ನವದೆಹಲಿ, ಜ.22– ಭಾರತ ತಂಡವು ಮುಂಬರುವ ಚಾಂಪಿಯನ್ಸ್ ಟ್ರೋಫಿ ಗೆಲ್ಲಬೇಕಾದರೆ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ ಪಾತ್ರ ನಿರ್ಣಾಯಕವಾಗಲಿದೆ ಎಂದು ಮಾಜಿ ಕ್ರಿಕೆಟಿಗ ಮೊಹಮದ್ ಕೈಫ್ ಹೇಳಿದ್ದಾರೆ.
ಈ ದಿಗ್ಗಜರು ಔಟ್ ಆಫ್ ಫಾರ್ಮ್ ನಲ್ಲಿದ್ದಾರೆ ಎಂದು ಅಭಿಮಾನಿಗಳು ಚಿಂತಿಸಬೇಕಾಗಿಲ್ಲ ಏಕೆಂದರೆ ಈ ಇಬ್ಬರು ಆಟಗಾರರ ಐಸಿಸಿ ಟೂರ್ನಿಗಳ ದಾಖಲೆಗಳು ಉತ್ತಮವಾಗಿದೆ ಎಂದು ಕೈಫ್ ಹೇಳಿದ್ದಾರೆ.
2023ರಲ್ಲಿ ತವರಿನ ಅಂಗಳದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಹಾಗೂ 2024ರ ಟ್ವೆಂಟಿ-20 ಕ್ರಿಕೆಟ್ ನಲ್ಲಿ ವಿರಾಟ್ ಹಾಗೂ ರೋಹಿತ್ ಯಾವ ರೀತಿ ಪ್ರದರ್ಶನ ನೀಡಿ ತಂಡವನ್ನು ರನ್ನರ್ ಅಪ್ ಹಾಗೂ ಚಾಂಪಿಯನ್ ಮಟ್ಟಕ್ಕೆ ಏರಿಸಿದ್ದಾರೋ ಅದೇ ರೀತಿ ಪ್ರದರ್ಶನ ಚಾಂಪಿಯನ್ಸ್ ಟ್ರೋಫಿಯಲ್ಲೂ ತೋರಿದರೆ ಮತ್ತೊಂದು ಐಸಿಸಿ ಮಹಾಕದನ ಗೆಲ್ಲಬಹುದು ಎಂದು ಕೈಫ್ ತಿಳಿಸಿದ್ದಾರೆ.
`ಭಾರತ ತಂಡವು ದಿಗ್ಗಜರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೋಸ್ಕರ ಚಾಂಪಿಯನ್ ಟ್ರೋಫಿ ಗೆಲ್ಲಬೇಕು. ಏಕೆಂದರೆ ರೋಹಿತ್ (37) ಹಾಗೂ ವಿರಾಟ್ (36) ಅನುಭವಿ ಆಟಗಾರರಾಗಿದ್ದು , ಈ ಆಟಗಾರರಲ್ಲಿ ಸುದೀರ್ಘ ಕಾಲದವರೆಗೆ ಕ್ರಿಕೆಟ್ ಆಡಲು ಸಾಧ್ಯವಿಲ್ಲ’ ಎಂದು ಖ್ಯಾತ ಕ್ರಿಕೆಟ್ ವಿಶ್ಲೇಷಕ ಮೊಹಮದ್ಕೈಫ್ ತಿಳಿಸಿದ್ದಾರೆ.