ಬೇರೇನು ಬೇಡ ಎಂದು ಬೀದಿಗಿಳಿಯಲು ಮುಂದಾಗಿದ್ದಾರೆ.

2022ರ ಅಕ್ಟೋಬರ್ 13ರಿಂದ ಒಂದು ತಿಂಗಳು ಒಪಿಎಸ್ ಸಂಕಲ್ಪ ಯಾತ್ರೆ ಹಾಗೂ 14 ದಿನಗಳ ಕಾಲ ಒಪಿಎಸ್ ಜಾರಿಗಾಗಿ ಫ್ರೀಡಂ ಪಾರ್ಕ್ಲ್ಲಿ ಅಹೋರಾತ್ರಿ ಧರಣಿ ನಡೆಸಲಾಗಿತ್ತು. ಹಾಗೂ ಜನವರಿ ತಿಂಗಳಿಂದ ಮೂರು ತಿಂಗಳ ಕಾಲ ವೋಟ್ ಫಾರ್ ಒಪಿಎಸ್ ಅಭಿಯಾನವನ್ನೂ ಕೈಗೊಳ್ಳಲಾಗಿತ್ತು.

ಸಿಎಂ ಅಧಿಕಾರ ವಹಿಸಿಕೊಂಡ ಬಳಿಕ 2023ರ ಜೂನ್ 13ರಂದು ನಮ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಅಲ್ಲದೆ, 2024ರ ಜ.6ರಂದು ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಸಿಎಂ, ಮುಂದಿನ ಸಂಪುಟ ಸಭೆಯಲ್ಲಿ ಎನ್ಪಿಎಸ್ ಯೋಜನೆಯ ರದ್ದತಿಯ ವಿಷಯದ ಬಗ್ಗೆ ಚರ್ಚಿಸಿ, ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದರು. ಆದರೆ ಇದುವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ಏನಿದು ಲೆಕ್ಕಾಚಾರ ಒಪಿಎಸ್, ಎನ್ಪಿಎಸ್, ಯುಪಿಎಸ್ ರಾಜ್ಯದಲ್ಲಿ ಏಪ್ರಿಲ್ 2006ರಿಂದ ಎನ್ಪಿಎಸ್ ಜಾರಿಗೊಳಿಸಲಾಗಿತ್ತು. ಇದರಿಂದ 2006ರ ಏಪ್ರಿಲ್ ನಂತರ ಸೇರಿದ ಸರ್ಕಾರಿ ನೌಕರರಿಗೆ ಎನ್ಪಿಎಸ್ಗೆ ಒಳಪಡುತ್ತಾರೆ. ಅದಕ್ಕೂ ಮುನ್ನ ಸೇರಿದ್ದ ಸರ್ಕಾರಿ ನೌಕರರು ಒಪಿಎಸ್ಗೆ ಒಳಪಟ್ಟಿದ್ದಾರೆ. ರಾಜ್ಯದಲ್ಲಿ ಹಳೆ ಪಿಂಚಣಿ ಯೋಜನೆಗೆ ಒಳಪಟ್ಟ ಸುಮಾರು 2,29,497 ಮಂದಿ ಸರ್ಕಾರಿ ನೌಕರರಿದ್ದಾರೆ. ಅದೇ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಒಳಪಟ್ಟ ಸುಮಾರು 2,82,536 ಸರ್ಕಾರಿ ನೌಕರರು ಇದ್ದಾರೆ ಎಂದು ಆರ್ಥಿಕ ಇಲಾಖೆ ಮಾಹಿತಿ ನೀಡಿದೆ.

ಒಪಿಎಸ್ನಡಿ ನಿವೃತ್ತ ನೌಕರರು ತಾವು ಪಡೆದ ಅಂತಿಮ ವೇತನದ 50%ರಷ್ಟನ್ನು ಮಾಸಿಕ ಪಿಂಚಣಿಯಾಗಿ ಪಡೆಯುತ್ತಾರೆ. ತುಟ್ಟಿ ಭತ್ಯೆ ಹೆಚ್ಚುತ್ತಿದ್ದ ಹಾಗೆಯೇ ಪಿಂಚಣಿ ಮೊತ್ತವೂ ಹೆಚ್ಚಾಗುತ್ತದೆ.ಹೊಸ ಪಿಂಚಣಿ ಯೋಜನೆ (ಎನ್ಪಿಎಸ್)ಯಲ್ಲಿ ಪಿಂಚಣಿ ಯೋಜನೆಗೆ ನೌಕರರು ವಂತಿಕೆ ನೀಡಬೇಕಾಗಿದೆ. ಉದ್ಯೋಗದಲ್ಲಿರುವಾಗಲೇ ತಮ ವೇತನದಲ್ಲಿನ ಒಂದರಷ್ಟು ಭಾಗವನ್ನು ಕೊಡುಗೆ ನೀಡಬೇಕು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹಾಗೂ ಉಳಿತಾಯ ಇದರಲ್ಲಿದೆ. ಎನ್ಪಿಎಸ್ನಡಿ ಸರ್ಕಾರಿ ನೌಕರರು ಪಿಂಚಣಿ ನಿಧಿಗೆ 10%ರಷ್ಟು ಕೊಡುಗೆ ನೀಡಬೇಕು. ಉದ್ಯೋಗಿಗಳ ಎನ್ಪಿಎಸ್ ಖಾತೆಗಳಿಗೆ ಸರ್ಕಾರವು 14%ರಷ್ಟು ಕೊಡುಗೆ ನೀಡುತ್ತದೆ. ಸರ್ಕಾರ ವಾರ್ಷಿಕ 2,500 ಕೋಟಿ ರೂ. ಎನ್ಪಿಎಸ್ ನಿಧಿಗೆ ಕೊಡುಗೆ ನೀಡುತ್ತಿದೆ. ಕರ್ನಾಟಕದಲ್ಲಿ 2006ರಲ್ಲಿ ಎನ್ಪಿಎಸ್ ಜಾರಿಯಾದ ಬಳಿಕ ಸುಮಾರು 30,000 ಕೋಟಿ ರೂ. ಸಂಚಿತ ನಿಧಿ ಹೊಂದಿದೆ. ಇದರಲ್ಲಿ 60%ನ್ನು ನೌಕರರು ವಿತ್ ಡ್ರಾ ಮಾಡಬಹುದಾಗಿದೆ. ಉಳಿದ 40%ನ್ನು ವರ್ಷಾಸನದ ಮೇಲೆ ವ್ಯಯಿಸಲಾಗುತ್ತದೆ.

ಇತ್ತ, ಕೇಂದ್ರ ಸರ್ಕಾರ ನೌಕರರ ಪ್ರಬಲ ವಿರೋಧದ ಹಿನ್ನೆಲೆಯಲ್ಲಿ ಎನ್ಪಿಎಸ್ ಬದಲು ಯುಪಿಎಸ್ ಜಾರಿಗೆ ತರಲು ನಿರ್ಧರಿಸಿದೆ. ಅದರಂತೆ, ಏಪ್ರಿಲ್ 2025ರಿಂದ ಯುಪಿಎಸ್ ಜಾರಿಯಾಗಲಿದೆ. ಯುಪಿಎಸ್ನಡಿ 25 ವರ್ಷ ಸೇವೆ ಸಲ್ಲಿಸಿದ ಸರ್ಕಾರಿ ನೌಕರರು ತಾವು ನಿವೃತ್ತಿಯಾಗುವ 12 ತಿಂಗಳಲ್ಲಿ ಪಡೆದ ಸರಾಸರಿ ಮೂಲ ವೇತನದ 50%ರಷ್ಟು ಖಾತ್ರಿ ಪಿಂಚಣಿಯನ್ನು ಪಡೆಯಲಿದ್ದಾರೆ. ಕನಿಷ್ಠ 10 ವರ್ಷ ಸೇವೆಯಲ್ಲಿರುವ ಸರ್ಕಾರಿ ನೌಕರರಿಗೆ ಮಾಸಿಕ 10,000 ರೂ. ಕನಿಷ್ಠ ಪಿಂಚಣಿ ಸಿಗಲಿದೆ.

ಆರ್ಥಿಕ ಹೊರೆ:
ಹಳೆ ಪಿಂಚಣಿ ಯೋಜನೆಯನ್ನು ಅನುಷ್ಠಾನ ಮಾಡಿದರೆ ರಾಜ್ಯದ ಮೇಲೆ ಭಾರೀ ಆರ್ಥಿಕ ಹೊರೆ ಬೀಳಲಿದೆ. ಮಧ್ಯಮಾವಧಿ ವಿತ್ತೀಯ ವರದಿ ಕೂಡ ಒಪಿಎಸ್ಗೆ ಮರಳುವುದರಿಂದ ಉಂಟಾಗುವ ಆರ್ಥಿಕ ಸಂಕಷ್ಟದ ಬಗ್ಗೆ ಎಚ್ಚರಿಕೆ ನೀಡಿದೆ.

ಹಳೆಯ ಪಿಂಚಣಿ ಯೋಜನೆಗೆ ಮರಳುವುದರಿಂದ ಸರ್ಕಾರಕ್ಕೆ ಎನ್ಪಿಎಸ್ನಲ್ಲಿ ಭರಿಸುತ್ತಿರುವ ವೆಚ್ಚದ 4.5 ಪಟ್ಟು ಹೆಚ್ಚಿನ ಆರ್ಥಿಕ ಹೊರೆಯಾಗಲಿದೆ ಎಂದು ಆರ್ಬಿಐ ಕೂಡ ತನ್ನ ವರದಿಯಲ್ಲಿ ಹೇಳಿದೆ. ಆದ್ದರಿಂದ ಹಳೆ ಪಿಂಚಣಿ ಯೋಜನೆಗೆ ಮರಳುವುದು ದೀರ್ಘಾವಧಿಯಲ್ಲಿ ರಾಜ್ಯದ ಹಣಕಾಸಿನ ಮೇಲೆ ಭಾರಿ ಪೆಟ್ಟು ಬೀಳಲಿದೆ ಹಾಗೂ ಇದರಿಂದ ಕಲ್ಯಾಣ ಕಾರ್ಯಕ್ರಮಗಳ ಮತ್ತು ಅಭಿವೃದ್ಧಿ ವೆಚ್ಚದ ಹಂಚಿಕೆಯು ಕಡಿಮೆಯಾಗಲಿದೆ ಎಂಬ ಎಚ್ಚರಿಕೆ ನೀಡಿದೆ.

ರಾಜ್ಯ ಸರ್ಕಾರ ಒಪಿಎಸ್ ಮತ್ತು ಎನ್ಪಿಎಸ್ ಬದಲಿಗೆ ಯುಪಿಎಸ್ ಜಾರಿ ಬಗ್ಗೆ ಸಂದಿಗ್ದತೆಯಲ್ಲಿದೆ. ಆರ್ಥಿಕ ಇಲಾಖೆಯೂ ಯುಪಿಎಸ್ ಪರ ಒಲವು ಹೊಂದಿದೆ. ರಾಜ್ಯದಲ್ಲಿ ಯುಪಿಎಸ್ ಅಳವಡಿಕೆಯಿಂದ ಸುಮಾರು 1,500 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಎನ್ಪಿಎಸ್, ಒಪಿಎಸ್ ಅಥವಾ ಯುಪಿಎಸ್ ಜಾರಿಯಿಂದ ರಾಜ್ಯದ ಸುಮಾರು 5.26 ಲಕ್ಷ ಸರ್ಕಾರಿ ನೌಕರರ ಮೇಲೆ ಪ್ರಭಾವ ಬೀರಲಿದೆ. ಸುಮಾರು 4.5 ಲಕ್ಷ ಪಿಂಚಣಿದಾರರು ರಾಜ್ಯದಲ್ಲಿದ್ದಾರೆ. 2024-25 ಸಾಲಿನಲ್ಲಿ ರಾಜ್ಯ ಸರ್ಕಾರ 80,434 ಕೋಟಿ ರೂ. ಸರ್ಕಾರಿ ನೌಕರರ ವೇತನಕ್ಕೆ ವ್ಯಯಿಸುತ್ತಿದೆ. 32,355 ಕೋಟಿ ರೂ. ಪಿಂಚಣಿಗೆ ವೆಚ್ಚ ಮಾಡುತ್ತಿದೆ. ಯುಪಿಎಸ್ ರದ್ದು ಮಾಡಿದರೆ ಪಿಂಚಣಿ ವೆಚ್ಚ 4 ಪಟ್ಟು ಹೆಚ್ಚಾಗಲಿದೆ.

ಒಂದಷ್ಟು ಉದ್ಯೋಗಿಗಳು ಒಪಿಎಸ್ ವ್ಯಾಪ್ತಿಗೆ:
ಇತ್ತ ರಾಜ್ಯ ಸರ್ಕಾರ ಒಂದಷ್ಟು ಉದ್ಯೋಗಿಗಳನ್ನು ಒಪಿಎಸ್ ವ್ಯಾಪ್ತಿಗೆ ಸೇರಿಸಿದೆ. ಅಂದಾಜು 11,300 ಸರ್ಕಾರಿ ಉದ್ಯೋಗಿಗಳನ್ನು ಒಪಿಎಸ್ ವ್ಯಾಪ್ತಿಗೆ ಸೇರ್ಪಡೆಗೊಳಿಸಿದೆ. ಎನ್ಪಿಎಸ್ ಜಾರಿಯಾದ ಏಪ್ರಿಲ್ 1, 2006ಕ್ಕೂ ಮುನ್ನ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದ್ದು, ಆದರೆ ನಂತರ ಉದ್ಯೋಗಕ್ಕೆ ಸೇರ್ಪಡೆಗೊಂಡ ಸರ್ಕಾರಿ ನೌಕರರನ್ನು ಒಪಿಎಸ್ ವ್ಯಾಪ್ತಿಗೆ ಸೇರ್ಪಡೆಗೊಳಿಸಿ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಆ ಮೂಲಕ ಅಂದಾಜು 11,300 ಸರ್ಕಾರಿ ಉದ್ಯೋಗಿಗಳು ಒಪಿಎಸ್ಗೆ ಸೇರ್ಪಡೆಯಾಗಿದ್ದಾರೆ. 2024ರ ಜನವರಿಯಲ್ಲಿ ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿತ್ತು.

ಸಮಿತಿ ಅಧ್ಯಯನ :
ರಾಜ್ಯದಲ್ಲಿ ಜಾರಿಯಲ್ಲಿರುವ ರಾಷ್ಟ್ರೀಯ ಪಿಂಚಣಿ ಯೋಜನೆಯ ಬದಲಾಗಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಮಾಡುವ ಸಾಧ್ಯತೆಗಳ ಕುರಿತು ಪರಿಶೀಲಿಸಲು ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ಪುನರಚನೆ ಮಾಡಲಾಗಿದೆ. 2018, ಡಿಸೆಂಬರ್ 11 ಮತ್ತು 2023 ಮಾರ್ಚ್ 1ರಲ್ಲಿ ಸರ್ಕಾರ ಈ ಬಗ್ಗೆ ಸಮಿತಿ ರಚನೆ ಮಾಡಿ ಆದೇಶಿಸಿತ್ತು. ಈ ಸಮಿತಿಯನ್ನು 2024ರ ಆಗಸ್ಟ್ 16ರಲ್ಲಿ ಪುನರ್ ರಚಿಸಿ ಕಾಂಗ್ರೆಸ್ ಸರ್ಕಾರ ಆದೇಶಿಸಿತ್ತು. ಈ ಸಮಿತಿಗೆ ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲ.

ಈ ಸಮಿತಿಯು ಈಗಾಗಲೇ ಸುಮಾರು ಮೂರು ಸಭೆಗಳನ್ನು ನಡೆಸಿದೆ. ರಾಜಸ್ಥಾನ, ಛತ್ತೀಸ್ಘಡ, ಪಂಜಾಬ್, ಹಿಮಾಚಲ ಪ್ರದೇಶದಲ್ಲಿ ಈಗಾಗಲೇ ಎನ್ಪಿಎಸ್ ರದ್ದು ಮಾಡಿ ಒಪಿಎಸ್ಗೆ ಮರಳಲಾಗಿದೆ. ಈ ರಾಜ್ಯಗಳಿಗೆ ತೆರಳಿ ಅಧ್ಯಯನ ನಡೆಸಲು ಒಂದು ತಂಡವನ್ನೂ ರಚಿಸಲಾಗಿದೆ. ಸಮಿತಿಯು ಅಧ್ಯಯನ ನಡೆಸುತ್ತಿದ್ದು, ಒಪಿಎಸ್ ಜಾರಿಯ ಸಾಧ್ಯತೆ, ಆರ್ಥಿಕ ಹೊರೆ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ಪರಿಶೀಲಿಸುತ್ತಿದೆ ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ.

RELATED ARTICLES

Latest News