ತುಮಕೂರು,ಜ.22– ಕೆಲ ಮೈಕ್ರೊ ಫೈನಾನ್ಸ್ ನವರು ನಿಯಮಉಲ್ಲಂಘನೆ ಮಾಡಿ ತಪ್ಪು ಮಾಡುತ್ತಿದ್ದಾರೆ. ಈಗಾಗಲೇ ಹಲವು ಕಡೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದೇವೆ. ಮೈಕ್ರೊ ಫೈನಾನ್ಸ್ ನ ಕಿರುಕುಳವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದ್ದಾರೆ.
ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ನವರಿಂದ ಸಾರ್ವಜನಿಕರಿಗೆ ಕಿರುಕುಳ ವಿಚಾರ ಗಂಭೀರವಾಗಿ ಪರಿಗಣಿಸಿದ್ದು, ಯಾರೇ ಸಂತ್ರಸ್ತರು ದೂರು ಕೊಟ್ಟರೆ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಕೆಲ ಮೈಕ್ರೋ ಫೈನಾನ್ಸ್ ನವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಇದನ್ನು ತಡೆಯಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇವೆ. ಪರವಾನಗಿ ಇಲ್ಲದ ಹಣಕಾಸು ಸಂಸ್ಥೆಗಳ ಬಗ್ಗೆ ಸರ್ವೇ ಮಾಡಬೇಕಿದೆ ಎಂದರು.
ಕಾರಣಾಂತರಗಳಿಂದ ನಿನ್ನೆ ನಡೆದ ಶ್ರೀ ಶಿವಕುಮಾರ ಸ್ವಾಮೀಜಿಗಳ ಸಂಸರಣೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಇಂದು ಶ್ರೀಮಠಕ್ಕೆ ಭೇಟಿ ನೀಡಿ ಗದ್ದುಗೆಗೆ ಪೂಜೆ ಸಲ್ಲಿಸಲಾಗಿದೆ. ಶ್ರೀಗಳ ಸಾಧನೆ ಇಡೀ ಜಗತ್ತಿಗೆ ಗೊತ್ತಿದೆ. ಅವರನ್ನು ನಾವು ಸರಿಸಬೇಕು. ಪುಣ್ಯ ಸರಣೆ ದಿನವನ್ನು ದಾಸೋಹ ದಿನವನ್ನಾಗಿ ಅರ್ಥಪೂರ್ಣವಾಗಿ ಆಚರಣೆ ಮಾಡಲು ಸರ್ಕಾರದ ಹಂತದಲ್ಲಿ ಚರ್ಚೆ ಮಾಡಲಾಗುವುದು ಎಂದರು.
ಶ್ರೀ ಶಿವಕುಮಾರ ಸ್ವಾಮೀಜಿಗಳ ಹುಟ್ಟೂರಾದ ವೀರಾಪುರದಲ್ಲಿ ಪ್ರತಿಮೆ ನಿರ್ಮಾಣ ವಿಚಾರ ಮಾತನಾಡಿದ ಅವರು, ಮುಖ್ಯಮಂತ್ರಿ ಜೊತೆ ಮಾತನಾಡಿ ಬಜೆಟ್ನಲ್ಲಿ ಹಣವನ್ನು ಮೀಸಲಿಡಲಾಗುವುದು ಎಂದು ತಿಳಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತ್ಯಾಗದ ಮಾತಿನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ತ್ಯಾಗ ಮಾಡುವ ಮನೋಭಾವದ ಬಗ್ಗೆ ಹೇಳಿದ ಮಾತು ಅರ್ಥ ಆಗಿಲ್ಲ. ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಕಾಂಗ್ರೆಸ್ನವರು ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ ಮಾಡಿದ್ದಾರೆ. ಅಂತಹ ತ್ಯಾಗ, ಬಲಿದಾನ ಈಗಿನ ಆಧುನಿಕ ಸಮಾಜದಲ್ಲಿ ಕಡಿಮೆಯಾಗಿದೆ ಎಂಬ ಅರ್ಥದಲ್ಲಿ ಹೇಳಿರಬಹುದೆಂದ ಅವರು, ರಾಜಕೀಯ ವಿಚಾರದ ಮಾತನಾಡುವುದಿಲ್ಲ ಎಂದರು.