Friday, January 24, 2025
Homeರಾಜಕೀಯ | Politicsರೆಡ್ಡಿ-ರಾಮುಲು ಕದನ, ರಾಜ್ಯ ಬಿಜೆಪಿಯಲ್ಲಿ ಕಂಪನ

ರೆಡ್ಡಿ-ರಾಮುಲು ಕದನ, ರಾಜ್ಯ ಬಿಜೆಪಿಯಲ್ಲಿ ಕಂಪನ

Reddy-Ramulu fight, tremors in the state BJP

ಬೆಂಗಳೂರು,ಜ.23- ಒಂದು ಕಾಲದಲ್ಲಿ ಒಂದೇ ದೇಹ ಎರಡು ಆತ ಎಂಬಂತಿದ್ದು, ರಾಜ್ಯದಲ್ಲಿ ಬಿಜೆಪಿಯನ್ನು ಭದ್ರಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜನಾರ್ಧನ ರೆಡ್ಡಿ-ಶ್ರೀರಾಮುಲು ನಡುವಿನ ಸಂಘರ್ಷ ಬಿಜೆಪಿ ಬುಡವನ್ನೇ ಅಲುಗಾಡಿಸುವಂತೆ ಮಾಡಿದೆ. ಮೊದಲೇ ಬಸನಗೌಡ ಪಾಟೀಲ್‌ ಯತ್ನಾಳ್‌- ವಿಜಯೇಂದ್ರ ನಡುವಿನ ಕಿತ್ತಾಟದಿಂದ ಮನೆಯೊಂದು ಮೂರು ಬಾಗಿಲು ಎಂಬಂತಿದ್ದ ಬಿಜೆಪಿಗೆ ಹೊಸದಾಗಿ ಶ್ರೀರಾಮುಲು- ರೆಡ್ಡಿ ಕದನ ಪಕ್ಷದೊಳಗೆ ಮತ್ತೊಂದು ಬಣ ಸೃಷ್ಟಿಯಾಗುವಂತೆ ಮಾಡಿದೆ.

ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡ ನಂತರ ರಾಜಕಾರಣದಲ್ಲಿ ಇದ್ದೂ ಇಲ್ಲದಂತೆ ತೆರೆಮರೆಗೆ ಸರಿದಿದ್ದ ಒಂದು ಕಾಲದ ಪ್ರಭಾವಿ ಪರಿಶಿಷ್ಟ ಪಂಗಡಗಳ ವಾಲೀಕಿ ಸಮುದಾಯದ ಪ್ರಭಾವಿ ನಾಯಕರಾಗಿದ್ದ ರಾಮುಲು ಇದ್ದಕ್ಕಿದ್ದಂತೆ ಸಹೋದರನಂತಿದ್ದ ಜನಾರ್ಧನ ರೆಡ್ಡಿ ವಿರುದ್ಧ ಏಕಾಏಕಿ ಸಿಡಿದಿರುವುದು ಕಮಲದೊಳಗೆ ಕಂಪನ ಮೂಡಿಸಿದೆ.

ಒಂದು ಕಾಲದಲ್ಲಿ ರೈಲ್ವೆ ಇಲಾಖೆಯಲ್ಲಿ ಕಾರ್ಮಿಕನಾಗಿದ್ದ ಶ್ರೀರಾಮುಲು ಅವರನ್ನು ರಾಜಕಾರಣಕ್ಕೆ ಕರೆತಂದಿದ್ದೇ ಅಂದು ಗಣಿಧಣಿ ಎಂದೇ ಬಿಂಬಿತರಾಗಿದ್ದ ಜನಾರ್ಧನ ರೆಡ್ಡಿ. ಬಳ್ಳಾರಿ ಸುತ್ತಮುತ್ತ ತನ್ನ ವ್ಯಾಪಾರ ವಹಿವಾಟು ನಡೆಸಲು ಹಾಗೂ ಜಿಲ್ಲೆಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಲು ಬೇಕಾಗಿದ್ದೇ ರಾಮುಲು. 2008ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌‍ನ ವಚನಭ್ರಷ್ಟ ಆರೋಪದ ಮೇಲೆ ಚುನಾವಣೆಗೆ ಹೋದ ಬಿಜೆಪಿ ಮೊದಲ ಬಾರಿಗೆ ರಾಜ್ಯದಲ್ಲಿ 110 ಸ್ಥಾನಗಳನ್ನು ಗೆಲ್ಲುವಲ್ಲಿ ಶ್ರೀರಾಮುಲು-ರೆಡ್ಡಿ ಪಾತ್ರ ಪ್ರಮುಖವಾಗಿತ್ತು.

ಬಳ್ಳಾರಿ-ರಾಯಚೂರು, ಕೊಪ್ಪಳ , ಗದಗ ಸೇರಿದಂತೆ ಬಹುತೇಕ ಉತ್ತರ ಕರ್ನಾಟಕದಲ್ಲಿ ಬಿಜೆಪಿಯು ಯಡಿಯೂರಪ್ಪನವರ ಪ್ರಭಾವದ ಜೊತೆಗೆ ರೆಡ್ಡಿ-ಜುಗಲ್‌ಬಂಧಿಯಿಂದ ಸಾಕಷ್ಟು ಸ್ಥಾನಗಳನ್ನು ತೆಗೆದುಕೊಂಡಿತ್ತು. ಆದರೆ ಯಾವಾಗ ಜನಾರ್ಧನ ರೆಡ್ಡಿಯವರನ್ನು ಅಕ್ರಮ ಗಣಿ ಆರೋಪದ ಮೇಲೆ ಸಿಬಿಐ ಬಂಧಿಸಿ ಜೈಲ್ಲಿಗಟ್ಟಿತ್ತೋ ಅಂದಿನಿಂದ ಶ್ರೀರಾಮುಲುಗೆ ಭಾರೀ ಹಿನ್ನಡೆಯಾಯಿತು. ಕೊನೆಗೆ ಬಿಜೆಪಿ ತೊರೆದು ತಮದೇ ಬಿಆರ್‌ಎಸ್‌‍ ಎಂಬ ಸ್ವಂತ ಪಕ್ಷ ಕಟ್ಟಿದರೂ ಬಹುದಿನ ಅಸ್ತಿತ್ವದಲ್ಲಿ ಉಳಿಯಲಿಲ್ಲ. ಅದೇ ಕಾಲಕ್ಕೆ ಯಡಿಯೂರಪ್ಪ ಕೂಡ ಕೆಜೆಪಿ ಕಟ್ಟಿ ಕೈ ಸುಟ್ಟುಕೊಂಡಿದ್ದರು.

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಮನ್ನಣೆ ಇಲ್ಲ ಎಂಬುದು ಅರಿವಾಗುತ್ತಿದ್ದಂತೆ ಕೆಜೆಪಿ-ಬಿಆರ್‌ಎಸ್‌‍ ಬಿಜೆಪಿಯೊಂದಿಗೆ ವಿಲೀನವಾದವು. ಇದೇ ಕಾಲಕ್ಕೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜರ್ನಾಧನ ರೆಡ್ಡಿ ಕೆಕೆಪಿಪಿ ಸ್ಥಾನ ಮಾಡಿ ಬಳಿಕ ಬಿಜೆಪಿಗೆ ಬಂದರು. ಅದೇ ಸಂದರ್ಭದಲ್ಲಿ ದಶಕಗಳ ನಂತರ ಸುಪ್ರೀಂಕೋರ್ಟ್‌ ರೆಡ್ಡಿಗೆ ತಮ ತವರು ಜಿಲ್ಲೆ ಬಳ್ಳಾರಿಗೆ ತೆರಳಲು ಅವಶಕಾಡ ನೀಡಿತು.

ದಿನ ಕಳೆದಂತೆ ರೆಡ್ಡಿ ಜಿಲ್ಲೆಯಲ್ಲಿ ಮೊದಲಿನ ಪ್ರಾಬಲ್ಯ ಸಾಧಿಸಿ ವಿಜಯೇಂದ್ರ ಜೊತೆ ಸಂಪರ್ಕ ಬೆಳೆಸುತ್ತಿದ್ದಂತೆ ಶ್ರೀರಾಮುಲು ಮತ್ತಷ್ಟು ಮೂಲೆಗುಂಪಾದರು. ಇದೇ ವೇಳೆ ಸಂಡೂರು ಉಪಚುನಾವಣೆಯಲ್ಲಿ ಆಕಾಂಕ್ಷಿಯಾಗಿದ್ದ ರಾಮುಲುಗೆ ಟಿಕೆಟ್‌ ತಪ್ಪಿಸಿ ರೆಡ್ಡಿ ಬಂಗಾರು ಹನುಮಂತುಗೆ ಟಿಕೆಟ್‌ ಕೊಡಿಸುತ್ತಿದ್ದಂತೆ ರಾಮುಲು ಕಣ್ಣು ಕೆಂಪಾಗಿತ್ತು.

ಪ್ರಚಾರಕ್ಕೆ ಧುಮುಕಿದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಅಭ್ಯರ್ಥಿ ಪರ ಮತಯಾಚನೆ ಮಾಡಿದ್ದರು. ತಮೆಲ್ಲ ಹಿನ್ನಡೆಗೆ ಒಂದು ಕಾಲದ ಗೆಳೆಯ ರೆಡ್ಡಿ ಎಂಬುದು ಅವರ ಆರೋಪವಾಗಿತ್ತು. ಬಹುದಿನಗಳಿಂದ ಮನಸ್ಸಿನಲ್ಲೇ ಹುದುಗಿಸಿಟ್ಟಿದ್ದ ಆಕ್ರೋಶವನ್ನು ಬುಧವಾರ ರಾಮುಲು ಹೊರ ಹಾಕಿದ್ದಾರೆ. ಈಗ ಅವರ ನಡೆ ಸಾಕಷ್ಟು ಕುತೂಹಲ ಕೆರಳಿಸಿದೆ.

ಏನಾಯ್ತು ದೋಸ್ತ್‌ಗಳಿಗೆ?:
ಹಲವು ವರ್ಷಗಳ ಬಳಿಕ ಜನಾರ್ಧನ ರೆಡ್ಡಿ ಅವರು ಜೈಲಿನ ಬಿಡುಗಡೆಯಾಗಿ ಹೊರ ಬಂದಾಗ ಬಿಜೆಪಿ ಸೇರ್ಪಡೆಗೆ ಶ್ರೀರಾಮುಲು ಅಗತ್ಯ ಸಹಕಾರ ನೀಡಲಿಲ್ಲ ಎನ್ನಲಾಗಿದೆ. ಜನಾಧರ್ನ ರೆಡ್ಡಿಯವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ಹೊಸ ಪಕ್ಷ ಕಟ್ಟಿದಾಗ ಅದಕ್ಕೆ ಶ್ರೀರಾಮುಲು ಬೆಂಬಲಿಸಿಲ್ಲ. ಮಾತ್ರವಲ್ಲದೇ, ಗೆಳೆಯನ ಜತೆಗೆ ಹೊಸ ಪಕ್ಷ ಸೇರಲಿಲಿಲ್ಲ. ಇದು ಬೇಸರಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಚುನಾವಣೆ ಬಳ್ಳಾರಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಫಲಿತಾಂಶಕ್ಕೂ ಮುನ್ನವೇ ಶ್ರೀರಾಮುಲು ಚುನಾವಣೆ ಸೋಲಿನ ಬಗ್ಗೆ ಜನಾರ್ದನ ರೆಡ್ಡಿ ಮಾತನಾಡಿದ್ದರು. ಸಂಡೂರು ಉಪ ಚುನಾವಣೆಯಲ್ಲಿ ಶ್ರೀರಾಮುಲು ಸ್ಪರ್ಧಿಸಬೇಕು ಎಂದು ಪ್ರಯತ್ನಿಸುತ್ತಿದ್ದಾಗ ಜನಾರ್ದನ ರೆಡ್ಡಿಯವರು ತಮ ಆಪ್ತ ಬಂಗಾರು ಹನುಮಂತುನಿಗೆ ಬಿಜೆಪಿ ಟಿಕೆಟ್‌ ಕೊಡಿಸಿದ್ದರು. ಸದ್ಯ ಚುನಾವಣೆ ಸಂಡೂರು ಉಪ ಚುನಾವಣೆ ಸೋಲಿಗೆ ಶ್ರೀರಾಮುಲು ಕಾರಣ ಎಂಬಂತೆ ಮಾತುಗಳು ಕೇಳಿ ಬರುತ್ತಿದ್ದು, ಇದಕ್ಕೆ ಜನಾರ್ದನ ರೆಡ್ಡಿವರು ಕಾರಣ ಎನ್ನಲಾಗಿದೆ.

RELATED ARTICLES

Latest News